ಕುಂದಾಪುರದಲ್ಲಿ ನಾರಾಯಣಗುರು ಜಯಂತಿ ಆಚರಣೆ

ಕುಂದಾಪುರ, ಸೆ.10: ಸಮಾಜದಲ್ಲಿನ ಅಸ್ಪೃಶ್ಯತೆ, ಬಾಲ್ಯ ವಿವಾಹ, ಶೋಷಣೆ, ಮೂಢನಂಬಿಕೆಯಂತಹ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಿ, ಸಮಾಜದ ಸುಧಾರಣೆಗಾಗಿ ಶ್ರಮಿಸಿದ ದಾರ್ಶನಿಕರು ಶ್ರೀನಾರಾಯಣ ಗುರುಗಳಾಗಿದ್ದರು. ಜಾತಿ ವೈಷಮ್ಯ ಎಂಬ ಅಜ್ಞಾನವನ್ನು ತೊಡೆದು ಹಾಕಿ ಶಿಕ್ಷಣದ ಮೂಲಕ ಸಾಮಾಜಿಕ ಕ್ರಾಂತಿಯನ್ನು, ಶೋಷಿತ ಮತ್ತು ಹಿಂದುಳಿದ ವರ್ಗಗಳಿಗೆ ಅಹಿಂಸಾತ್ಮಕ ಚಿಂತನೆಗಳ ಮೂಲಕ ಸಾಮಾಜಿಕ ಸಮಾನತೆಯನ್ನು ದೊರಕಿಸಿ ಕೊಟ್ಟ ಮಹಾನ್ ಸಂತರು ಎಂದು ಕುಂದಾಪುರ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಹೇಳಿದ್ದಾರೆ.
ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ, ತಾಲೂಕು ಆಡಳಿತ, ತಾಲೂಕು ಪಂಚಾಯತ್‌ಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಕುಂದಾಪುರದ ಮಿನಿ ವಿಧಾನಸೌಧದಲ್ಲಿ ಆಯೋಜಿಸಲಾದ ಕುಂದಾಪುರ ತಾಲೂಕು ಮಟ್ಟದ ಬ್ರಹ್ಮಶ್ರೀ ನಾರಾಯಣಗುರು ಅವರ 168ನೆ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಕಾರ್ಯಕ್ರಮವನ್ನು ಕುಂದಾಪುರ ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ ಉದ್ಘಾಟಿಸಿದರು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ವರ್ಣೆಕರ್, ಬಿಲ್ಲವ ಮುಖಂಡರಾದ ಮಂಜು ಬಿಲ್ಲವ, ರಾಜು ಪೂಜಾರಿ ಜಡ್ಕಲ್ ಮಾತನಾಡಿದರು.
ಕುಂದಾಪುರ ಡಿವೈಎಸ್ಪಿಶ್ರೀಕಾಂತ್ ಕೆ., ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಎನ್., ಉಪತಹಶೀಲ್ದಾರ್ ಚಂದ್ರಶೇಖರ್, ಬಿಲ್ಲವ ಸಮಾಜ ಸೇವಾ ಸಂಘದ ಕಾರ್ಯದರ್ಶಿ ಗಣೇಶ್ ವಿಠಲವಾಡಿ, ಉಪಾಧ್ಯಕ್ಷ ಭಾಸ್ಕರ ಬಿಲ್ಲವ, ಮಹಿಳಾ ಘಟಕಾಧ್ಯಕ್ಷೆ ಸುಮನಾ ಬಿದ್ಕಲ್ಕಟ್ಟೆ, ಹೇಮಾವತಿ, ಜಾನಕಿ ಬಿಲ್ಲವ, ಶೈಕ್ಷಣಿಕ ಹಾಗೂ ದತ್ತಿ ಸಂಸ್ಥೆಯ ಕಾರ್ಯದರ್ಶಿ ಭಾಸ್ಕರ ವಿಠಲವಾಡಿ, ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಅಜಿತ್, ಪ್ರಮುಖರಾದ ದಿವಾಕರ ಕಡ್ಗಿಮನೆ, ರಾಜೇಶ್ ಕಡ್ಗಿಮನೆ, ಆನಂದ ಕೊಡೇರಿ, ಯೋಗೀಶ್ ಕೋಡಿ ಉಪಸ್ಥಿತರಿ ದ್ದರು. ಉಪತಹಶೀಲ್ದಾರ್ ವಿನಯ್ ಸ್ವಾಗತಿಸಿ, ಕಾರ್ಯ ಕ್ರಮ ನಿರೂಪಿಸಿದರು.







