ಚಿಂತಕ, ವಿಚಾರವಾದಿ ಪ್ರೊ.ಬಿ.ಗಂಗಾಧರಮೂರ್ತಿ ನಿಧನ

ಪ್ರೊ.ಬಿ.ಗಂಗಾಧರಮೂರ್ತಿ
ಬೆಂಗಳೂರು, ಸೆ. 10: ಲೇಖಕ, ವಿಚಾರವಾದಿ, ಬಂಡಾಯ ಹಾಗೂ ದಲಿತ ಚಳವಳಿಯ ಮುಂಚೂಣಿ ನಾಯಕರೂ ಆಗಿದ್ದ ಸ್ನೇಹಿತರ ವಲಯದಲ್ಲಿ ಪ್ರೊ.ಬಿಜಿಎಂ ಎಂದೇ ಚಿರಪರಿಚಿತರಾಗಿದ್ದ ಪ್ರೊ.ಬಿ.ಗಂಗಾಧರ ಮೂರ್ತಿ(77)ಅವರು ತೀವ್ರ ಹೃದಯಾಘಾತದಿಂದ ಶನಿವಾರ ನಿಧನರಾಗಿದ್ದಾರೆ.
ಹಾಸನ ಜಿಲ್ಲೆಯ ಹೊಳೆನರಸೀಪುರ ಮೂಲದ ಗಂಗಾಧರ ಮೂರ್ತಿಯವರು ಪತ್ನಿ, ಮೂವರು ಮಕ್ಕಳು ಸೇರಿದಂತೆ ಅಪಾರ ಸಂಖ್ಯೆಯ ಬಂಧು-ಮಿತ್ರರು, ಒಡನಾಡಿಗಳು ಹಾಗೂ ಶಿಷ್ಯ ಬಳಗವನ್ನು ಶ್ರೀಯುತರು ಅಗಲಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನ ನ್ಯಾಷನಲ್ ಕಾಲೇಜಿನಲ್ಲಿ ಆಂಗ್ಲ ಪ್ರೊಫೆಸರ್ ಆಗಿ ನಿವೃತ್ತರಾಗಿದ್ದರು.
ನಾಲ್ಕು ದಶಕಗಳಿಂದ ದಲಿತ, ಬಂಡಾಯ ಚಳವಳಿ, ಭಾರತ ಜ್ಞಾನ ವಿಜ್ಞಾನ ಸಮಿತಿ, ವಿಚಾರವಾದಿ ಚಳವಳಿ ಸೇರಿದಂತೆ ಪ್ರಗತಿಪರ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಗಂಗಾಧರಮೂರ್ತಿ ಅವರು, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ‘ಟೀಚರ್' ಮಾಸಪತ್ರಿಕೆಗೆ ದಶಕಕ್ಕೂ ಹೆಚ್ಚು ಕಾಲದಿಂದ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು ಎಂದು ಗೊತ್ತಾಗಿದೆ.
ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದೇ ಖ್ಯಾತಿ ಪಡೆದಿರುವ ಗೌರಿಬಿದನೂರಿನ ವಿದುರಾಶ್ವತ್ಥದ ‘ಸ್ವಾತಂತ್ರ್ಯ ಸ್ಮಾರಕ'ವನ್ನು ರೂಪಿಸಿದ್ದು, ಅದರ ಹಿಂದೆ ಬಿಜಿಎಂ ಅವರ ಪರಿಶ್ರಮ ಹಾಗೂ ಬದ್ಧತೆ ಇದೆ. ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ ಚಿತ್ರಪಟ ಗ್ಯಾಲರಿ ಮತ್ತು ಥೀಮ್ ಗ್ರಂಥಾಲಯ ರೂಪಿಸಿದ್ದರು. ಸ್ವಾತಂತ್ರ್ಯ ಸಂಗ್ರಾಮದ ಹಲವು ಮುಖಗಳನ್ನು ಅನಾವರಣಗೊಳಿಸುವ ಆ ಸ್ಮಾರಕ ದೇಶದಲ್ಲೇ ಅಪರೂಪದ ಸ್ಮಾರಕವಾಗಿದೆ.
ಲೇಖಕರಾಗಿಯೂ ಗಮನ ಸೆಳೆದಿರುವ ಪ್ರೊ.ಗಂಗಾಧರಮೂರ್ತಿಯವರು ‘ಹೂ ಅರಳುವಂಥ ಮಣ್ಣು (ಕವನ ಸಂಕಲನ), ನಾಗಸಂದ್ರ ಭೂ ಆಕ್ರಮಣ ಚಳವಳಿ, ಭಾರತದ ಬೌದ್ಧಿಕ ದಾರಿದ್ರ್ಯ, ಭಾರತೀಯ ಸಮಾಜದ ಜಾತಿ ಲಕ್ಷಣ, ಅಂಬೇಡ್ಕರ್ ಮತ್ತು ಮುಸ್ಲಿಮರು ಅನುವಾದ ಕೃತಿಗಳು, ವಸಾಹತು ಪೂರ್ವ ಕಾಲದ ಜಾತಿ ಹೋರಾಟಗಳು, ಹಿಂದುತ್ವ ಮತ್ತು ದಲಿತರು, ಸೂಫಿ ಕಥಾಲೋಕ ಸೇರಿದಂತೆ ಹಲವು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.
ಗೌರಿಬಿದನೂರಿನ ಅವರ ನಿವಾಸದಲ್ಲಿ ನಾಳೆ(ಸೆ.11) ಬೆಳಗ್ಗೆ 8ಗಂಟೆಯಿಂದ 1ಗಂಟೆಯ ವರೆಗೆ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗುವುದು. ಆ ಬಳಿಕ ಗಂಗಾಧರ ಮೂರ್ತಿಯವರ ಇಚ್ಛೆಯಂತೆ ಬೆಂಗಳೂರಿನ ಆಸ್ಪತ್ರೆಗೆ ಮೃತದೇಹವನ್ನು ದಾನ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
---------------------------------------------------------------
ಗಂಗಾಧರ ಮೂರ್ತಿಯವರ ನಿಧನಕ್ಕೆ ಸಿದ್ದರಾಮಯ್ಯ ಅವರ ಸಂತಾಪ
'ಕನ್ನಡದ ಖ್ಯಾತ ಚಿಂತಕರೂ, ಬರಹಗಾರರಾದ ಪ್ರೊ.ಗಂಗಾಧರ ಮೂರ್ತಿಯವರು ಹೃದಯಾಘಾತದಿಂದ ನಮ್ಮನ್ನೆಲ್ಲಾ ಅಗಲಿರುವುದು ದುಃಖ ತಂದಿದೆ. ಇವರ ಅಗಲಿಕೆ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟ. ವಯೋಸಹಜ ಅರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಚೇತರಿಸಿಕೊಳ್ಳಬಹುದು ಎನ್ನುವ ವಿಶ್ವಾಸ ನನಗಿತ್ತು. ನಿನ್ನೆ ಮಧ್ಯಾಹ್ನದಿಂದ ಆರೋಗ್ಯದಲ್ಲಿ ಏರುಪೇರು ಆಗುತ್ತಿತ್ತು. ಆದರೆ ಇಷ್ಟು ಬೇಗ ನಮ್ಮನ್ನು ಅಗಲಬಹುದು ಎನ್ನಿಸಿರಲಿಲ್ಲ. ಇವರ ಕುಟುಂಬ ಮತ್ತು ಅಭಿಮಾನಿಗಳ ದುಃಖದಲ್ಲಿ ನಾನೂ ಭಾಗಿ ಆಗಿದ್ದೇನೆ' ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
-----------------------------------------------------
'ಸ್ವಾತಂತ್ರ್ಯದ ಹೋರಾಟದ ನೆನಪನ್ನು ಸ್ಪೂರ್ತಿದಾಯಕವಾಗಿಸುವ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಪ್ರಖರ ವಿಚಾರವಾದಿ, ದೇಶದ ಐಕ್ಯತೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಪ್ರೊ.ಬಿ ಗಂಗಾಧರ ಮೂರ್ತಿ ಅವರ ಅಗಲಿಕೆಯು ತೀರಾ ನೋವು ತರುವಂತಹ ಸಂಗತಿ ಸಾಹಿತ್ಯದ ಮೂಲಕ ಬಂಡಾಯ ಚಳುವಳಿಯ ಬೌದ್ಧಿಕ ಭಾಗವಾಗಿದ್ದ ಅವರಿಗೆ ನನ್ನ ಗೌರವಪೂರ್ಣ ನಮನಗಳು'
- ಎಚ್.ಸಿ ಮಹದೇವಪ್ಪ, ಮಾಜಿ ಸಚಿವರು
ಸ್ವಾತಂತ್ರ್ಯದ ಹೋರಾಟದ ನೆನಪನ್ನು ಸ್ಪೂರ್ತಿದಾಯಕವಾಗಿಸುವ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಪ್ರಖರ ವಿಚಾರವಾದಿ, ದೇಶದ ಐಕ್ಯತೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಪ್ರೊ.ಬಿ ಗಂಗಾಧರ ಮೂರ್ತಿ ಅವರ ಅಗಲಿಕೆಯು ತೀರಾ ನೋವು ತರುವಂತಹ ಸಂಗತಿ
— Dr H.C.Mahadevappa (@CMahadevappa) September 10, 2022
ಸಾಹಿತ್ಯದ ಮೂಲಕ ಬಂಡಾಯ ಚಳುವಳಿಯ ಬೌದ್ಧಿಕ ಭಾಗವಾಗಿದ್ದ ಅವರಿಗೆ ನನ್ನ ಗೌರವಪೂರ್ಣ ನಮನಗಳು pic.twitter.com/uA2rmqR1DQ







