ಮುರುಘಾಶ್ರೀ ಪ್ರಕರಣ: ನಿಷ್ಪಕ್ಷ ತನಿಖೆಗೆ ಒತ್ತಾಯಿಸಿ ಚಿತ್ರದುರ್ಗ ಡಿಸಿ ಕಚೇರಿ ಎದುರು ವಿವಿಧ ಸಂಘ ಸಂಸ್ಥೆಗಳಿಂದ ಧರಣಿ
ಸಿಬಿಐ ತನಿಖೆಗೆ ಆಗ್ರಹ

ಚಿತ್ರದುರ್ಗ, ಸೆ.10 ಅಪ್ರಾಪ್ತ ಇಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿ ಜೈಲು ಸೇರಿರುವ ಚಿತ್ರದುರ್ಗ ಮುರುಘಾಮಠದ ಡಾ.ಶಿವಮೂರ್ತಿ ಶರಣರ ವಿರುದ್ಧ ನಿಷ್ಪಕ್ಷ ತನಿಖೆ ನಡೆಸುವಂತೆ ಒತ್ತಾಯಿಸಿ ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ವಿವಿಧ ಸಂಘ ಸಂಸ್ಥೆಗಳು ಶನಿವಾರ ಒನಕೆ ಓಬವ್ವ ವೃತ್ತದಲ್ಲಿ ಧರಣಿ ನಡೆಸಿ ಜಿಲ್ಲಾಧಿಕಾರಿ ಕಚೇರಿಯ ತಹಶೀಲ್ದಾರ್ ಮೂಲಕ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿದವು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಮೈಸೂರಿನ ಒಡನಾಡಿ ಸಂಸ್ಥೆಯ ಮುಖ್ಯಸ್ಥ ಸ್ಟಾನ್ಲಿ, ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ನಮ್ಮ ಚಳವಳಿಯ ಬಾಗಿಲು ತೆರೆದಿದೆ. ಇಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಡಾ.ಶಿವಮೂರ್ತಿ ಮುರುಘಾಶರಣರ ತನಿಖೆಯಲ್ಲಿ ಯಾವುದೇ ಲೋಪವಾಗಬಾರದು. ನ್ಯಾಯಾಂಗದ ಉಸ್ತುವಾರಿಯಲ್ಲಿ ಸಿಬಿಐ ತನಿಖೆ ನಡೆಸಬೇಕು. ನಮ್ಮ ಬದ್ಧತೆ ಪರೀಕ್ಷಿಸುವ ಸಮಯ ಇದಾಗಿರುವುದರಿಂದ ಯಾರೂ ಧೃತಿಗೆಡುವುದು ಬೇಡ. ಎಷ್ಟೋ ಮಕ್ಕಳ ಗರ್ಭಪಾತವಾಗಿದೆ. ಎಲ್ಲವೂ ತನಿಖೆಯಾಗಬೇಕು. ಯಾರ ಧಮ್ಕಿ, ಬೆದರಿಕೆಗೂ ಹೆದರುವ ಅಗತ್ಯವಿಲ್ಲ. ಸಂತ್ರಸ್ತ ಇಬ್ಬರು ಬಾಲಕಿಯರ ಪರವಾಗಿ ನಿಲ್ಲೋಣ. ಬುದ್ಧ, ಬಸವ, ಅಂಬೇಡ್ಕರ್ ತತ್ವಗಳಿಗೆ ಎಲ್ಲಿಯೂ ಅಪಚಾರವಾಗಬಾರದೆಂದರೆ ಶ್ರೀಗಳ ವಿರುದ್ಧದ ತನಿಖೆ ನ್ಯಾಯಯುತವಾಗಿ ನಡೆಯಬೇಕು ಎಂದು ಒತ್ತಾಯಿಸಿದರು.
ಮೈಸೂರಿನ ಒಡನಾಡಿ ಸಂಸ್ಥೆಯ ಇನ್ನೋರ್ವ ಮುಖ್ಯಸ್ಥ ಪರಶು ಮಾತನಾಡಿ, ನಮ್ಮ ಹೋರಾಟ ಯಾರ ಪರ, ಯಾರ ವಿರುದ್ಧವೂ ಅಲ್ಲ. ಲೈಂಗಿಕ ಶೋಷಣೆಗೆ ಒಳಗಾಗಿರುವ ಇಬ್ಬರು ಬಾಲಕಿಯರಿಗೆ ನ್ಯಾಯ ಕೊಡಿಸಬೇಕೆಂಬುದು ನಮ್ಮ ಧ್ಯೇಯ. ಸ್ಥಳೀಯ ಪೊಲೀಸರಿಂದ ಸರಿಯಾಗಿ ತನಿಖೆಯಾಗುತ್ತದೆ ಎಂಬ ನಂಬಿಕೆಯಿಲ್ಲ. ಹಾಗಾಗಿ ನ್ಯಾಯಾಧೀಶರ ಉಸ್ತುವಾರಿಯಲ್ಲಿ ಸಿಬಿಐ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಎಚ್.ಎನ್.ವೆಂಕಟೇಶ್ ಮಾತನಾಡಿ, ಒಡನಾಡಿ ಸಂಸ್ಥೆಯ ಜೊತೆ ಇಡೀ ರಾಜ್ಯದ ಜನರಿದ್ದಾರೆನ್ನುವುದಕ್ಕೆ ನಾಡಿನ ಮೂಲೆ ಮೂಲೆಗಳಿಂದ ಪ್ರತಿಭಟನೆಗೆ ಆಗಮಿಸಿರುವುದೇ ಸಾಕ್ಷಿ. ತನಿಖೆ ಹಳ್ಳ ಹಿಡಿಯಬಾರದೆಂಬ ಕಾರಣಕ್ಕಾಗಿ ನಾವು ಬೀದಿಗಿಳಿದು ಹೋರಾಡುತ್ತಿದ್ದೇವೆ. ಚಿತ್ರದುರ್ಗದ ಪೊಲೀಸರು ಆರೋಪಿಯ ಪರವಾಗಿರುವುದರಿಂದ ನ್ಯಾಯ ಸಮ್ಮತವಾದ ತನಿಖೆ ನಡೆಯುವುದು ನಮಗೆ ಅನುಮಾನವಾಗಿದೆ. ಹಾಗಾಗಿ ಸಿಬಿಐ ತನಿಖೆಯಾಗಬೇಕು. ಇನ್ನು ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ. ನಾಡಿನ ಎಲ್ಲಾ ಸ್ವಾಮೀಜಿಗಳು ಆತ್ಮಸಾಕ್ಷಿಗೆ ವಿರುದ್ಧ ನಡೆದುಕೊಳ್ಳುವುದು ಬೇಡ. ಜಿಲ್ಲಾಸ್ಪತ್ರೆಯ ಸರ್ಜನ್, ವೈದ್ಯರು ಲೈಂಗಿಕ ಕಿರುಕುಳದ ಆರೋಪಿ ಶರಣರ ಪರವಾಗಿರುವುದರಿಂದ ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಒತ್ತಡ ಹಾಕಿದರು.
ಸಾಗರದ ನ್ಯಾಯವಾದಿ ಪ್ರತಿಭಾ ಮಾತನಾಡಿ, ಐತಿಹಾಸಿಕ ಚಿತ್ರದುರ್ಗಕ್ಕೆ ಮುರುಘಾಮಠದ ಡಾ.ಶಿವಮೂರ್ತಿ ಶರಣರ ಲೈಂಗಿಕ ಹಗರಣ ಕಳಂಕ ತಂದಿದೆ. ನಿಷ್ಪಕ್ಷ ತನಿಖೆ ನಡೆಸಿ ಒನಕೆ ಓಬವ್ವಳ ನಾಡು ಚಿತ್ರದುರ್ಗಕ್ಕೆ ಅಂಟಿರುವ ಕಳಂಕವನ್ನು ಹೋಗಲಾಡಿಸಬೇಕೆಂದು ಮನವಿ ಮಾಡಿದರು.
ಲೇಖಕ ಎಚ್.ಆನಂದ್‌ಕುಮಾರ್, ಮಹಾಂತೇಶ್ ಕೂನಬೇವು, ಹುಲ್ಲೂರು ಕುಮಾರಸ್ವಾಮಿ ಸೇರಿದಂತೆ ವಿವಿಧ ಜನಪರ ಸಂಘಟನೆಗಳು ಹಾಗೂ ದಲಿತ ಮುಖಂಡರು ಧರಣಿಯಲ್ಲಿ ಪಾಲ್ಗೊಂಡಿದ್ದರು.









