ಜೈಲಿಗೆ ಹಾಕಿದರೆ ಹೆಚ್ಚು ಅಪಾಯಕಾರಿ: ಇಮ್ರಾನ್ ಖಾನ್ ಎಚ್ಚರಿಕೆ

ಇಸ್ಲಮಾಬಾದ್, ಸೆ.10: ತನ್ನನ್ನು ಜೈಲಿಗೆ ಹಾಕಿದರೆ ಇನ್ನಷ್ಟು ಅಪಾಯಕಾರಿ ಆಗಲಿದ್ದೇನೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಎಚ್ಚರಿಸಿದ್ದಾರೆ.
ತನ್ನ ವಿರುದ್ಧ ದಾಖಲಿಸಿರುವ ಭಯೋತ್ಪಾದನೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಹಾಜರಾಗಿದ್ದಾಗ ನ್ಯಾಯಾಲಯದ ಆವರಣದಲ್ಲಿ ನಿಯೋಜಿಸಲಾಗಿದ್ದ ಭಾರೀ ಪೊಲೀಸ್ ಬಂದೋಬಸ್ತ್ನ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಆಗಸ್ಟ್ 20ರಂದು ನಡೆದಿದ್ದ ರ್ಯಾಲಿಯೊಂದರಲ್ಲಿ ಮಹಿಳಾ ನ್ಯಾಯಾಧೀಶೆಗೆ ಬೆದರಿಕೆ ಒಡ್ಡಿದ್ದ ಆರೋಪದಲ್ಲಿ ಇಮ್ರಾನ್ ವಿರುದ್ಧ ಭಯೋತ್ಪಾದನೆ ಪ್ರಕರಣ ದಾಖಲಿಸಲಾಗಿದೆ. ಇದೀಗ ಸೆಪ್ಟಂಬರ್ 12ರವರೆಗೆ ಅವರಿಗೆ ಜಾಮೀನು ದೊರಕಿದೆ.
ನ್ಯಾಯಾಲಯದಲ್ಲಿ ಪೊಲೀಸರು ಹಾಗೂ ಇತರ ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ಭಾರೀ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಅಧಿಕಾರಿಗಳು ಯಾರನ್ನು ಕಂಡು ಹೀಗೆ ಭಯಪಡುತ್ತಿದ್ದಾರೆ ಎಂದು ಇಮ್ರಾನ್ ಪ್ರಶ್ನಿಸಿದರು.
ಮಾಧ್ಯಮದವರ ಜತೆ ಹೆಚ್ಚು ಮಾತನಾಡಲು ನಿರಾಕರಿಸಿದ ಇಮ್ರಾನ್, ತನ್ನ ಹೇಳಿಕೆಗಳನ್ನು ನ್ಯಾಯಾಲಯ ತಪ್ಪಾಗಿ ಅರ್ಥೈಸಬಹುದು ಎಂದರು. ಮಹಿಳಾ ನ್ಯಾಯಾಧೀಶೆಗೆ ಬೆದರಿಕೆ ಒಡ್ಡಿದ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ಹೇಳಿಕೆಗಳನ್ನು ನ್ಯಾಯಾಲಯದಲ್ಲಿ ಸಂದರ್ಭೋಚಿತಗೊಳಿಸಲು ಬಯಸಿದ್ದೆ. ಆದರೆ ಅದಕ್ಕೆ ಅವಕಾಶ ಸಿಗಲಿಲ್ಲ. ಪ್ರತಿಯೊಂದು ಹೇಳಿಕೆಗೆ ಒಂದು ಸಂದರ್ಭವಿದೆ. ದೇಶವು ಮುನ್ನಡೆಯುವ ಬದಲು ದಿನದಿಂದ ದಿನಕ್ಕೆ ಹಿಂದೆ ಸರಿಯುತ್ತಿದ್ದು ಐಎಂಎಫ್ನ ವರದಿ ಇದಕ್ಕೆ ಸಾಕ್ಷಿಯಾಗಿದೆ. ಅವರು(ಸರಕಾರ) ಏನು ಬೇಕಾದರೂ ಮಾಡಬಹುದು. ಆದರೆ ಅಸ್ಥಿರತೆಗೆ ಒಂದೇ ಪರಿಹಾರವೆಂದರೆ ಹೊಸದಾಗಿ ಚುನಾವಣೆ ನಡೆಸುವುದು ಎಂದು ಇಮ್ರಾನ್ ಹೇಳಿದ್ದಾರೆ.







