ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸುವುದು ಮಹತ್ವದ ಕಾರ್ಯ : ಗೀತಾ ಕುಲಕರ್ಣಿ
ಯೆನೆಪೊಯದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ

ಕೊಣಾಜೆ: ಯೆನೆಪೊಯ ಫೌಂಡೇಶನ್ ಹಾಗೂ ಯೆನೆಪೊಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಸಹಯೋಗದೊಂದಿಗೆ ಎಸ್.ಎಸ್.ಎಲ್.ಸಿ, ಪಿ.ಯು.ಸಿ ಹಾಗೂ ಸ್ನಾತಕ ಪದವಿ ಮಟ್ಟದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರವನ್ನು ಪ್ರತೀ ವರ್ಷ ವಿತರಿಸಲಾಗುತ್ತಿದ್ದು, ಪ್ರಸ್ತುತ ಶೈಕ್ಷಣಿಕ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭವು ಯೆನೆಪೊಯ ಪರಿಗಣಿತ ವಿಶ್ವವಿದ್ಯಾಲಯದಲ್ಲಿ ಆನ್‍ಲೈನ್ ಮೂಲಕ ನಡೆಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ, ಮಂಗಳೂರು ಸಂಚಾರಿ ವಿಭಾಗದ ಎ.ಸಿ.ಪಿ, ಗೀತಾ ಕುಲಕರ್ಣಿ ಅವರು, ಸಮಾಜದಲ್ಲಿ ಆರ್ಥಿಕವಾಗಿ ಕಷ್ಟದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಪುರಸ್ಕರಿಸಿ ವಿದ್ಯಾರ್ಜನೆಗೆ ನೆರವಾಗುವುದು ನಿಜವಾಗಿಯು ಒಂದು ಮಾದರಿ ಸೇವೆಯಾಗಿದೆ ಎಂದರು. ಆಶಕ್ತ ಸಂಸ್ಥೆಯು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟಗಳಲ್ಲಿ ಗುರುತಿಸುವಂತಾಗಲಿ ಎಂದು ಹಾರೈಸಿದರು.
ಈ ವರ್ಷ 329 ವಿದ್ಯಾರ್ಥಿಗಳು ಈ ಪುರಸ್ಕಾರವನ್ನು ಪಡೆದಿದ್ದಾರೆ. ಈ ಪ್ರಶಸ್ತಿಯು ರೂ. 3,000 ದಿಂದ 5,000 ದ ವರೆಗಿನ ನಗದು ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿದ್ದು ಹಾಗೂ ಈ ವರ್ಷದ ಪುರಸ್ಕಾರಕ್ಕೆ ರೂ. 12.33 ಲಕ್ಷವನ್ನು ವೆಚ್ಚ ಮಾಡಲಾಗಿದೆ.
ಇದರ ಜತೆಗೆ ಯೆನೆಪೊಯ ಫೌಂಡೇಶನ್ ಯೆನೆಪೊಯ ಸಮೂಹ ಸಂಸ್ಥೆಗಳಲ್ಲಿ ದುಡಿಯುತ್ತಿರುವ ನೌಕರರ ಪ್ರತಿಭಾವಂತ ಮಕ್ಕಳಿಗೆ ನಿಗದಿಪಡಿಸಿದ ಶೈಕ್ಷಣಿಕ ಕೋರ್ಸ್‍ಗಳ ಅಂತಿಮ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದವರಿಗೆ ಕೂಡಾ ಈ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು.
ಯೆನೆಪೊಯ ಫೌಂಡೇಶನ್ ಅಧ್ಯಕ್ಷರಾದ ಯೆನೆಪೊಯ ಮೊಹಮ್ಮದ್ ಕುಂಞಿ ಗೌರವಾನ್ವಿತ ಅತಿಥಿಗಳಾಗಿದ್ದರು.
ಯೆನೆಪೊಯ (ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಕುಲಾಧಿಪತಿ ಡಾ. ವೈ. ಅಬ್ದುಲ್ಲ ಕುಂಞಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಯೆನೆಪೊಯ(ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ) ಉಪಕುಲಪತಿಗಳಾದ ಡಾ. ಎಮ್ . ವಿಜಯಕುಮಾರ್ ಸ್ವಾಗತಿಸಿದರು. ಡಾ. ರೊಶೇಲ್ ಟೆಲ್ಲಿಸ್ ಮತ್ತು ಡಾ. ಮಲ್ಲಿಕ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.







