ಯುಎಸ್ ಓಪನ್ ಟೆನಿಸ್; ಮಹಿಳಾ ಸಿಂಗಲ್ಸ್ ಪ್ರಶಸ್ತಿ ಗೆದ್ದ ಇಗಾ ಸ್ವಿಯಾಟೆಕ್

ಇಗಾ ಸ್ವಿಯಾಟೆಕ್
ವಾಷಿಂಗ್ಟನ್: ಟ್ಯುನೇಶಿಯಾದ ಒನ್ಸ್ ಜಬೇರ್ ಅವರನ್ನು ಸೋಲಿಸಿದ ಇಗಾ ಸ್ವಿಯಾಟೆಕ್, ಯುಎಸ್ ಓಪನ್ ಟೆನಿಸ್ ಕೂಟದಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಇದು ಅವರ ಚೊಚ್ಚಲ ಯುಎಸ್ ಕಿರೀಟವಾಗಿದ್ದು, ಮೂರನೇ ಗ್ರ್ಯಾಂಡ್ಸ್ಲಾಂ ಪ್ರಶಸ್ತಿಯಾಗಿದೆ.
ವಿಶ್ವದ ನಂಬರ್ ವನ್ ಆಟಗಾರ್ತಿಯಾಗಿರುವ ಇಗಾ ಸ್ವಿಯಾಟೆಕ್ ಫೈನಲ್ನ ಮೊದಲನೇ ಸೆಟ್ಟನ್ನು ಸುಲಭವಾಗಿ 6-2 ಅಂತರದಿಂದ ಗೆದ್ದರು. ಆದರೆ ಟ್ಯುನೇಶಿಯನ್ ಆಟಗಾರ್ತಿ, ಬಳಿಕ ಪೋಲೆಂಡ್ ಆಟಗಾರ್ತಿಯ ವಿರುದ್ಧ ತೀವ್ರ ಪ್ರತಿರೋಧ ತೋರಿ ಅದ್ಭುತ ಪ್ರದರ್ಶನ ನೀಡಿದರು. ಆದರೆ ಅಂತಿಮವಾಗಿ ಇಗಾ ಸ್ವಿಯಾಟೆಕ್ ಅವರ ಅನುಭವ ಹಾಗೂ ಅದ್ಭುತ ಆಟ ಅವರಿಗೆ ಪ್ರಶಸ್ತಿಯ ಕಿರೀಟ ತೊಡಿಸಿತು. ಎರಡನೇ ಸೆಟ್ಟನ್ನು ಟೈಬ್ರೇಕರ್ಗೆ ತಂದ ಒನ್ಸ್ ಜಬೇರ್, ಅಂತಿಮವಾಗಿ 5-7ರಿಂದ ಶರಣಾದರು.
ಇದಕ್ಕೂ ಮುನ್ನ ಅರಿನಾ ಸಬಾಲೆಂಕಾ ವಿರುದ್ಧ 3-6, 6-1, 6-4 ಸೆಟ್ಗಳ ಜಯ ಸಾಧಿಸಿ ಫೈನಲ್ ಪ್ರವೇಶಿಸಿದ್ದರು. ಒನ್ಸ್ ಜಬೇರ್ ಅವರು ಫ್ರಾನ್ಸ್ನ ಕೆರೊಲಿನ್ ಕರೊನೈಲ್ ಗೆರಿಕಾ ವಿರುದ್ಧ 6-1, 6-3 ನೇರ ಸೆಟ್ಗಳ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ಮುನ್ನಡೆದಿದ್ದರು.