ಉತ್ತರ ಪ್ರದೇಶ: ಸ್ನೇಹಿತನ ಶಿಶ್ನ ಕತ್ತರಿಸಿದ ಯುವಕ !

ಬರೇಲಿ: ತಮ್ಮ ಪರಸ್ಪರ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವಿಡಿಯೋಗೆ ಸಂಬಂಧಿಸಿ ಬ್ಲಾಕ್‍ಮೇಲ್ ಮಾಡಿ, ಸ್ನೇಹಿತನ ಶಿಶ್ನವನ್ನೇ ಕತ್ತರಿಸಿದ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.
ಶನಿವಾರ ಈ ಘಟನೆ ನಡೆದಿದ್ದು, 32 ವರ್ಷ ವಯಸ್ಸಿನ ಆರೋಪಿ ಹಾಗೂ 30 ವರ್ಷ ವಯಸ್ಸಿನ ಸಂತ್ರಸ್ತ ಯುವಕ ಬರೇಲಿ ಮಹಾನಗರ ಪಾಲಿಕೆಯ ಗುತ್ತಿಗೆ ಕಾರ್ಮಿಕರು. ಒಂದು ವರ್ಷದ ಹಿಂದೆ ಸಂತ್ರಸ್ತ ವ್ಯಕ್ತಿಯ ಸಂಪರ್ಕ ಉಂಟಾಗಿದೆ ಎಂದು ಆರೋಪಿ ಹೇಳಿದ್ದಾನೆ.
"ಕೆಲ ತಿಂಗಳ ಹಿಂದೆ ಹೋಟೆಲ್‍ಗೆ ಕರೆದೊಯ್ದು ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವಿಡಿಯೋ ಚಿತ್ರಿಸಿ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡುವುದಾಗಿ ಬ್ಲ್ಯಾಕ್‍ಮೇಲ್ ಮಾಡುತ್ತಿದ್ದ. ಹಲವು ಬಾರಿ ಹಣವನ್ನು ಕೂಡಾ ಕಿತ್ತಿದ್ದಾನೆ" ಎಂದು ಸಂತ್ರಸ್ತ ಪೊಲೀಸರಿಗೆ ತಿಳಿಸಿದ್ದಾನೆ.
ಶನಿವಾರ ಇಬ್ಬರೂ ಹೋಟೆಲ್‍ನಲ್ಲಿ ಭೇಟಿಯಾಗಿದ್ದಾರೆ. ಇಲ್ಲಿ ಸಂತ್ರಸ್ತ ವ್ಯಕ್ತಿ ಆರೋಪಿಯ ಮೊಬೈಲ್‍ನಲ್ಲಿದ್ದ ವಿಡಿಯೋ ಡಿಲೀಟ್ ಮಾಡುವಂತೆ ಕೇಳಿದ್ದಾನೆ. ಇದಕ್ಕೆ ಆತ ಒಪ್ಪಿಲ್ಲ. ಇದು ಪರಿಸ್ಥಿತಿ ವಿಕೋಪಕ್ಕೆ ಹೋಗಲು ಕಾರಣವಾಯಿತು ಎನ್ನಲಾಗಿದೆ. ಮೊದಲು ಸಂತ್ರಸ್ತ ವ್ಯಕ್ತಿ ಆರೋಪಿಯ ಮೇಲೆ ಹಲ್ಲೆ ನಡೆಸಿದ. ಇದಕ್ಕೆ ಪ್ರತಿಯಾಗಿ ಆರೋಪಿ ಹರಿತ ಆಯುಧ ಬಳಸಿ ಸಂತ್ರಸ್ತ ವ್ಯಕ್ತಿಯ ಗುಪ್ತಾಂಗವನ್ನು ಕತ್ತರಿಸಿದ ಎಂದು ಪೊಲೀಸರು ವಿವರಿಸಿದ್ದಾರೆ. ಈ ಬಗ್ಗೆ ಇನ್ನೂ ಲಿಖಿತ ದೂರು ಸಲ್ಲಿಕೆಯಾಗಿಲ್ಲ ಎಂದು ಕೋತ್ವಾಲಿ ಪೊಲೀಸ್ ಠಾಣೆಯ ಅಧಿಕಾರಿ ಹಿಮಾಂಶು ನಿಗಮ್ ಹೇಳಿದ್ದಾರೆ. ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.
"ಘಟನೆ ಬಗ್ಗೆ ತನಿಖೆ ನಡೆಯುತ್ತಿದ್ದು, ಹೊಟೇಲ್‍ನ ಸಿಸಿಟಿವಿ ದೃಶ್ಯಾವಳಿಯನ್ನು ತನಿಖೆಗಾಗಿ ಪಡೆಯಲಾಗಿದೆ. ಸದ್ಯವೇ ಎಫ್‍ಐಆರ್ ದಾಖಲಿಸಲಾಗುವುದು" ಎಂದು ಸ್ಪಷ್ಟಪಡಿಸಿದ್ದಾರೆ.
ಸಂತ್ರಸ್ತ ವ್ಯಕ್ತಿಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಸ್ಪತ್ರೆ ವೈದ್ಯರು ಹೇಳಿದ್ದು, ಈ ಬಗ್ಗೆ timesofindia.com ವರದಿ ಮಾಡಿದೆ.







