ರಾಣಿ ಎಲಿಝಬೆತ್ ನಿಧನದ ಮಾಹಿತಿಯನ್ನು ಅರಮನೆಯಲ್ಲಿನ ಜೇನ್ನೊಣಗಳಿಗೆ ನೀಡಿದ್ದೇಕೆ?

ಲಂಡನ್,ಸೆ.11: ರಾಣಿ ಎರಡನೇ ಎಲಿಝಬೆತ್ ಅವರ ನಿಧನವು ಬ್ರಿಟನ್ ನ ರಾಜ ಅಥವಾ ರಾಣಿಯ ನಿಧನದ ಬೆನ್ನಿಗೇ ಆರಂಭಿಸಲಾಗುವ ರಾಜ ಮನೆತನದ ಹಲವಾರು ಶಿಷ್ಟಾಚಾರಗಳನ್ನು ಬೆಳಕಿಗೆ ತಂದಿದೆ.
ಕುತೂಹಲಕಾರಿ ಸಂಪ್ರದಾಯದಂತೆ ಅರಮನೆಯಲ್ಲಿನ ಜೇನ್ನೊಣಗಳಿಗೆ ರಾಣಿಯ ನಿಧನದ ಮಾಹಿತಿಯನ್ನು ನೀಡಲಾಗಿದೆ. ಬಕಿಂಗ್ಹ್ಯಾಮ್ ಅರಮನೆ ಮತ್ತು ಕ್ಲಾರೆನ್ಸ್ ಹೌಸ್ ನ ಆವರಣಗಳಲ್ಲಿರುವ ಗೂಡುಗಳಲ್ಲಿ ಸಾಕಲಾಗಿರುವ ಜೇನ್ನೊಣಗಳಿಗೆ ರಾಣಿ ನಿಧನವಾಗಿರುವುದನ್ನು ಅವುಗಳ ಪಾಲಕ ಜಾನ್ ಚಾಪೆಲ್ (79) ಪಿಸುಗುಟ್ಟುವ ಧ್ವನಿಯಲ್ಲಿ ನೀಡಿದ್ದಾರೆ.
‘ನೀವು ಈಗ ರಾಜ ಮೂರನೇ ಚಾರ್ಲ್ಸ್ ರನ್ನು ಹೊಸ ಒಡೆಯನಾಗಿ ಹೊಂದಿದ್ದೀರಿ’ ಎಂದು ಚಾಪೆಲ್ ಈ ಜೇನ್ನೊಣಗಳಿಗೆ ತಿಳಿಸಿದ್ದಾರೆ.
ಗುರುವಾರ ಸ್ಕಾಟ್ಲಂಡ್ ನ ಬಾಲ್ಮೋರ್ ಅರಮನೆಯಲ್ಲಿ ರಾಣಿ ನಿಧನರಾದ ಬಳಿಕ ಶತಮಾನಗಳಷ್ಟು ಹಳೆಯದಾದ ಮತ್ತು ಮೂಢನಂಬಿಕೆ ಎಂದು ಪರಿಗಣಿಸಲಾಗಿರುವ ಈ ಸಂಪ್ರದಾಯವನ್ನು ನಡೆಸಲು ಚಾಪೆಲ್ ಮರುದಿನ ಬಕಿಂಗ್ಹ್ಯಾಮ್ ಅರಮನೆ ಮತ್ತು ಕ್ಲಾರೆನ್ಸ್ ಹೌಸ್ಗೆ ಪ್ರಯಾಣಿಸಿದ್ದರು.
ತಾನು ಜೇನುಹುಟ್ಟುಗಳ ಸುತ್ತ ಕಪ್ಪು ರಿಬ್ಬನ್ಗಳನ್ನು ಕಟ್ಟಿ, ಅವುಗಳ ಒಡತಿ ನಿಧನರಾಗಿದ್ದಾರೆ ಮತ್ತು ಈಗ ನೂತನ ಒಡೆಯರು ಅಧಿಕಾರಕ್ಕೇರಿದ್ದಾರೆ ಎಂದು ಜೇನ್ನೊಣಗಳಿಗೆ ಮಾಹಿತಿ ನೀಡಿದ್ದಾಗಿ ಚಾಪೆಲ್ ತಿಳಿಸಿದರು. ಸಂಪ್ರದಾಯದಂತೆ ಈ ಮಾಹಿತಿಯನ್ನು ಜೇನ್ನೊಣಗಳಿಗೆ ಪಿಸುಗುಟ್ಟುವ ಧ್ವನಿಯಲ್ಲೇ ನೀಡಬೇಕು. ಜೇನ್ನೊಣಗಳಿಗೆ ಅವುಗಳ ನೂತನ ಒಡೆಯನ ಬಗ್ಗೆ ಮಾಹಿತಿ ನೀಡದಿದ್ದರೆ ಮತ್ತು ಆತನೊಂದಿಗೆ ಚೆನ್ನಾಗಿರುವಂತೆ ಅವುಗಳನ್ನು ಆಗ್ರಹಿಸದಿದ್ದರೆ ಅವು ಜೇನನ್ನು ಉತ್ಪಾದಿಸುವುದಿಲ್ಲ, ಗೂಡನ್ನು ಬಿಟ್ಟು ತೆರಳುತ್ತವೆ ಅಥವಾ ಸಾಯುತ್ತವೆ ಎಂಬ ನಂಬಿಕೆ ಈ ಶಿಷ್ಟಾಚಾರದ ಹಿಂದಿದೆ.
‘ಕ್ಲಾರೆನ್ಸ್ ಹೌಸ್ನಲ್ಲಿ ಎರಡು ಮತ್ತು ಬಕಿಂಗ್ಹ್ಯಾಮ್ ಅರಮನೆಯಲ್ಲಿ ಐದು ಜೇನು ಹುಟ್ಟುಗಳಿವೆ. ವರ್ಷದ ಈ ಸಮಯದಲ್ಲಿ ಪ್ರತಿ ಹುಟ್ಟಿನಲ್ಲಿ ಕನಿಷ್ಠ 20,000 ಜೇನ್ನೊಣಗಳು ಇರುತ್ತವೆ. ಹೆಚ್ಚೂ ಇರಬಹುದು, ಅವುಗಳನ್ನು ಲೆಕ್ಕ ಮಾಡುವುದರಲ್ಲಿ ನಾನು ಚೆನ್ನಾಗಿಲ್ಲ. ಬೇಸಿಗೆಯಲ್ಲಿ ಮಿಲಿಯನ್ಗೂ ಹೆಚ್ಚು ಜೇನ್ನೊಣಗಳಿರುತ್ತವೆ ’ಎಂದು ಕಳೆದ 15 ವರ್ಷಗಳಿಂದ ಅರಮನೆಯ ಜೇನ್ನೊಣಗಳ ಅಧಿಕೃತ ಪಾಲಕರಾಗಿರುವ ಚಾಪೆಲ್ ಹೇಳಿದರು.