ಬಿಜೆಪಿಯದ್ದು ‘ಸುಳ್ಳೆ ಸ್ಪಂದನೆ-ಟೋಪಿ ಹಾಕಿದ್ದೆ ಸಾಧನೆ’: ಸಿದ್ದರಾಮಯ್ಯ

ಸಿದ್ದರಾಮಯ್ಯ (File Photo)
ಬೆಂಗಳೂರು: ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ಜನಸ್ಪಂದನ ಎಂಬ ಹೆಸರಿನಲ್ಲಿ ಕಾರ್ಯಕ್ರಮವನ್ನು ಮಾಡಿ, ಸುಳ್ಳೆ ನಮ್ಮ ಸ್ಪಂದನೆ-ಜನರಿಗೆ ಟೋಪಿ ಹೊಲಿಯುವುದೆ ನಮ್ಮ ಸಾಧನೆ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ' ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಟೀಕಿಸಿದ್ದಾರೆ.
ರವಿವಾರ ಈ ಸಂಬಂಧ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ‘ಜನಸ್ಪಂದನ ವೇದಿಕೆಯ ಮೇಲಿದ್ದವರು ಕಾರ್ಯಕ್ರಮದ ಉದ್ದಕ್ಕೂ ಸುಳ್ಳುಗಳನ್ನು ಹೇಳಿದ್ದಾರೆ. ಬಿಜೆಪಿಯವರ ಸುಳ್ಳು ಮಾತುಗಳನ್ನು ಕೇಳಿ ಕುರ್ಚಿಗಳನ್ನು ಅರ್ಧಂಬರ್ಧ ಭರ್ತಿ ಮಾಡಿದ್ದ ಜನರು ಬೇಸರದಿಂದ ಎದ್ದು ಹೊರ ನಡೆದದ್ದು ಕಾಣುತ್ತಿತ್ತು. ಆದರೂ ಸುಳ್ಳು ನಿಲ್ಲಲಿಲ್ಲ' ಎಂದು ವ್ಯಂಗ್ಯವಾಡಿದ್ದಾರೆ.
‘ಬೊಮ್ಮಾಯಿ ತಾವೊಬ್ಬ ಮರ್ಯಾದಸ್ತ ಮುಖ್ಯಮಂತ್ರಿಯಾಗಿದ್ದೇನೆ, ಈ ರಾಜ್ಯವು ನೈತಿಕತೆಯನ್ನು ಬಯಸುತ್ತದೆ ಎಂಬುದನ್ನು ಪಕ್ಕಕ್ಕೆ ಇಟ್ಟು ಸುಳ್ಳುಗಳನ್ನು ಪುಂಖಾನುಪುಂಖವಾಗಿ ಗಾಳಿಯಲ್ಲಿ ತೇಲಿಬಿಟ್ಟರು. ಅವುಗಳಲ್ಲಿ ಎರಡು ಸುಳ್ಳುಗಳಿಗೆ ನಾನು ಪ್ರತಿಕ್ರಿಯಿಸುತ್ತೇನೆ. ಉಳಿದ ಸುಳ್ಳುಗಳು ಪ್ರತಿಕ್ರಿಯೆಗೂ ಅರ್ಹವಲ್ಲ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
‘ಅನುರಾಗ್ ತಿವಾರಿ ಉತ್ತರ ಪ್ರದೇಶದ ಲಖನೌನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಕುರಿತು ಉತ್ತರ ಪ್ರದೇಶದ ವಿಶೇಷ ತನಿಖಾ ದಳ ತನಿಖೆಗೆ ತೆಗೆದುಕೊಂಡಿತ್ತು. ಶೋಭಾ ಕರಂದ್ಲಾಜೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ಗೆ ಫೋನ್ ಕರೆ ಮಾಡಿದ್ದರು' ಎಂದು ಸಿದ್ದರಾಮಯ್ಯ ದೂರಿದ್ದಾರೆ.
ಶೋಭಾ ಕರಂದ್ಲಾಜೆ ಮನವಿ ಆಧರಿಸಿ ಈ ಪ್ರಕರಣವನ್ನು ಸಿಬಿಐಗೆ ವಹಿಸಿದ್ದಾರೆ. 2018ರಲ್ಲಿ ಸಿಬಿಐ ರಾಜ್ಯದಿಂದಲೂ ಮಾಹಿತಿ ಸಂಗ್ರಹಿಸಿದೆ. ಬಹುಶಃ ಅದು ರಾಜ್ಯಕ್ಕೂ ಬಂದು ಪರಿಶೀಲನೆ ನಡೆಸಿದೆ. ಪ್ರಕರಣವನ್ನು ಸಿಬಿಐಗೆ ವಹಿಸಿ, 4 ವರ್ಷಗಳಾಗಿವೆ. ತನಿಖೆಯ ಫಲಿತಾಂಶಗಳೇನು ಎಂದು ಈವರೆಗೆ ಮಾಹಿತಿ ಇಲ್ಲ. ಹಾಗಾಗಿ ಬಸವರಾಜ ಬೊಮ್ಮಾಯಿ ಜನರ ಮುಂದೆ ಸಿಬಿಐ ತನಿಖೆಯ ಫಲಿತಾಂಶ ಏನು? ಎಂಬುದನ್ನು ಮಂಡಿಸಬೇಕು. ಇಲ್ಲದಿದ್ದರೆ ರಾಜ್ಯದ ಜನರ ಮುಂದೆ ಬೇಷರತ್ ಆಗಿ ಕ್ಷಮೆ ಕೇಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
‘ಮೋದಿ ಅಕ್ಕಿ ಕೊಟ್ಟಿದ್ದರೆ ನಮ್ಮ ಕಾಂಗ್ರೆಸ್ ಸರಕಾರ ಏಕೆ ಇಷ್ಟೊಂದು ಹಣವನ್ನು ಆಹಾರ ಇಲಾಖೆಯಿಂದ ಖರ್ಚು ಮಾಡಬೇಕಾಗಿತ್ತು? ಅನ್ನಭಾಗ್ಯ ಯೋಜನೆಯಡಿ ನಾವು 2013ರಿಂದ ಮನೆಯಲ್ಲಿ ಎಷ್ಟೇ ಸದಸ್ಯರಿದ್ದರೂ ಗರಿಷ್ಠ 30 ಕೆ.ಜಿ. ಯವರೆಗೆ ಅಕ್ಕಿ ಕೊಡುತ್ತಿದ್ದೆವು. ಏಕ ಸದಸ್ಯರಿದ್ದರೆ 10ಕೆ.ಜಿ. ಅಕ್ಕಿ ಕೊಡುತ್ತಿದ್ದೆವು. 2015ರಿಂದ 2017ರ ಮಾರ್ಚ್ ವರೆಗೆ ಪ್ರತಿ ಸದಸ್ಯರಿಗೆ 5ಕೆ.ಜಿ. ಅಕ್ಕಿ, ಉಪ್ಪು, 1ಕೆ.ಜಿ ಅಡುಗೆ ಎಣ್ಣೆ ನೀಡುತ್ತಿದ್ದೆವು. ಇದಕ್ಕೆ ಕಾರಣ ಏನೆಂದರೆ ಮೋದಿ ನೇತೃತ್ವದ ಬಿಜೆಪಿ ಸರಕಾರವು ಆಹಾರ ಭದ್ರತಾ ಕಾಯ್ದೆಯಡಿ ಪ್ರತಿಯೊಬ್ಬರಿಗೆ 5ಕೆ.ಜಿ. ಆಹಾರ ಧಾನ್ಯಗಳನ್ನು ಮಾತ್ರ ನೀಡಬೇಕೆಂದು ಕಡ್ಡಾಯಗೊಳಿಸಿತ್ತು ಎಂದು ಅವರು ತಿಳಿಸಿದ್ದಾರೆ.
‘ಮುಖ್ಯಮಂತ್ರಿ ಹಾಗೂ ಬಿಜೆಪಿಯವರು ಇನ್ನು ಮುಂದೆಯಾದರೂ ಸುಳ್ಳು ಹೇಳುವುದನ್ನು ನಿಲ್ಲಿಸಿ ತಾವು ಮಾಡಿರುವ ಘನಂದಾರಿ ಅಭಿವೃದ್ಧಿ ಕೆಲಸಗಳನ್ನು ಸ್ಪಂದನವೆಂಬ ಹೆಸರಿನ ಸಭೆಗಳಲ್ಲಿ ಅಥವಾ ಮಾಧ್ಯಮಗಳ ಮುಂದೆ ಇಡಲಿ. ನಿನ್ನೆ ದೊಡ್ಡಬಳ್ಳಾಪುರದಲ್ಲಿ ಸುಳ್ಳು ಹೇಳುವುದಕ್ಕೆ ಸ್ಪರ್ಧೆಗೆ ಬಿದ್ದವರಂತೆ ವರ್ತಿಸಿದ ಬಿಜೆಪಿಯವರು ಹಾಗೂ ಮುಖ್ಯಮಂತ್ರಿ ಕೂಡಲೇ ಕ್ಷಮೆ ಕೇಳಬೇಕೆಂದು ಆಗ್ರಹಿಸುತ್ತೇನೆ'
-ಸಿದ್ದರಾಮಯ್ಯ, ವಿಪಕ್ಷ ನಾಯಕ







