ಕುಂದಾಪುರದಲ್ಲಿ ಶ್ರೀನಾರಾಯಣ ಗುರು ಸಂದೇಶ ವಾಹನ ಜಾಥಾ

ಕುಂದಾಪುರ, ಸೆ.11: ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಆಶ್ರಯ ದಲ್ಲಿ ಶ್ರೀನಾರಾಯಣ ಗುರು ಯುವಕ ಮಂಡಲದ ಸಹಯೋಗದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮ ದಿನದ ಪ್ರಯುಕ್ತ ಗುರು ಸಂದೇಶ ವಾಹನ ಜಾಥಾ ಹಾಗೂ ಗುರುವಂದನಾ ಕಾರ್ಯಕ್ರಮ ರವಿವಾರ ಜರಗಿತು.
ಶ್ರೀನಾರಾಯಣ ಗುರು ಮಂದಿರದಿಂದ ಆರಂಭಗೊಂಡ ವಾಹನ ಜಾಥಾಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಚಾಲನೆ ನೀಡಿದರು. ಕುಂದಾಪುರದಿಂದ ಆರಂಭಗೊಂಡ ಜಾಥವು ನಗರದಲ್ಲಿ ಸಾಗಿ ಸಂಗಮ್, ತಲ್ಲೂರು ಮೂಲಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಆಗಮಿಸಿ ಹೆಮ್ಮಾಡಿಯಲ್ಲಿ ಸಂಪನ್ನಗೊಂಡಿತು.
ಬಳಿಕ ಹೆಮ್ಮಾಡಿ ಸಮೀಪದ ಸಂತೋಷನಗರ ಬಳಿ ನಡೆದ ಗುರುವಂದನೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಉದ್ಯಮಿ ಸತೀಶ್ ಕೋಟ್ಯಾನ್ ಮಾತನಾಡಿ, ಗುರುಗಳು ಸಂಘಟನೆಯಿಂದ ಬಲಯುತರಾಗಿರಿ, ವಿದ್ಯೆಯಿಂದ ಪ್ರಗತಿ ಹೊಂದಿ ಎನ್ನುವ ಸಂದೇಶವನ್ನು ದೇಶವ್ಯಾಪಿ ಸಾರಿದ್ದು, ಅದನ್ನು ನಾವೆಲ್ಲರೂ ಪಾಲಿಸಿ ಮುನ್ನಡೆಯುವ ಮೂಲಕ ಮುಂದಿನ ಪೀಳಿಗೆಗೂ ಅವರ ಆದರ್ಶ ಮಾದರಿ ಯಾಗಬೇಕು ಎಂದರು.
ಬಿಲ್ಲವ ಸಮಾಜ ಸೇವಾ ಸಂಘದ ಉಪಾಧ್ಯಕ್ಷ ಭಾಸ್ಕರ ಬಿಲ್ಲವ ಮಾತನಾಡಿ, ನಾವೆಲ್ಲರೂ ಒಂದೇ ಎಂಬ ಸಂದೇಶ ಸಾರಿದ ಮಹಾನ್ ಸಂತ ನಾರಾಯಣ ಗುರುಗಳು ಸಂಘಟನೆ ಹಾಗೂ ಶಿಕ್ಷಣದಿಂದ ಮಾತ್ರ ಸಮಾಜದ ಸುಧಾರಣೆ ಸಾಧ್ಯ ಎನ್ನುವುದನ್ನು ನಿರೂಪಿಸಿದ್ದಾರೆ. ಅದರಂತೆ ಈ ಜಾಗದಲ್ಲಿ ಸರಕಾರದ ಸವಲತ್ತುಗಳನ್ನು ಪಡೆದುಕೊಂಡು, ಉತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಯನ್ನು ನಿರ್ಮಿಸಿ, ನಮ್ಮ ಸಮಾಜದ ಮಕ್ಕಳ ವಿದ್ಯಾರ್ಜನೆಗೆ ಅನುಕೂಲವಾಗುವ ಕಾರ್ಯವಾಗಬಬೇಕಾಗಿದೆ ಎಂದರು.
ಅಧ್ಯಕ್ಷತೆ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬೀಜಾಡಿ ವಹಿಸಿದ್ದರು. ಸಂಘದ ಉಪಾಧ್ಯಕ್ಷ ರಾಮ ಪೂಜಾರಿ, ಪ್ರಧಾನ ಕಾರ್ಯದರ್ಶಿಗಳಾದ ಗಣೇಶ್ ಪೂಜಾರಿ ವಿಠಲವಾಡಿ, ಬಸವ ಪೂಜಾರಿ ಹೊದ್ರಾಳಿ, ಕೋಶಾಧಿಕಾರಿ ಶಿವಾನಂದ ಗಂಗೊಳ್ಳಿ, ಸಂಘಟನಾ ಕಾರ್ಯದರ್ಶಿ ಆನಂದ ಪೂಜಾರಿ ಕೊಡೇರಿ, ಮಹಿಳಾ ಘಟಕಾಧ್ಯಕ್ಷೆ ಸುಮನಾ ಬಿದ್ಕಲ್ಕಟ್ಟೆ, ಶ್ರೀನಾರಾಯಣ ಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ವಿಠಲವಾಡಿ, ಹೆಮ್ಮಾಡಿ ಮೂರ್ತೆದಾರರ ಸಹಕಾರಿ ಸಂಘದ ಜನಾರ್ದನ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ರಾಜೇಶ್ ಕಡ್ಗಿಮನೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೀನಾರಾ ಯಣ ಗುರು ಯುವಕ ಮಂಡಲದ ಅಧ್ಯಕ್ಷ ಅಜಿತ್ ಪೂಜಾರಿ ಗಂಗನಹಿತ್ಲು ವಂದಿಸಿದರು.
"ಶ್ರೀನಾರಾಯಣ ಗುರುಗಳು ಮೌಢ್ಯ, ಅಸ್ಪೃಶ್ಯತೆ ವಿರುದ್ಧ ಬ್ರಿಟಿಷರ ಕಾಲ ದಲ್ಲಿಯೇ ಧ್ವನಿಯೆತ್ತಿದವರು. ಆ ಕಾಲದಲ್ಲೆ ಸಾಮಾಜಿಕ ಪಿಡುಗಗಳ ವಿರುದ್ಧ ಹೋರಾಟ ಮಾಡಿ ಹಿಂದುಳಿದ ವರ್ಗದವರಿಗೆ ನ್ಯಾಯ ದೊರಕಿಸಿಕೊಟ್ಟ ಸಾಧಕರು. ಅವರ ಹೆಸರಲ್ಲಿ ಇಲ್ಲೊಂದು ಶಿಕ್ಷಣ ಸಂಸ್ಥೆ ನಿರ್ಮಿಸಿ, ಆ ಮೂಲಕ ಸಮಾಜದ ನೂರಾರು ಮಂದಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ಒದಗಿಸುವ ಯೋಜನೆ ಸಂಘದ್ದಾಗಿದೆ. ಇದಕ್ಕಾಗಿ ಎಲ್ಲರ ಸಹಕಾರ ಅಗತ್ಯವಿದೆ".
-ಅಶೋಕ ಪೂಜಾರಿ ಬೀಜಾಡಿ, ಅಧ್ಯಕ್ಷರು, ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘ








