ಜ್ಞಾನವೇ ಯಶಸ್ಸಿನ ಕೀಲಿ ಕೈ: ಮೌಲಾನಾ ಸಲೀಮ್ ಉಮ್ರಿ

ಕಾಪು, ಸೆ.11: ಮನುಷ್ಯನು ಇಂದು ಜ್ಞಾನ ಗಳಿಸಲು ಗರಿಷ್ಠ ಪ್ರಯತ್ನ ಪಡುತ್ತಾ ಅದಕ್ಕಾಗಿ ಲಕ್ಷಗಟ್ಟಲೆ ಹಣ ವಿನಿಯೋಗಿಸುತ್ತಿದ್ದಾನೆ. ಲೌಕಿಕ ವಿದ್ಯಾಭ್ಯಾಸ ಜೊತೆ ಆಧ್ಯಾತ್ಮಿಕ ವಿದ್ಯಾಭ್ಯಾಸ ಗಳಿಸಲು ಮುಂದೆ ಬರಬೇಕು. ಇದೇ ಜ್ಞಾನದ ಯಶಸ್ಸಿನ ಕೀಲಿ ಕೈ ಎಂದು ಶಿವಮೊಗ್ಗ, ಉತ್ತರ ಕನ್ನಡ ವಲಯ ಸಂಚಾಲಕ ಮೌಲಾನಾ ಮುಹಮ್ಮದ್ ಸಲೀಮ್ ಉಮ್ರಿ ಹೇಳಿದ್ದಾರೆ.
ಎಸ್‌ಐಓ ಮತ್ತು ಜಮಾಅತೆ ಇಸ್ಲಾಮಿ ಹಿಂದ್ ಕಾಪು ವರ್ತುಲದ ವತಿಯಿಂದ ರವಿವಾರ ಕಾಪುವಿನಲ್ಲಿ ಹಮ್ಮಿಕೊಳ್ಳಲಾದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡುತಿದ್ದರು.
ಎಸ್‌ಐಓ ರಾಜ್ಯ ಕಾರ್ಯದರ್ಶಿ ಹಸೀಬ್ ತರಫ್ದಾರ್ ಮಾತನಾಡಿ, ಇಂದು ನಾವು ವಿದ್ಯಾಭ್ಯಾಸ ಪಡೆಯುತ್ತಿರುವಾಗ ಹಲವು ಭಾಷೆ ಕಲಿಯಲು ಪ್ರಯತ್ನಿಸ ಬೇಕು. ಇದರಿಂದ ನಮ್ಮ ಜ್ಞಾನವು ವೃದ್ಧಿಸುತ್ತದೆ ಎಂದು ತಿಳಿಸಿದರು.
ಹಾಜಿ ಅಬ್ದುಲ್ ಜಲೀಲ್ ಉದ್ಯಾವರ ಮಾತಾಡಿದರು. ಅಧ್ಯಕ್ಷತೆಯನ್ನು ಡಾ.ಅಬ್ದುಲ್ ಅಝೀಝ್ ವಹಿಸಿದ್ದರು. ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್‌ನ ಡಿಪ್ಲೋಮಾ ಕೋರ್ಸ್‌ನಲ್ಲಿ ರಾಜ್ಯದಲ್ಲಿ ಪ್ರಥಮ ರಾಂಕ್ ಗಳಿಸಿದ ಸಮ್ರಿನ್ ಶಹಾಬುದ್ದಿನ್ ಅವರಿಗೆ ಪ್ರಶಸ್ತಿ ಮತ್ತು ಸರ್ಟಿಫಿಕೇಟ್ ಹಾಗೂ ಉಳಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಎಸ್‌ಐಓ ವಿದ್ಯಾರ್ಥಿಗಳಿಗೆ ನಡೆಸಿದ ರಸ ಪ್ರಶ್ನೆ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ನಗದು ಮತ್ತು ಬಹುಮಾನ ನೀಡಲಾಯಿತು. ವಿಜೇತರ ಪಟ್ಟಿಯನ್ನು ಅನ್ವರ್ ಅಲಿ ಕಾಪು ವಾಚಿಸಿದರು. ಬೋರ್ಡ್ ಆಫ್ ಇಸ್ಲಾಮಿಕ್ ನಿಯಮಾ ವಳಿಯನ್ನು ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದ ಸಂಚಾಲಕಿ ಶೇಹೆನಾಜ್ ಕಾಪು ತಿಳಿಸಿದರು. ಎಸ್‌ಐಓ ಜಿಲ್ಲಾ ಸಂಚಾಲಕ ಮುಹಮ್ಮದ್ ಆಫ್ವಾನ್ ಹೂಡೆ ಉಪಸ್ಥಿತರಿದ್ದರು.
ಮುಹಮ್ಮದ್ ರಾಯಿಫ್ ಕುರ್‌ಆನ್ ಪಠಿಸಿದರು. ಎಸ್‌ಐಓ ಕಾಪು ಘಟಕದ ಅಧ್ಯಕ್ಷ ಅನೀಸ್ ಅಲಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಹಮ್ಮದ್ ಇಕ್ಬಾಲ್ ವಂದಿಸಿದರು. ಮುಹಮ್ಮದ್ ಅವೀಜ್ ಕಾರ್ಯಕ್ರಮ ನಿರೂಪಿಸಿದರು.







