ಝಪೋರಿಝಿಯ ಸ್ಥಾವರದಲ್ಲಿನ ಕೊನೆಯ ಪರಮಾಣು ರಿಯಾಕ್ಟರ್ ಸ್ಥಗಿತ

ಕೀವ್, ಸೆ.11: ಯುರೋಪ್ನ ಬೃಹತ್ ಪರಮಾಣು ಸ್ಥಾವರವಾದ ಉಕ್ರೇನ್ನ ಝಪೋರಿಝಿಯಾದ ಕೊನೆಯ ರಿಯಾಕ್ಟರ್ ಕೂಡಾ ಸ್ಥಗಿತಗೊಂಡಿದೆ ಎಂದು ಉಕ್ರೇನ್ನ ಪರಮಾಣು ಇಂಧನ ನಿರ್ವಹಣಾ ಪ್ರಾಧಿಕಾರ ರವಿವಾರ ಹೇಳಿದೆ. ಈ ಪ್ರದೇಶದಲ್ಲಿ ನಡೆಯುತ್ತಿರುವ ಹೋರಾಟದ ಪರಿಣಾಮವಾಗಿ 6 ರಿಯಾಕ್ಟರ್ಗಳ ಝಪೊರಿಝಿಯಾ ಸ್ಥಾವರ ಕಳೆದ ವಾರ ಗ್ರಿಡ್ನೊಂದಿಗೆ ಸಂಪರ್ಕ ಕಡಿದುಕೊಂಡಿದ್ದು ಅದರ ಎಲ್ಲಾ ವಿದ್ಯುತ್ ಲೈನ್ಗಳೂ ಕಡಿತಗೊಂಡಿದ್ದವು.
ಬಳಿಕ ಸ್ಥಾವರವು ಹಲವು ದಿನ ‘ಐಲ್ಯಾಂಡ್ ಮೋಡ್’ನಲ್ಲಿ ಕಾರ್ಯ ನಿರ್ವಹಿಸಿತ್ತು(ಇತರ ವಿದ್ಯುತ್ ಸ್ಥಾವರಗಳು ಅಥವಾ ಉಪಯುಕ್ತತೆಯ ಮೂಲಕ್ಕೆ ಸಂಪರ್ಕ ಹೊಂದಿಲ್ಲದ ಅಥವಾ ಮುಂದೆಯೂ ಸಂಪರ್ಕ ಸಾಧ್ಯವಾಗದ ಸ್ಥಿತಿ). ಶನಿವಾರ ಸ್ಥಾವರದ ಒಂದು ವಿದ್ಯುತ್ಲೈನ್ ಅನ್ನು ಮರುಸ್ಥಾಪಿಸಿ, ಸ್ಥಾವರದ ಅಂತಿಮ ರಿಯಾಕ್ಟರ್ನ ಕಾರ್ಯ ಸ್ಥಗಿತಗೊಳಿಸಲಾಗಿದೆ ಎಂದು ಉಕ್ರೇನ್ ನ ಪರಮಾಣು ಇಂಧನ ನಿರ್ವಾಹಕ ‘ಎನರ್ಗೋಟಮ್’ ಹೇಳಿದೆ. ಆದರೆ ಈ ವಿದ್ಯುತ್ ಲೈನ್ ಕೂಡಾ ಸಂಪರ್ಕ ಕಡಿದುಕೊಳ್ಳುವ ಸಾಧ್ಯತೆ ಇರುವುದರಿಂದ ಅಪಾಯ ಇನ್ನೂ ಇದೆ. ಹಾಗೆ ಆದರೆ, ತುರ್ತು ಡೀಸೆಲ್ ಜನರೇಟರ್ ಚಾಲನೆಗೊಳಿಸಿ ರಿಯಾಕ್ಟರ್ ತಂಪಾಗಿರುವಂತೆ ಕ್ರಮ ಕೈಗೊಂಡು ಪರಮಾಣು ಕರಗುವಿಕೆಯನ್ನು ತಡೆಯಬೇಕು.
ಸ್ಥಾವರದಲ್ಲಿ 10 ದಿನಗಳಿಗೆ ಆಗುವಷ್ಟು ಮಾತ್ರ ಡೀಸೆಲ್ ದಾಸ್ತಾನು ಇದೆ ಎಂದು ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ. ವಿಶ್ವದ 10 ಅತೀ ದೊಡ್ಡ ಪರಮಾಣು ಸ್ಥಾವರಗಳಲ್ಲಿ ಒಂದಾಗಿರುವ ಝಪೋರಿಝಿಯಾ ಸ್ಥಾವರವನ್ನು ಯುದ್ಧದ ಪ್ರಾರಂಭಿಕ ಹಂತದಲ್ಲೇ ರಶ್ಯ ಸೇನೆ ವಶಕ್ಕೆ ಪಡೆದಿತ್ತು. ಸ್ಥಾವರದ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಂಡಿನ ದಾಳಿ ನಡೆಸುವ ಮೂಲಕ ಸ್ಥಾವರಕ್ಕೆ ಅಪಾಯ ತಂದೊಡ್ಡಿರುವುದಾಗಿ ಉಕ್ರೇನ್ ಹಾಗೂ ರಶ್ಯ ಪರಸ್ಪರರ ಮೇಲೆ ಆರೋಪ ಮಾಡುತ್ತಿವೆ.