ಜೆಇಇ-ಅಡ್ವಾನ್ಸ್ಡ್ ಫಲಿತಾಂಶ ಪ್ರಕಟ: ಕರ್ನಾಟಕದ ಶಿಶಿರ್ ದೇಶಕ್ಕೆ ಅಗ್ರಸ್ಥಾನಿ

JEE Advanced AIR 1 Shishir
ಹೊಸದಿಲ್ಲಿ,ಸೆ.11: ಐಐಟಿ ಪ್ರವೇಶ ಪರೀಕ್ಷೆ ಜೆಇಇ-ಅಡ್ವಾನ್ಸ್ಡ್ ಫಲಿತಾಂಶ ರವಿವಾರ ಪ್ರಕಟಗೊಂಡಿದ್ದು,ಬೆಂಗಳೂರಿನ ಆರ್.ಕೆ.ಶಿಶಿರ್ (17) ದೇಶಕ್ಕೇ ಅಗ್ರಸ್ಥಾನಿಯಾಗಿ ಹೊರಹೊಮ್ಮಿದ್ದಾರೆ. ಐಐಟಿ ಬಾಂಬೆ ವಲಯದಿಂದ ಪರೀಕ್ಷೆಯನ್ನು ಬರೆದಿದ್ದ ಶಿಶಿರ್ ಒಟ್ಟು 360 ಅಂಕಗಳ ಪೈಕಿ 314 ಅಂಕಗಳನ್ನು ಗಳಿಸಿದ್ದಾರೆ.
ಬೆಂಗಳೂರಿನ ನಾರಾಯಣ ಟೆಕ್ನೋ ಸ್ಕೂಲ್ ನ ವಿದ್ಯಾರ್ಥಿಯಾಗಿರುವ ಶಿಶಿರ್ ಈ ಮೊದಲು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ)ಯ ಫಾರ್ಮಸಿ ವಿಭಾಗದಲ್ಲಿ ಮೊದಲ ರ್ಯಾಂಕ್ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದ್ದರು.
ಪೋಲು ಲಕ್ಷ್ಮೀ ಸಾಯಿ ಲೋಹಿತ ರೆಡ್ಡಿ ಮತ್ತು ಥಾಮಸ್ ಬಿಜು ಚೀರಮ್ವೆಲಿಲ್ ಅನುಕ್ರಮವಾಗಿ ದ್ವಿತೀಯ ಮತ್ತು ತೃತೀಯ ರ್ಯಾಂಕ್ಗಳನ್ನು ಪಡೆದಿದ್ದಾರೆ. ದಿಲ್ಲಿ ವಲಯದ ತನಿಷ್ಕಾ ಕಾಬ್ರಾ 277 ಅಂಕಗಳೊಂದಿಗೆ ವಿದ್ಯಾರ್ಥಿನಿಯರಲ್ಲಿ ಅಗ್ರಸ್ಥಾನಿಯಾಗಿದ್ದಾರೆ. ಅಖಿಲ ಭಾರತ ಮಟ್ಟದಲ್ಲಿ 16ನೇ ರ್ಯಾಂಕ್ ಅನ್ನು ಅವರು ಪಡೆದಿದ್ದಾರೆ.
ಜೆಇಇ-ಅಡ್ವಾನ್ಸ್ಡ್ ನಲ್ಲಿ ತೇರ್ಗಡೆಗೊಂಡ 500 ಅಗ್ರ ಅಭ್ಯರ್ಥಿಗಳ ಪೈಕಿ 133 ಅಭ್ಯರ್ಥಿಗಳು ಐಐಟಿ ದಿಲ್ಲಿ ವಲಯಕ್ಕೆ ಸೇರಿದವರಾಗಿದ್ದಾರೆ. ಐಐಟಿ ಮದ್ರಾಸ್ ವಲಯ (132) ಮತ್ತು ಐಐಟಿ ಬಾಂಬೆ ವಲಯ (126) ನಂತರದ ಸ್ಥಾನಗಳಲ್ಲಿವೆ. ಮೊದಲ 10 ರ್ಯಾಂಕ್ ವಿಜೇತರಲ್ಲಿ ಪೋಲು ಲಕ್ಷ್ಮೀ ಸಾಯಿ ಲೋಹಿತ ರೆಡ್ಡಿ (2),ಥಾಮಸ್ ಬಿಜು ಚೀರಮ್ವೆಲಿಲ್ (3),ವಂಗಪಲ್ಲಿ ಸಾಯಿ ಸಿದ್ಧಾರ್ಥ (4),ಪೊಲಿಶೆಟ್ಟಿ ಕಾರ್ತಿಕೇಯ (6) ಮತ್ತು ಧೀರಜ್ ಕುರುಕುಂಡ (8) ಈ ಐವರು ಐಐಟಿ ಮದ್ರಾಸ್ ವಲಯದಿಂದ ಪರೀಕ್ಷೆ ಬರೆದಿದ್ದರು.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ದೇಶಾದ್ಯಂತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶಕ್ಕಾಗಿ ನಡೆಸುವ ಜೆಇಇ-ಮೇನ್ ಜಂಟಿ ಪ್ರವೇಶ ಪರೀಕ್ಷೆಯು (ಜೆಇಇ)-ಅಡ್ವಾನ್ಸ್ಡ್ ಗೆ ಅರ್ಹತಾ ಪರೀಕ್ಷೆಯಾಗಿದೆ. ಈ ವರ್ಷ 1.5 ಲ.ಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು,40,712 ಅಭ್ಯರ್ಥಿಗಳು ತೇರ್ಗಡೆಗೊಂಡಿದ್ದಾರೆ. ಈ ಪೈಕಿ 6,516 ಮಹಿಳಾ ಅಭ್ಯರ್ಥಿಗಳಾಗಿದ್ದಾರೆ.
jeeadv.ac.in ಅಭ್ಯರ್ಥಿಗಳು ತಮ್ಮ ಅಂಕಪಟ್ಟಿಗಳನ್ನು ಅಧಿಕೃತ ಜೆಇಇ ಅಡ್ವಾನ್ಸ್ಡ್ ವೆಬ್ಸೈಟ್ ನಲ್ಲಿ ಪರಿಶೀಲಿಸಬಹುದಾಗಿದೆ. ಈ ಪ್ರತಿಷ್ಠಿತ ಐಟಿಐಗಳಲ್ಲಿ ಪ್ರವೇಶ ಪಡೆಯಲು ಈಗ ಅಭ್ಯರ್ಥಿಗಳು ಜಂಟಿ ಸೀಟ್ ಹಂಚಿಕೆ (ಜೆಒಎಸ್ಎಎ 2022)ಕ್ಕೆ ಹಾಜರಾಗುವುದು ಅಗತ್ಯವಾಗಿದೆ. ಜೆಒಎಸ್ಎಎ ಕೌನ್ಸೆಲಿಂಗ್ ಸೆ.12ರಿಂದ ಆರಂಭಗೊಳ್ಳಲಿದೆ. 23 ಪ್ರತಿಷ್ಠಿತ ಐಐಟಿಗಳಲ್ಲಿ ಒಟ್ಟು 16,598 ಸೀಟ್ಗಳು ಲಭ್ಯವಿದ್ದು,ಕಳೆದ ವರ್ಷ (16,232)ಕ್ಕಿಂತ ಹೆಚ್ಚಾಗಿದೆ.
ಫಲಿತಾಂಶದೊಂದಿಗೆ ಅಂತಿಮ ಕೀ ಉತ್ತರಗಳನ್ನೂ ಪ್ರಕಟಿಸಲಾಗಿದೆ.







