ಖಾಸಗಿ ಮದರಸಗಳ ಸಮೀಕ್ಷೆಗೆ ಉ.ಪ್ರ. ಸರಕಾರ ಸಿದ್ಧ: ಆತಂಕದಲ್ಲಿ ಧಾರ್ಮಿಕ ಶಿಕ್ಷಣ ಸಂಸ್ಥೆಗಳ ಮಾಲಕರು

ಲಕ್ನೋ, ಸೆ. 10: ಉತ್ತರಪ್ರದೇಶ ಸರಕಾರ ಖಾಸಗಿ ಮದರಸಗಳ ಸಮೀಕ್ಷೆ ನಡೆಸಲು ಸಿದ್ಧವಾಗಿರುವುದರಿಂದ, ಜಮೀಯತ್ ಉಲಮಾ ಎ ಹಿಂದ್ ತಮ್ಮ ಸಂಸ್ಥೆಗಳನ್ನು ಕಾನೂನುಬಾಹಿರವೆಂದು ಘೋಷಿಸಬಹುದು ಹಾಗೂ ಬುಲ್ಡೋಜರ್ ಬಳಸಿ ನೆಲಸಮಗೊಳಿಸಬಹುದು ಎಂದು ದಾರ್ಮಿಕ ಶಿಕ್ಷಣಾ ಸಂಸ್ಥೆಗಳ ಮಾಲಕರು ಆತಂಕಗೊಂಡಿದ್ದಾರೆ.
ಹೊಸದಿಲ್ಲಿಯಲ್ಲಿ ಸೆಪ್ಟಂಬರ್ 6ರಂದು ದೇವ್ ಬಂದ್ ದಾರ್ಮಿಕ ಸಂಸ್ಥೆಗೆ ಸೇರಿದ ಇಸ್ಲಾಮ್ ವಿದ್ವಾಂಸರ ಪ್ರಮುಖ ಸಂಘಟನೆಗಳಲ್ಲಿ ಒಂದಾದ ಜಮೀಯತ್ ಉಲೆಮಾ ಎ ಹಿಂದ್‌ನ ಸಭೆಯಲ್ಲಿ ಈ ಆತಂಕ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಆತಂಕಕ್ಕೆ ಯಾವುದೇ ಆಧಾರವಿಲ್ಲ ಎಂದು ಕೇಂದ್ರದ ಸಹಾಯಕ ಸಚಿವ ದಾನಿಶ್ ಅಝಾದ್ ಅನ್ಸಾರಿ ಅವರು ಹೇಳಿದ್ದಾರೆ.
ಜಮೀಯತ್ ಉಲಮಾ ಎ ಹಿಂದ್‌ನ ಅಧ್ಯಕ್ಷ ಮೌಲನಾ ಅರ್ಶದ್ ಮದನಿ, ‘‘ಸರಕಾರ ಖಾಸಗಿ ಮದರಸಗಳ ಸಮೀಕ್ಷೆ ನಡೆಸಲು ಬಯಸಿದರೆ, ಯಾರಿಂದಲೂ ಯಾವುದೇ ಆಕ್ಷೇಪ ಇಲ್ಲ. ಆದರೆ, ನಮ್ಮ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ನಡೆಸದಂತೆ ಕಾಳಜಿ ವಹಿಸಬೇಕು’’ ಎಂದಿದ್ದಾರೆ.
ಮುಸ್ಲಿಂ ಸಮುದಾಯದ ಅಭಿಪ್ರಾಯವನ್ನು ಸರಕಾರದ ಮುಂದಿರಿಸಲು, ಕಾರ್ಯಾಚರಣೆ ಮೇಲೆ ತೀವ್ರ ನಿಗಾ ಇರಿಸಲು ಹಾಗೂ ಯಾವುದೇ ತಪ್ಪನ್ನು ವಿರೋಧಿಸಲು ಚಾಲನಾ ಸಮಿತಿ ರೂಪಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ಕ್ರಮಗಳ ಕುರಿತು ಯೋಜಿಸಲು ದಾರುಲ್ ಉಲೂಮ್ ದೇವ್ ಬಂದ್ ನಲ್ಲಿ ಸೆಪ್ಟಂಬರ್ 24ರಂದು ಸಭೆ ನಡೆಸಲು ಕೂಡ ನಿರ್ಧರಿಸಲಾಯಿತು.
ಇದಕ್ಕಿಂತ ಮೊದಲು ಎಐಎಂಐಎಂ ವರಿಷ್ಠ ಹಾಗೂ ಹೈದರಾಬಾದ್ ಸಂಸದ ಅಸದುದ್ದೀನ್ ಉವೈಸಿ ಹಾಗೂ ಬಿಎಸ್‌ಪಿ ನಾಯಕಿ ಮಾಯಾವತಿ ಅವರು ಈ ಕಾರ್ಯಾಚರಣೆ ಬಗ್ಗೆ ಧ್ವನಿ ಎತ್ತಿದ್ದರು.







