ಲಖಿಂಪುರಖೇರಿ: ಅಪ್ರಾಪ್ತೆಯ ಸಾಮೂಹಿಕ ಅತ್ಯಾಚಾರ; ಐವರು ವಶಕ್ಕೆ

ಲಖಿಂಪುರಖೇರಿ, ಸೆ. 10: ಇಲ್ಲಿ 15 ವರ್ಷದ ಬಾಲಕಿಯನ್ನು ಸಾಮೂಹಿಕ ಅತ್ಯಾಚಾರಗೈದ ಆರೋಪಕ್ಕೆ ಸಂಬಂಧಿಸಿ ವಿಚಾರಣೆ ನಡೆಸಲು ಐವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ರವಿವಾರ ತಿಳಿಸಿದ್ದಾರೆ.
ಈ ಘಟನೆ ಶನಿವಾರ ರಾತ್ರಿ ನಡೆದಿದೆ. ಬಾಲಕಿ ಮನೆಗೆ ತಲುಪಿ ತನ್ನ ಹೆತ್ತವರಿಗೆ ಘಟನೆಯ ಬಗ್ಗೆ ವಿವರಿಸಿದ್ದಾಳೆ. ಕೂಡಲೇ ಅವರು ಬಾಲಕಿಯನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ ಹಾಗೂ ಮುಹಮ್ಮದಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಬಾಲಕಿಯ ಸಹೋದರ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ಅದೇ ಗ್ರಾಮದ ಐವರ ಹೆಸರನ್ನು ಉಲ್ಲೇಖಿಸಿದ್ದಾರೆ. ಅವರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅರುಣ್ ಕುಮಾರ್ ಸಿಂಗ್ ಅವರು ಹೇಳಿದ್ದಾರೆ.
‘‘ಮುಹಮ್ಮದಿ ಪೊಲೀಸ್ ಠಾಣೆ ಪ್ರದೇಶದಲ್ಲಿ ಬಾಲಕಿಯ ಅತ್ಯಾಚಾರದ ಕುರಿತ ವರದಿಯನ್ನು ಶನಿವಾರ ತಡ ರಾತ್ರಿ ಸ್ವೀಕರಿಸಿದೆವು. ಕೂಡಲೇ ಕಾರ್ಯಪ್ರವೃತ್ತವಾಗಿ ಬಾಲಕಿಯನ್ನು ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿದೆವು ಹಾಗೂ ಚಿಕಿತ್ಸೆ ಕೊಡಿಸಿದೆವು’’ ಎಂದು ಸಿಂಗ್ ಹೇಳಿದ್ದಾರೆ.
ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ ಬಾಲಕಿ ತನ್ನ ಗ್ರಾಮದ ಹಾಗೂ ತನಗೆ ಈ ಹಿಂದೆ ಪರಿಚಯವಿದ್ದ ಆರೋಪಿಗಳ ಗುರುತು ಬಹಿರಂಗಪಡಿಸಿದ್ದಾಳೆ ಎಂದು ಅವರು ತಿಳಿಸಿದ್ದಾರೆ.
ಐಪಿಸಿ ಹಾಗೂ ಪೋಕ್ಸೊ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.







