ಕರ್ನಾಟಕ ಯಕ್ಷಗಾನ ಅಕಾಡೆಮಿಯ ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ ಪ್ರಶಸ್ತಿ ಪ್ರದಾನ

ಕುಂದಾಪುರ, ಸೆ. 11: ಅನಾರೋಗ್ಯ ಪೀಡಿತ ಯಕ್ಷಗಾನ ಕಲಾವಿದರಿಗಾಗಿ ಯಕ್ಷಗಾನ ಅಕಾಡೆಮಿಯು ಸರಕಾರದಿಂದ ದೊರೆಯುವ ಅನುದಾನದ ಒಂದು ಭಾಗವನ್ನು ತೆಗೆದಿರಿಸಿ ಪ್ರತ್ಯೇಕ ನಿಧಿಯೊಂದನ್ನು ಸ್ಥಾಪಿಸಬೇಕಾದ ಅಗತ್ಯ ವಿದೆ ಎಂದು ರಾಜ್ಯ ಹಿಂದುಳಿದ ವರ್ಗಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಶ್ರೀ ಕ್ಷೇತ್ರ ಕಮಲಶಿಲೆಯ ಶ್ರೀ ಬ್ರಾಹ್ಮಿ ದುರ್ಗಾಪರಮೇಶ್ವರೀ ಕಲ್ಯಾಣ ಮಂಟಪದಲ್ಲಿ ರವಿವಾರ ನಡೆದ ಕರ್ನಾಟಕ ಯಕ್ಷಗಾನ ಅಕಾಡೆಮಿಯ ‘೨೦೨೨ನೇ ಸಾಲಿನ ಪ್ರತಿಷ್ಠಿತ ಗೌರವ ಪ್ರಶಸ್ತಿ, ಯಕ್ಷಸಿರಿ ಪ್ರಶಸ್ತಿ, ದಿ| ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಹೆಸರಿನಲ್ಲಿ ದತ್ತಿನಿಧಿ ಪ್ರಶಸ್ತಿ, ಪುಸ್ತಕ ಬಹುಮಾನ ಪ್ರಶಸ್ತಿಯನ್ನು ಪ್ರದಾನ ಮಾಡಿ ಅವರು ಮಾತನಾಡುತಿದ್ದರು
ಹರಕೆಯಾಟದ ಕಾಲ ಮಿತಿ ಬಗ್ಗೆ ಬಹಳಷ್ಟು ಚರ್ಚೆಗಳು ನಡೆಯುತ್ತಿದ್ದು, ಪ್ರೇಕ್ಷಕರು ಇರುವವರೆಗೆ ಪ್ರದರ್ಶನ ನಡೆಯಬೇಕು. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿಯೂ ಯಕ್ಷಗಾನದ ಬಗೆಗಿನ ಆಸಕ್ತಿ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಪ್ರಶಸ್ತಿ ಪುರಸ್ಕೃತರ ಪೈಕಿ ಪಟ್ಲ ಸತೀಶ್ ಶೆಟ್ಟಿ ಮಾತನಾಡಿದರು. ಅಧ್ಯಕ್ಷತೆಯನ್ನು ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ| ಜಿ.ಎಲ್. ಹೆಗಡೆ ಕುಮಟಾ ವಹಿಸಿದ್ದರು.
ಪುತ್ತಿಗೆ ರಘುರಾಮ ಹೊಳ್ಳ, ಭಾಗವತ ಚಂದಯ್ಯ, ಭಾಗವತ ಉಮೇಶ ಭಟ್ ಬಾಡ, ಪ್ರಾಚಾರ್ಯ ಕೆ.ಪಿ. ಹೆಗಡೆ, ಪಟ್ಲ ಸತೀಶ್ ಶೆಟ್ಟಿ ಅವರಿಗೆ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕೋಲ್ಯಾರು ರಾಜು ಶೆಟ್ಟಿ, ಕೃಷ್ಣ ಗಾಣಿಗ (ಕುಷ್ಟ)ಕೋಡಿ, ಕೃಷ್ಣ ನಾಯ್ಕ ಜಿ. ಬೇಡ್ಕಣಿ, ಶುಭಾನಂದ ಶೆಟ್ಟಿ, ಬಾಲಕೃಷ್ಣ ನಾಯಕ್, ಕವ್ವಾಳೆ ಗಣಪತಿ ಭಾಗ್ವತ, ಎಸ್.ಪಿ. ಅಪ್ಪಯ್ಯ, ಡಿ. ಭೀಮಯ್ಯ, ಕೊಲ್ಲೂರು ಕೊಗ್ಗ ಆಚಾರ್ಯ, ಅಜಿತ್‌ಕುಮಾರ್ ಜೈನ್ ಅವರಿಗೆ ಯಕ್ಷಸಿರಿ ಪ್ರಶಸ್ತಿ ನೀಡಲಾಯಿತು. ಇದೇ ಮೊದಲ ಬಾರಿಗೆ ದಿ| ಕರ್ಕಿ ಹಿರಿಯ ಪರಮಯ್ಯ ಹಾಸ್ಯಗಾರ ಹೆಸರಿನ ದತ್ತಿನಿಧಿ ಪ್ರಶಸ್ತಿ ಪುರಸ್ಕೃತ ಹುಕ್ಕಲಮಕ್ಕಿ ಕಮಲಾಕರ ಹೆಗಡೆ ಅವರಿಗೆ ನೀಡಿ ಗೌರವಿಸಲಾಯಿತು. ಎಲ್.ಎಸ್. ಶಾಸ್ತ್ರಿ, ವಿದ್ಯಾರಶ್ಮಿ ಪೆಲತ್ತಡ್ಕ ಅವರಿಗೆ 2021ನೇ ಸಾಲಿನ ಪುಸ್ತಕ ಪ್ರಶಸ್ತಿ ಹಾಗೂ ಬಿ. ಸಂಜೀವ ಸುವರ್ಣ ಅವರಿಗೆ 2020ನೇ ಸಾಲಿನ ಗೌರವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಶ್ರೀ ಕ್ಷೇತ್ರ ಕಮಲಶಿಲೆಯ ಆನುವಂಶಿಕ ಆಡಳಿತ ಮೊಕ್ತೇಸರ ಸಚ್ಚಿದಾನಂದ ಚಾತ್ರ, ಆಜ್ರಿ ಗ್ರಾ.ಪಂ. ಅಧ್ಯಕ್ಷ ಅಶೋಕ ಕುಲಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಅಕಾಡೆಮಿಯ ಅರ್ಥ ಸದಸ್ಯ ಸುರೇಶ್ ನಾಯ್ಕ್ ಮೊದಲಾದವರು ಉಪಸ್ಥಿತರಿದ್ದರು.
ಅಕಾಡೆಮಿ ರಿಜಿಸ್ಟಾರ್ ಎಸ್.ಎಚ್. ಶಿವರುದ್ರಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು. ಸದಸ್ಯರಾದ ದಿವಾಕರ ಹೆಗಡೆ ಸ್ವಾಗತಿಸಿ, ಕೆ.ಎಂ. ಶೇಖರ ಕಾರ್‍ಯಕ್ರಮ ನಿರೂಪಿಸಿದರು. ಕದ್ರಿ ನವನೀತ ಶೆಟ್ಟಿ ಬ್ರಿಟನ್ ರಾಣಿಗೆ ಸಂತಾಪ ಸೂಚಿಸಿದರು.







