ಜಮ್ಮುಕಾಶ್ಮೀರದಿಂದ ರಾಜ್ಯಸಭೆಗೆ ನಾಮಕರಣಗೊಂಡ ಬುಡಕಟ್ಟು ನಾಯಕ, ಆರೆಸ್ಸೆಸ್ ಕಾರ್ಯಕರ್ತ ಗುಲಾಮ್ ಅಲಿ

Ghulam Ali Khatana | Source: Twitter, @ANI
ಹೊಸದಿಲ್ಲಿ,ಸೆ.11: ಜಮ್ಮು-ಕಾಶ್ಮೀರದ ಗುರ್ಜರ್ ಮುಸ್ಲಿಮ್ ಗುಲಾಂ ಅಲಿ ಖಟಾನಾ ಅವರನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಶನಿವಾರ ರಾಜ್ಯಸಭಾ ಸದಸ್ಯರಾಗಿ ನಾಮಕರಣಗೊಳಿಸಿದ್ದಾರೆ.
ಬಿಜೆಪಿಯ ಬುಡಕಟ್ಟು ಮೋರ್ಚಾ ಮತ್ತು ಅಲ್ಪಸಂಖ್ಯಾತ ಮೋರ್ಚಾ ನಾಯಕ,ಜಮ್ಮು-ಕಾಶ್ಮೀರದಲ್ಲಿ ಪಕ್ಷದ ವಕ್ತಾರ ಹಾಗೂ ಆರೆಸ್ಸೆಸ್ ಕಾರ್ಯಕರ್ತರಾಗಿರುವ ಖಟಾನಾ (51) ಮೇಲ್ಮನೆಗೆ ನಾಮಕರಣಗೊಂಡ ಮೊದಲ ಗುರ್ಜರ್ ಮುಸ್ಲಿಮ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಜಮ್ಮು ನಿವಾಸಿಯಾಗಿರುವ ಖಟಾನಾ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದು,ವಿದ್ಯಾರ್ಥಿ ರಾಜಕೀಯದಲ್ಲಿ ಸಕ್ರಿಯರಾಗಿದ್ದರು. 2001ರಲ್ಲಿ ಜಮ್ಮು-ಕಾಶ್ಮೀರ ನ್ಯಾಷನಲ್ ಪ್ಯಾಂಥರ್ಸ್ ಪಾರ್ಟಿಗೆ ಸೇರ್ಪಡೆಗೊಳ್ಳುವ ಮೂಲಕ ವಿಶಾಲ ರಾಜಕೀಯ ಕ್ಷೇತ್ರಕ್ಕೆ ಹೆಜ್ಜೆಯಿರಿಸಿದ್ದರು.
‘ಮಹಾನ್ ಸುಧಾರಕ ರಾಜಾ ಹರಿಸಿಂಗ್ ಅವರಿಂದ ಪ್ರಭಾವಿತನಾಗಿದ್ದ ನಾನು ಜನರಿಗಾಗಿ ಶ್ರಮಿಸಲು ಬಯಸಿದ್ದೆ. ಪ್ಯಾಂಥರ್ಸ್ ಪಾರ್ಟಿಯಲ್ಲಿ ಕೆಲವು ವರ್ಷಗಳನ್ನು ಕಳೆದ ಬಳಿಕ ನನ್ನ ಬುನಾದಿಯನ್ನು ವಿಸ್ತರಿಸಿಕೊಳ್ಳುವ ಅಗತ್ಯವಿದೆ ಎಂದು ನನಗೆ ಅನ್ನಿಸಿತ್ತು ಮತ್ತು ಆರೆಸ್ಸೆಸ್ ಜೊತೆಗೆ ಗುರುತಿಸಿಕೊಂಡಿದ್ದೆ ’ಎಂದು ಖಟಾನಾ ಸುದ್ದಿಸಂಸ್ಥೆಗೆ ತಿಳಿಸಿದರು.
2008ರಲ್ಲಿ ಆರೆಸ್ಸೆಸ್ ಸೇರಿದ್ದ ಖಟಾನಾ ಬಿಜೆಪಿಗೆ ಸೇರುವ ಮುನ್ನ ಎರಡು ವರ್ಷಗಳ ಕಾಲ ಸಂಘಟನೆಗಾಗಿ ದುಡಿದಿದ್ದರು. 2010ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದು,ಅವರನ್ನು ಪಕ್ಷದ ಅಲ್ಪಸಂಖ್ಯಾತ ಮತ್ತು ಬುಡಕಟ್ಟು ಮೋರ್ಚಾಗಳ ಉಸ್ತುವಾರಿಯನ್ನಾಗಿ ಮಾಡಲಾಗಿತ್ತು. ಬಿಜೆಪಿಗೆ ಸೇರಿದಾಗಿನಿಂದ ಉತ್ತರ ಪ್ರದೇಶ,ಜಮ್ಮು,ಗುಜರಾತ್ ಮತ್ತು ಇತರ ಹಲವು ರಾಜ್ಯಗಳಲ್ಲಿ ಬುಡಕಟ್ಟು ಮೋರ್ಚಾದ ರಾಷ್ಟ್ರಿಯ ಕಾರ್ಯಕಾರಣಿ ಸದಸ್ಯನಾಗಿ ದುಡಿದಿದ್ದು, ಅಲ್ಪಸಂಖ್ಯಾತ ಮೋರ್ಚಾದ ಪ್ರಮುಖ ಸದಸ್ಯನೂ ಆಗಿದ್ದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳು,ದಲಿತರು,ಆದಿವಾಸಿಗಳು ಮತ್ತು ಇತರರೊಂದಿಗೆ ತಳಮಟ್ಟದಲ್ಲಿ ಕೆಲಸ ಮಾಡಿದ್ದೇನೆ ಎಂದೂ ಖಟಾನಾ ತಿಳಿಸಿದರು.







