ಕಾರ್ಲೋಸ್ ಅಲ್ಕರಾಝ್‌ಗೆ ಯುಎಸ್ ಓಪನ್ ಪ್ರಶಸ್ತಿ; ವಿಶ್ವದಾಖಲೆ
ವಾಷಿಂಗ್ಟನ್: ಹತ್ತೊಂಬತ್ತು ವರ್ಷದ ಸ್ಪೇನ್ ಆಟಗಾರ ಕಾರ್ಲೋಸ್ ಅಲ್ಕರಾಝ್ ರವಿವಾರ ಯುಎಸ್ ಓಪನ್ ಕಿರೀಟ ಮುಡಿಗೇರಿಸಿಕೊಳ್ಳುವ ಮೂಲಕ ವಿಶ್ವದಾಖಲೆಗೆ ಭಾಜನರಾದರು.
ಹದಿಹರೆಯದಲ್ಲಿ ಗ್ರ್ಯಾಂಡ್ ಸ್ಲಾಂ ಗೆದ್ದ ಕೀರ್ತಿಗೆ ಭಾಜನರಾಗುವ ಜತೆಗೆ ವಿಶ್ವ ಟೆನಿಸ್ ಇತಿಹಾಸದಲ್ಲೇ ಟೆನಿಸ್ ರ‍್ಯಾಂಕಿಂಗ್ ನಲ್ಲಿ ಅಗ್ರಸ್ಥಾನಕ್ಕೇರಿದ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡರು.
ರವಿವಾರ ನಡೆದ ಯುಎಸ್ ಓಪನ್ ಫೈನಲ್ ನಲ್ಲಿ ಕಾರ್ಲೋಸ್ ಅಲ್ಕರಾಝ್ ಅವರು ಕ್ಯಾಸ್ಪರ್ ರೂಡ್ ಸವಾಲನ್ನು 6-4, 2-6, 7-6(1), 6-3 ಅಂತರದಿಂದ ಹಿಮ್ಮೆಟ್ಟಿಸಿ ಚೊಚ್ಚಲ ಗ್ರ್ಯಾಂಡ್‍ಸ್ಲಾಂ ಗೆದ್ದರು. ಅಲ್ಕರಾಝ್ ಅವರು ಇದುವರೆಗೆ ಎರಡು ಮಾಸ್ಟರ್ಸ್ ಪ್ರಶಸ್ತಿಗಳು ಸೇರಿದಂತೆ ಐದು ಎಟಿಪಿ ಟೂರ್ ಸಿಂಗಲ್ಸ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಕೇವಲ 19ನೇ ವಯಸ್ಸಿನಲ್ಲೇ ಗ್ರ್ಯಾಂಡ್‍ಸ್ಲಾಂ ಗೆದ್ದ ಆರಡಿ ಎರಡು ಇಂಚು ಎತ್ತರದ ಆಟಗಾರ 2003ನೇ ಇಸ್ವಿಯ ಮೇ 5ರಂದು ಹುಟ್ಟಿದರು.
ಆರಂಭದಲ್ಲೇ ಆಕ್ರಮಣಕಾರಿ ಆಟಕ್ಕಿಳಿದ ಅಲ್ಕರಾಝ್ ಮೊದಲ ಸೆಟ್ ಗೆದ್ದರು. ಆದರೆ ಪ್ರತಿರೋಧ ತೋರಿದ ರೂಡ್ ಎರಡನೇ ಸೆಟ್‍ನಲ್ಲಿ ಪಾರಮ್ಯ ಸಾಧಿಸಿದರು. ಮೂರನೇ ಸೆಟ್ ಟೈಬ್ರೇಕರ್‍ಗೆ ಸಾಗಿ, ಕ್ಯಾಸ್ಪರ್ ನಿರಾಸೆ ಅನುಭವಿಸಿದರು. 7-6 (1) ಅಂತರದಿಂದ ಸೆಟ್ ಗೆದ್ದು ಮುನ್ನಡೆ ಸಾಧಿಸಿದ ಅಲ್ಕರಾಝ್ ಐದನೇ ಸೆಟ್ಟನ್ನು 6-3 ಅಂತರದಿಂದ ಗೆದ್ದರು. ಈ ಗೆಲುವಿನೊಂದಿಗೆ ಅಲ್ಕರಾಝ್ ವಿಶ್ವ ರ‍್ಯಾಂಕಿಂಗ್ ನಲ್ಲಿ ಅಗ್ರಪಟ್ಟ ಸಂಪಾದಿಸಿದರು.