Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ವ್ಯವಸ್ಥೆಯ ವೈಫಲ್ಯ ಸಾರುವ ಬೆಂಗಳೂರು ಮಳೆ...

ವ್ಯವಸ್ಥೆಯ ವೈಫಲ್ಯ ಸಾರುವ ಬೆಂಗಳೂರು ಮಳೆ ಅವಾಂತರ

ವಾರ್ತಾಭಾರತಿ ಅವಲೋಕನ

ಆರ್. ಜೀವಿಆರ್. ಜೀವಿ12 Sept 2022 9:58 AM IST
share
ವ್ಯವಸ್ಥೆಯ ವೈಫಲ್ಯ ಸಾರುವ ಬೆಂಗಳೂರು ಮಳೆ ಅವಾಂತರ

ಈಚಿನ ವರ್ಷಗಳಲ್ಲಿ ಮಳೆ ಎಂಬ ಚೈತನ್ಯದಾಯಿ ಸಂಗತಿ ಭಯ ಹುಟ್ಟಿಸುತ್ತಿದೆ. ಮತ್ತೆ ಮತ್ತೆ ಜನರು ಬಲಿಯಾಗುತ್ತಿದ್ದರೂ, ಬವಣೆಗೆ ತುತ್ತಾಗುತ್ತಿದ್ದರೂ ಎಚ್ಚೆತ್ತುಕೊಳ್ಳದ ಸರಕಾರದ ಜಡತ್ವ, ಪ್ರವಾಹ ನಿರ್ವಹಣೆಯಲ್ಲಿನ ವಿಫಲತೆ, ಅವೈಜ್ಞಾನಿಕ ಅಭಿವೃದ್ಧಿ ಇವೆಲ್ಲವೂ ಇದಕ್ಕೆ ಕಾರಣ. ಬೆಂಗಳೂರಲ್ಲಂತೂ ಮಳೆ ಭಯಾನಕ ಸನ್ನಿವೇಶವನ್ನೇ ಸೃಷ್ಟಿಸುತ್ತಿದೆ. ಜನಜೀವನ ತತ್ತರಿಸಿ ಹೋಗುವಂತಾಗಿದೆ. ಇದಕ್ಕೊಂದು ಕೊನೆಯೇ ಇಲ್ಲವೆ?

ಮಳೆ ಮಳೆ ಮಳೆ... ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಬೆಂಗಳೂರಿನಲ್ಲಿ ಹೇಳತೀರದಂಥ ಅಧ್ವಾನ. ಪ್ರವಾಹ ತಂದಿಟ್ಟ ನಡುಕದಿಂದ ಬೆಂಗಳೂರು ಮಾತ್ರವಲ್ಲದೆ ಸುತ್ತಲಿನ ಊರುಗಳಿಗೂ ಬಿಡುಗಡೆ ಸಿಕ್ಕಿಲ್ಲ. ಎಷ್ಟೆಲ್ಲ ಕೆರೆಗಳನ್ನು ನುಂಗಿ ನಿಂತಿರುವ ಬೆಂಗಳೂರು ಆ ಪ್ರಮಾದದ ಫಲಾನುಭವಿಯಂತೆ ಪ್ರತಿಬಾರಿಯೂ ಪಾಡು ಅನುಭವಿಸುತ್ತಿದೆ. ಮಳೆ ಬಂದಾಗಲೆಲ್ಲ ಬೆಂಗಳೂರಿಗೆ ಬೆಂಗಳೂರೇ ಕೆರೆಯಂತಾಗುತ್ತಿದೆ. ಮಳೆ ಬಂತೆಂದರೆ ಜನರು ನಿದ್ದೆಗೆಡುವಂಥ ಸ್ಥಿತಿ ಬೆಂಗಳೂರಿನ ಬಹುತೇಕ ಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಸರ್ವೇಸಾಮಾನ್ಯ ಎನ್ನುವಂತಾಗಿದೆ. ಮಳೆ ಬಂದು ನೆರೆಗೆ ಬೆಂಗಳೂರು ಕಂಗೆಡುವಾಗೊಮ್ಮೆ ಸರಕಾರದಲ್ಲಿರುವವರಿಂದ ಮತ್ತು ರಾಜಕಾರಣಿಗಳಿಂದ ಎಲ್ಲ ಸರಿಪಡಿಸುವ ಮಾತು ಬರುತ್ತದೆ . ಮಳೆ ಹೋದ ಬೆನ್ನಲ್ಲೇ ಎಲ್ಲವೂ ಎಲ್ಲರಿಗೂ ಮರೆತುಹೋಗುತ್ತದೆ. ಕಳೆದ ಕೆಲವು ವರ್ಷಗಳಿಂದ ಇದು ನಡೆದುಕೊಂಡೇ ಬಂದಿದೆ. ಆದರೆ, ಇದೆಲ್ಲದರ ಮೂಲ ಗೊತ್ತಿದ್ದೂ ಸರಿಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಯಾರಿಗೂ ಇಚ್ಛಾಶಕ್ತಿ ಇಲ್ಲ. ಮಳೆ ಬಂದಾಗಲೆಲ್ಲ ಗೋಳು ತಪ್ಪಿದ್ದಲ್ಲ. ಈ ಸಲವೂ ಮತ್ತದೇ ಮರುಕಳಿಸಿದೆ. ಆಗಲೇ ಒಂದು ಜೀವದ ಬಲಿಯಾಗಿದೆ. ಜಲಾವೃತ ರಸ್ತೆಯಲ್ಲಿ ಸ್ಕೂಟಿಯಿಂದ ಬಿದ್ದ ಯುವತಿ ಆಸರೆಗಾಗಿ ವಿದ್ಯುತ್ ಕಂಬ ಹಿಡಿದು ಜೀವ ಕಳೆದುಕೊಂಡಿದ್ದಾಳೆ.

ಎರಡೇ ತಿಂಗಳಲ್ಲಿ ಎರಡನೇ ಪ್ರವಾಹ ಇದು ಬೆಂಗಳೂರಿನಲ್ಲಿ. ಒಂದೆಡೆ ಜನ ಗೋಳಾಡುತ್ತಿದ್ದರೆ ಇನ್ನೊಂದೆಡೆ ರಾಜಕಾರಣಿಗಳು ತಪ್ಪು ಅವರದು, ತಪ್ಪು ಇವರದು ಎಂದು ಹಗ್ಗಜಗ್ಗಾಟದಲ್ಲಿ ಕೆಸರೆರಚಾಡಿಕೊಳ್ಳುತ್ತ ಸಮಯ ಕಳೆಯುತ್ತಿದ್ದಾರೆ. ಈ ಪರಿಸ್ಥಿತಿಗೆಲ್ಲ ಕಾಂಗ್ರೆಸ್ ಕಾರಣ ಎಂದು ನಿರಾಳವಾಗಿ ಹೇಳಿಬಿಡಬಲ್ಲರು ಸಿಎಂ. ಬೆಂಗಳೂರಿನ ಈ ಸಲದ ಮಳೆ ದಾಖಲೆ ಪ್ರಮಾಣದ ಮಳೆ ಎನ್ನುವುದೇನೋ ಹೌದು. ಆದರೆ ಯಾವ ಪರಿಹಾರವನ್ನೂ ಕಂಡುಕೊಳ್ಳಲಾರದ ಸರಕಾರಕ್ಕೆ ಇದೇ ಒಂದು ನೆಪ. ಅಂತೂ ರಾಜಕಾರಣ ಮುಗಿಯುವುದಿಲ್ಲ.

ಇದೇನೇ ಇರಲಿ. ಈ ಸಲ ಮಳೆ ದೊಡ್ಡ ಮಟ್ಟದಲ್ಲಿ ಬೆಂಗಳೂರು ತತ್ತರಗೊಳ್ಳುವಂತೆ ಮಾಡಿತೆಂಬುದು ನಿಜ. ಭಾರತೀಯ ಹವಾಮಾನ ಇಲಾಖೆ ನೀಡಿದ ಮಾಹಿತಿ ಪ್ರಕಾರ, ಆಗಸ್ಟ್ ತಿಂಗಳಲ್ಲಿ ಬೆಂಗಳೂರಿನಲ್ಲಿ 377 ಮಿ.ಮೀ. ಮಳೆಯಾಗಿದೆ. ಇದು ಬೆಂಗಳೂರಿನ ಇತಿಹಾಸದಲ್ಲೇ ಒಂದು ತಿಂಗಳಲ್ಲಿ ಸುರಿದ ಎರಡನೇ ಅತಿಹೆಚ್ಚು ಮಳೆ ಪ್ರಮಾಣ. 1998ರಲ್ಲಿ ಇಲ್ಲಿ 387.1 ಮಿ.ಮೀ. ಮಳೆಯಾಗಿದ್ದು ಈಗಲೂ ದಾಖಲೆ. 2011 ಮತ್ತು 2017ರಲ್ಲಿ 250 ಮಿ.ಮೀ.ಗಿಂತಲೂ ಹೆಚ್ಚು ಮಳೆಯಾಗಿದ್ದು ಬಿಟ್ಟರೆ ಕಳೆದ 10 ವರ್ಷಗಳಿಂದ ಬೆಂಗಳೂರಿನಲ್ಲಿ ಆಗಸ್ಟ್ ತಿಂಗಳಲ್ಲಿ ಮಳೆ ಪ್ರಮಾಣ 200 ಮಿ.ಮೀ. ದಾಟಿರಲಿಲ್ಲ. ಈ ವರ್ಷ ಜೂನ್‌ನಿಂದ 3 ತಿಂಗಳಲ್ಲಿ 769 ಮಿ.ಮೀ. ಮಳೆಯಾಗಿದೆ. ಸೆಪ್ಟಂಬರ್ ತಿಂಗಳಲ್ಲೂ ಇದು ಮುಂದುವರಿಯುತ್ತಿದೆ. ಇದೂ ಕೂಡ ಅಪರೂಪವೇ. ಬೆಂಗಳೂರಿನಲ್ಲಿ ಈ ಮೂರು ತಿಂಗಳ ಅವಧಿಯಲ್ಲಿ ಸರಾಸರಿಯಾಗಿ ಬೀಳುವ ಮಳೆ 425 ಮಿ.ಮೀ. ಮಾತ್ರ. ಈ ಬಾರಿ ಹೆಚ್ಚೂ ಕಡಿಮೆ ಎರಡು ಪಟ್ಟು ಹೆಚ್ಚು ಮಳೆಯಾಗಿದೆ.

ಸೆಪ್ಟಂಬರ್ 1 ರಿಂದ 5 ರವರೆಗೆ ಕೆಲವು ಪ್ರದೇಶಗಳಲ್ಲಿ ವಾಡಿಕೆಗಿಂತ ಶೇ.150ರಷ್ಟು ಹೆಚ್ಚು ಮಳೆಯಾಗಿದೆ. ಮಹದೇವಪುರ, ಬೊಮ್ಮನಹಳ್ಳಿ, ಕೆ.ಆರ್.ಪುರಂ ಭಾಗದಲ್ಲಿ ಶೇ. 307ರಷ್ಟು ಹೆಚ್ಚು ಮಳೆಯಾಗಿದೆ. ಕಳೆದ 42 ವರ್ಷಗಳಲ್ಲಿಯೇ ಇದು ಸೆಪ್ಟಂಬರ್ ತಿಂಗಳಿನಲ್ಲಿ ಆಗಿರುವ ಅತೀ ಹೆಚ್ಚಿನ ಮಳೆ. ಬೆಂಗಳೂರಿನ 164 ಕೆರೆಗಳೂ ತುಂಬಿ ಹರಿದಿವೆ. ದೊಡ್ಡ ಪ್ರಮಾಣದ ಪ್ರವಾಹ ಬೆಂಗಳೂರಿನ ದಕ್ಷಿಣ ವಲಯದಲ್ಲಿ ಆಗಿದೆ.

ಯಾಕೆ ಹೀಗಾಗುತ್ತಿದೆ? ಅತಿವೃಷ್ಟಿಯ ವೈಪರೀತ್ಯಕ್ಕೆ ಪರಿಸರದಲ್ಲಿನ ಸಮತೋಲನ ತಪ್ಪಿರುವುದು ಕಾರಣವಾದರೆ, ಹೀಗೆ ಮಳೆಯಾದಾಗ ಬೆಂಗಳೂರಿನಂಥ ನಗರದಲ್ಲಿ ಪ್ರವಾಹ ಸ್ಥಿತಿ ಉಂಟಾಗುವುದು ಅತಿರೇಕದ ನಗರೀಕರಣದಿಂದಾಗಿ. ಹೆಚ್ಚುತ್ತಿರುವ ಇಲ್ಲಿನ ಜನಸಂಖ್ಯೆ, ನೆಲೆಗಾಗಿ ಜಲಮೂಲಗಳನ್ನೇ ಒತ್ತುವರಿ ಮಾಡುವ ಪರಿಪಾಠ. ಪರಿಣಾಮವಾಗಿ ಎಷ್ಟೋ ಕಡೆಗಳಲ್ಲಿ ಜಲಮೂಲಗಳೇ ಬತ್ತಿವೆ. ನಗರದಲ್ಲಿ ಅತಿರೇಕದ ಮಟ್ಟದಲ್ಲಿ ಜಲಮೂಲಗಳನ್ನು ಒತ್ತುವರಿ ಮಾಡಲಾಗುತ್ತಿದೆ. ಕೆರೆ, ಕಟ್ಟೆಗಳ ಜಾಗದಲ್ಲಿ ಯೋಜಿತವಲ್ಲದ ಕಟ್ಟಡಗಳು ತಲೆಎತ್ತಿವೆ. ಮಳೆನೀರು ಹರಿದುಹೋಗಲು ಮಾರ್ಗ ಕಲ್ಪಿಸುವ ಜಲಾನಯನ ಪ್ರದೇಶಗಳೇ ಇಲ್ಲವಾದಾಗ ಮಳೆ ನೀರು ರಸ್ತೆ, ಬಡಾವಣೆಗಳು ಸೇರಿದಂತೆ ವಸತಿ ಪ್ರದೇಶಗಳಿಗೆ ನುಗ್ಗುತ್ತದೆ. ಈಗ ಆಗುತ್ತಿರುವುದು ಕೂಡ ಇದೇ ಎನ್ನುತ್ತಾರೆ ತಜ್ಞರು. ಬೆಂಗಳೂರಿನಲ್ಲಿ ಪ್ರತಿಸಲವೂ ಮಳೆಯಿಂದ ಹಾನಿಗೆ ಒಳಗಾಗುವ ಸುಮಾರು 517ಕ್ಕೂ ಹೆಚ್ಚು ತಗ್ಗು ಪ್ರದೇಶಗಳಿವೆ ಎಂಬುದು ಒಂದು ಅಂದಾಜು. ಪ್ರತಿಬಾರಿ ಮಳೆ ದೊಡ್ಡ ಪ್ರಮಾಣದಲ್ಲಿ ಆದಾಗಲೂ ಈ ತಗ್ಗುಪ್ರದೇಶಗಳಲ್ಲಿ ಸ್ಥಿತಿ ಅಯೋಮಯವಾಗುತ್ತದೆ. ಮನೆ ಮುಳುಗಡೆ, ಮನೆ ಕುಸಿತ, ರಸ್ತೆ ಕುಸಿತ, ನೀರು ನುಗ್ಗುವುದು ಹೀಗೆ ನೂರಾರು ತೊಂದರೆಗಳು ಇಲ್ಲಿನ ಜನಜೀವನವನ್ನೇ ಅಸ್ತವ್ಯಸ್ತವಾಗಿಸುತ್ತವೆ. ಬಿಬಿಎಂಪಿ ಗುರುತಿಸಿರುವ ಪ್ರಕಾರ, ಪ್ರವಾಹಕ್ಕೆ ಮತ್ತೆ ಮತ್ತೆ ಒಳಗಾಗುವ ಪ್ರದೇಶಗಳು 209. ಅವುಗಳಲ್ಲಿ 153 ಸೂಕ್ಷ್ಮ ಮತ್ತು 53 ಅತ್ಯಂತ ಸೂಕ್ಷ್ಮವಾಗಿವೆ. ಬೆಂಗಳೂರಿನ ಜೆಪಿ ನಗರ, ಪುಟ್ಟೇನಹಳ್ಳಿ, ಬಿಟಿಎಂ, ಕೋರಮಂಗಲ, ಈಜಿಪುರದ ತಗ್ಗು ಪ್ರದೇಶಗಳು ಹೀಗೆ ಮರಳಿ ಮರಳಿ ಪ್ರವಾಹಕ್ಕೆ ಸಾಕ್ಷಿಯಾಗುತ್ತವೆ. ಐಟಿ ಕಂಪೆನಿಗಳು ಹೆಚ್ಚಿರುವ ಪ್ರದೇಶಗಳು ಕೂಡ ಈ ಬಾರಿ ಕೆರೆಗಳಂತಾಗಿದ್ದವು. ಸರ್ಜಾಪುರದಲ್ಲಿರುವ ರೈನ್‌ಬೋ ಡ್ರೈವ್ ಲೇಔಟ್ ಹಾಗೂ ಸುತ್ತಮುತ್ತಲ ಪ್ರದೇಶಗಳು ಅಕ್ಷರಶಃ ಕೆರೆಗಳಾಗಿದ್ದವು. 20 ವರ್ಷಗಳ ಹಿಂದೆ ನಿರ್ಮಾಣವಾದ ರೈನ್‌ಬೋ ಡ್ರೈವ್ ಬಡಾವಣೆ ಕೂಡ ರಾಜಕಾಲುವೆ ಒತ್ತುವರಿ ಮಾಡಿಯೇ ಕಟ್ಟಿದ್ದು. ಈ ಬಡಾವಣೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ಕಟ್ಟಡಗಳನ್ನು ಎತ್ತರಿಸಿ ಕಟ್ಟಲಾಗಿದೆ. ಪಕ್ಕದ ಜುನ್ನಸಂದ್ರ ಮತ್ತು ಹಾಲನಾಯಕನಹಳ್ಳಿ ಗ್ರಾಮಗಳಿಂದ ಮಳೆನೀರನ್ನು ರೈನ್‌ಬೋ ಡ್ರೈವ್ ಬಡಾವಣೆಗೆ ತಿರುಗಿಸಲಾಗಿದೆ. ಇಲ್ಲಿಂದ ಈ ನೀರು ಸರ್ಜಾಪುರ ಮುಖ್ಯರಸ್ತೆಯಲ್ಲಿರುವ ಚರಂಡಿಗೆ ಹರಿದುಹೋಗುತ್ತದೆ. ಆದರೆ, ಮೊದಲೇ ತಗ್ಗು ಪ್ರದೇಶದಲ್ಲಿರುವ ರೈನ್‌ಬೋ ಡ್ರೈವ್ ಬಡಾವಣೆ ಹೆಚ್ಚುವರಿ ನೀರಿನ ಹರಿವನ್ನು ತಾಳಿಕೊಳ್ಳದ ಸ್ಥಿತಿಯಲ್ಲಿದೆ. ಐಟಿ ಕಂಪೆನಿಗಳ ಕಾರಿಡಾರ್ ಎನ್ನಲಾದ ಹೊರವರ್ತುಲ ರಸ್ತೆ ಕೂಡ ಈ ಸಲ ಪ್ರವಾಹ ಪರಿಸ್ಥಿತಿಗೆ ನಲುಗಿ ಹೋಯಿತು. ಒಂದು ಮಾಹಿತಿಯ ಪ್ರಕಾರ, ಹೊರವರ್ತುಲ ರಸ್ತೆ ವ್ಯಾಪ್ತಿಯ ಐಟಿ ಕಂಪೆನಿಗಳು ಈ ಬಾರಿಯ ಮಳೆ ಮತ್ತು ಪ್ರವಾಹದಿಂದ ರೂ. 225 ಕೋಟಿಯಷ್ಟು ನಷ್ಟ ಅನುಭವಿಸಿವೆ. ರಾಜ್ಯದ ಪಾಲಿಗೆ ಬಹು ದೊಡ್ಡ ಆದಾಯ ತಂದುಕೊಡುವ ಬೆಂಗಳೂರಿನ ಶಕ್ತಿ ಹೀಗೆ ಪ್ರವಾಹದಲ್ಲಿ ಕೊಚ್ಚಿಹೋಗುತ್ತಲೇ ಇದೆ. ಆದರೂ ಬೆಂಗಳೂರಿನ ಮೂಲಸೌಕರ್ಯ ವನ್ನು ಅಭಿವೃದ್ಧಿಪಡಿಸುವ ಮಾತು ಕೃತಿರೂಪಕ್ಕೆ ಬರುತ್ತಲೇ ಇಲ್ಲ. ಬಹಳ ಮುಂದಾಲೋಚನೆಯಿಂದ ವ್ಯವಸ್ಥಿತವಾಗಿ ಬೆಂಗಳೂರು ನಗರಕ್ಕೆ ಕೆಂಪೇಗೌಡರು ಅಡಿಪಾಯ ಹಾಕಿದ್ದಾಗ ನೀರು ಹರಿದು ಹೋಗಲು ರಾಜಕಾಲುವೆಗಳನ್ನು ನಿರ್ಮಿಸಲಾಗಿತ್ತು. ಮಳೆ ನೀರು ಸಂಗ್ರಹಕ್ಕಾಗಿ ಕೆರೆ ಕಟ್ಟೆಗಳಿದ್ದವು. ಆದರೆ ಬೆಂಗಳೂರು ಬೆಳೆದಂತೆಲ್ಲಾ ಈ ಪ್ರದೇಶಗಳ ಒತ್ತುವರಿ ನಡೆದಿದೆ. ರಾಜಕಾಲುವೆಗಳು, ಕೆರೆ ಕಟ್ಟೆಗಳು ಈಗ ಬಡಾವಣೆಗಳಾಗಿವೆ. ಇದರ ಪರಿಣಾಮವೇ ಜಲಪ್ರವಾಹ. ಸರಕಾರ ಕೂಡ ಬೆಂಗಳೂರಿನ ಈ ಸ್ಥಿತಿಗೆ ರಾಜಕಾಲುವೆ ಒತ್ತುವರಿಯೇ ಪ್ರಮುಖ ಕಾರಣ ಎಂಬುದನ್ನು ಒಪ್ಪುತ್ತದೆ. ಪ್ರತಿಬಾರಿಯೂ ರಾಜಕಾಲುವೆಯ ಒತ್ತುವರಿ ಪ್ರದೇಶಗಳ ತೆರವಿನ ಭರವಸೆ, ಕೆರೆಗಳ ಹೂಳೆತ್ತುವ ಭರವಸೆಯನ್ನು ಸರಕಾರ ಕೊಡುತ್ತಲೇ ಇರುತ್ತದೆ. ಆದರೆ ಕೆರೆಗಳ ಹೂಳು ಅಲ್ಲಿಯೇ ಇರುತ್ತದೆ, ಒತ್ತುವರಿಯೂ ಎಗ್ಗಿಲ್ಲದೆ ಸಾಗಿಯೇ ಇರುತ್ತದೆ. ಬೆಂಗಳೂರಿನಲ್ಲಿ ಪ್ರತಿಸಲವೂ ಪ್ರವಾಹ ಸ್ಥಿತಿ ಕೈಮೀರುವ ಮಟ್ಟಕ್ಕೆ ಹೋಗುವುದಕ್ಕೆ ಕಾರಣಗಳನ್ನು ನೋಡಿಕೊಂಡರೆ, ಅಲ್ಲಿ ಮತ್ತೊಮ್ಮೆ ಗೋಚರಿಸುವುದು ಇಡೀ ವ್ಯವಸ್ಥೆಯ ವೈಫಲ್ಯವೇ. ಅಂಥ ಕಾರಣಗಳತ್ತ ಒಮ್ಮೆ ಗಮನ ಹರಿಸುವುದಾದರೆ, ಮೊದಲು ಕಣ್ಣಿಗೆ ರಾಚುವುದೇ ರಾಜಕಾಲುವೆಗಳ ಒತ್ತುವರಿ. ಬೆಂಗಳೂರಿನ ಯಾವುದೇ ಪ್ರದೇಶದಿಂದ ಹರಿದುಬರುವ ನೀರು ಸರಾಗವಾಗಿ ಹರಿದುಹೋಗಬೇಕೆಂದೇ ನಿರ್ಮಾಣವಾಗಿದ್ದ ರಾಜಕಾಲುವೆಯ ನಿರಂತರ ಒತ್ತುವರಿಯೇ ಬೆಂಗಳೂರಿನ ಈ ಸಮಸ್ಯೆಯ ಮೂಲವೆಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ 842 ಕಿ.ಮೀ. ಉದ್ದದ ರಾಜಕಾಲುವೆ ಇದೆ. 2016 ರಲ್ಲಿ ಕಂದಾಯ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ 2,626 ಕಡೆ ರಾಜಕಾಲುವೆ ಒತ್ತುವರಿಯಾಗಿರುವುದು ಪತ್ತೆಯಾಗಿತ್ತು. ಒಟ್ಟು 11 ಸಾವಿರ ಕೋಟಿ ಮೌಲ್ಯದ ಭೂಮಿಯ ಕಬಳಿಕೆ. ಈ ಒತ್ತುವರಿಯನ್ನು ಗುರುತಿಸಿದ ಬಿಬಿಎಂಪಿ, ತೆರವು ಕಾರ್ಯವನ್ನೂ ನಡೆಸಿತು. 1890 ಕಡೆ ಒತ್ತುವರಿ ತೆರವುಗೊಳಿಸಲಾಯಿತು. ನಿಜವಾದ ರಾಜಕಾರಣ ಶುರುವಾದದ್ದೇ ಆಮೇಲೆ. ಒತ್ತುವರಿ ತೆರವುಗೊಳಿಸಲಾಯಿತಾದರೂ ಕಾಲುವೆ ಮೇಲಿನ ನೂರಾರು ಕಟ್ಟಡಗಳನ್ನು ಹಾಗೆಯೇ ಉಳಿಸಲಾಗಿರುವುದು ಒಂದೆಡೆಯಾದರೆ, ಪ್ರಭಾವಿಗಳಿಂದಲೇ ಆಗಿರುವ ಒತ್ತುವರಿಯೆದುರು ತೆರವು ಕಾರ್ಯದ ಶೌರ್ಯ ಮಣಿದದ್ದು ಇನ್ನೊಂದೆಡೆ. ಇನ್ನೂ 736 ಕಡೆ ಒತ್ತುವರಿ ತೆರವು ಹಾಗೆಯೇ ಉಳಿದುಬಿಟ್ಟಿತು. ಪ್ರಭಾವಿಗಳ ಮನೆಗಳನ್ನು ಕಾಲುವೆಯ ಮೇಲೆಯೇ ಉಳಿಯಲು ಬಿಟ್ಟು, ಕಾಲುವೆಯ ದಿಕ್ಕನ್ನೇ ಬದಲಿಸಿದ ರಾಜಕಾರಣಕ್ಕೂ ಬೆಂಗಳೂರು ಸಾಕ್ಷಿಯಾಗಬೇಕಾಯಿತು.

ರಾಜಕಾಲುವೆಗೆ ಪ್ರಭಾವಿಗಳ ಕರಿನೆರಳಿಂದ ಒದಗಿದ ದುಸ್ಥಿತಿ ಇದಾದರೆ ಇನ್ನು ಬೆಂಗಳೂರನ್ನು ಕಾಪಾಡುತ್ತಿದ್ದ ಕಣಿವೆ ಪ್ರದೇಶಗಳದ್ದು, ಕೆರೆ ಅಚ್ಚುಕಟ್ಟು ಪ್ರದೇಶಗಳದ್ದು ಮತ್ತೊಂದು ದುರ್ಗತಿ. ವೃಷಭಾವತಿ ಕಣಿವೆ, ಕೋರಮಂಗಲ ಕಣಿವೆ, ಚಲ್ಲಘಟ್ಟ ಕಣಿವೆ ಮತ್ತು ಹೆಬ್ಬಾಳ ಕಣಿವೆಗಳು ನಾಲ್ಕು ಪ್ರಮುಖ ಕಣಿವೆಗಳಾಗಿದ್ದು, ಇವಲ್ಲದೆ ಇನ್ನೂ ಹಲವು ಕಣಿವೆಗಳಿವೆ. ಇವೆಲ್ಲವೂ ಪ್ರವಾಹದ ನೀರು ಹರಿದುಹೋಗಲು ಸಹಾಯಕ. ಪೂರ್ವದಲ್ಲಿ ಮಾರತಹಳ್ಳಿ, ವಾಯವ್ಯದಲ್ಲಿ ಅರ್ಕಾವತಿ ಮತ್ತು ಕೇತಮಾರನಹಳ್ಳಿ, ದಕ್ಷಿಣದಲ್ಲಿ ಕತ್ರಿಗುಪ್ಪೆ ಮತ್ತು ತಾವರೆಕೆರೆ ಇವು ಮಳೆನೀರು ಹರಿಯುವ ನೈಸರ್ಗಿಕ ಒಳಚರಂಡಿ ವ್ಯವಸ್ಥೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ದುರಂತವೆಂದರೆ ಈ ನೈಸರ್ಗಿಕ ಕಾಲುವೆಗಳನ್ನು ಬಿಡದೆ ನುಂಗಿಹಾಕಲಾಗಿದೆ. ಇಲ್ಲೆಲ್ಲ ನಿರ್ಮಾಣ ಲೇಔಟ್‌ಗಳು, ವಸತಿ ಅಪಾರ್ಟ್‌ಮೆಂಟ್‌ಗಳು ಮತ್ತು ಶೈಕ್ಷಣಿಕ ಸಂಸ್ಥೆಗಳದ್ದೇ ದರ್ಬಾರು. ಮಾನ್ಯತಾ ಟೆಕ್ ಪಾರ್ಕ್ ಮತ್ತು ಕೇಂದ್ರೀಯ ವಿಹಾರ್ ಇವು ಹೆಬ್ಬಾಳ ಕಣಿವೆಯನ್ನು ಆಕ್ರಮಿಸಿಕೊಂಡಿವೆ. ಹಿಂದೆ ಈ ಕಣಿವೆಗಳ ಮೇಲ್ಭಾಗದಲ್ಲಿ ವಸತಿಪ್ರದೇಶಗಳಿರುತ್ತಿದ್ದವು. ಕೃಷಿಭೂಮಿಗಳು ಅಬಾಧಿತವಾಗಿದ್ದ ಕಾರಣ ಅವು ಬಫರ್ ಆಗಿ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಈ ಪ್ರದೇಶವೆಲ್ಲವೂ ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗತೊಡಗಿದ ಹಾಗೆ ಪರಿಸ್ಥಿತಿ ಹದ ತಪ್ಪಿತು. ಎಷ್ಟೋ ಲಕ್ಷ ಕಟ್ಟಡಗಳು ಬಫರ್ ರೆನ್‌ನಲ್ಲಿಯೇ ತಲೆಯೆತ್ತಲು ಅವಕಾಶವಾಗಿಬಿಟ್ಟಿತು. ರಿಯಲ್ ಎಸ್ಟೇಟ್ ಅಕ್ರಮವಂತೂ ಬೆಂಗಳೂರನ್ನು ಇನ್ನೊಂದು ಪ್ರಪಾತಕ್ಕೆ ಕೆಡವಿದೆ. ಅನುಮತಿ ಕೊಡುವ ಸರಕಾರವೇ ಅಕ್ರಮದ ಪಾಲುದಾರನಂತಿರುವ ಸನ್ನಿವೇಶ ಕಾಣಿಸುತ್ತಿದೆ. ನಗರದಲ್ಲಿ ಬಡಾವಣೆ ನಿರ್ಮಾಣ ವ್ಯವಸ್ಥಿತವಾಗಿಲ್ಲದಿರುವುದು ಗೊತ್ತಿರದೇ ಇರುವ ವಿಚಾರವೇನಲ್ಲ. ನೀರು ಹರಿದುಹೋಗಲು ದಾರಿಯೇ ಇರದಂತೆ ಬಡಾವಣೆಗಳ ಅಡ್ಡಾದಿಡ್ಡಿ ನಿರ್ಮಾಣವಾಗಿದೆ. ಬಡಾವಣೆ ನಿರ್ಮಾಣಕ್ಕೆ ಅಡ್ಡಿಯಾಗಿದ್ದ ರಾಜಕಾಲುವೆಗಳ ದಿಕ್ಕನ್ನೇ ಬದಲಿಸಿದ್ದೂ ಇದೆ. ಕೆಲವೆಡೆ ಕಾಲುವೆಯ ಕುರುಹುಗಳೂ ಇಲ್ಲದಂತೆ ಮಾಡಲಾಗಿದೆ. ಬಹುತೇಕ ಕಡೆ ಅಕ್ರಮ ಬಡಾವಣೆಗಳು. ಕೆರೆಗಳನ್ನು ಸೇರುವ ಮುಖ್ಯ ಕಾಲುವೆಗಳ ಎರಡೂ ಬದಿಗಳಲ್ಲಿ 150 ಅಡಿ ಸ್ಥಳ ಬಿಡಬೇಕು, ರಾಜಕಾಲುವೆ ಸೇರುವ ದ್ವಿತೀಯ ಹಂತದ ಕಾಲುವೆಗಳ ಬದಿಗಳಲ್ಲಿ 105 ಅಡಿ ಜಾಗ ಬಿಡಬೇಕು, ಈ ಎರಡೂ ಕಾಲುವೆಗಳನ್ನು ಸೇರುವ ಮೂರನೇ ಶ್ರೇಣಿಯ ರಾಜಕಾಲುವೆಗಳ ಬದಿಗಳಲ್ಲಿ 75 ಅಡಿ ಬಿಡಬೇಕು ಎಂಬುದು ನಿಯಮವಾಗಿಯಷ್ಟೇ ಉಳಿದಿದೆ. 6 ಸಾವಿರಕ್ಕೂ ಹೆಚ್ಚು ಅಕ್ರಮ ಬಡಾವಣೆಗಳಿವೆ ಎಂದು ಹೇಳಲಾಗುತ್ತದೆ. ಹಲವಾರು ಬಡಾವಣೆಗಳನ್ನು ಕೆರೆ ಒತ್ತುವರಿ ಮಾಡಿಕೊಂಡೇ ನಿರ್ಮಿಸಲಾಗಿರುವುದು ದೊಡ್ಡ ದುರಂತ. ಪಕ್ಷ ಭೇದವಿಲ್ಲದೆ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಬಿಲ್ಡರ್‌ಗಳ ಅಕ್ರಮ ಕೂಟ ಇದರ ಹಿಂದಿರುವುದು ಸ್ಪಷ್ಟ. ಇನ್ನು ಮಳೆನೀರು ಚರಂಡಿಗಳ ನಿರ್ವಹಣೆ ಕೂಡ ಅಸಮರ್ಪಕ. ಚರಂಡಿಗಳ ಬಹುಭಾಗಕ್ಕೆ ತಡೆಗೋಡೆಗಳೇ ಇಲ್ಲ. ಬೆಂಗಳೂರಿನಲ್ಲಿ 842 ಕಿ.ಮೀ ಉದ್ದದ ಮಳೆನೀರು ಚರಂಡಿಗಳಿದ್ದು, ತಡೆಗೋಡೆಯಿರುವುದು ಕೇವಲ 389 ಕಿ.ಮೀ.ಗೆ ಮಾತ್ರ. ಬೆಂಗಳೂರಿನಲ್ಲಿ ಮಳೆ ಸೃಷ್ಟಿಸುತ್ತಿರುವ ಅಧ್ವಾನ ಬೆಂಗಳೂರಿಗೆ ಔದ್ಯಮಿಕ ವಲಯದಲ್ಲಿ ಇರುವ ಹೆಸರಿಗೂ ಧಕ್ಕೆ ತರಲಿದೆಯೇ ಎಂಬುದು ಒಂದು ದೊಡ್ಡ ಪ್ರಶ್ನೆ. ಯಾಕೆಂದರೆ ರಾಜ್ಯದ ಬಜೆಟ್ ಗಾತ್ರದಲ್ಲಿ ಅರ್ಧದಷ್ಟನ್ನು ಕೊಡುವುದೇ ಬೆಂಗಳೂರು. ಸ್ವತಃ ಮಾಜಿ ಸಿಎಂ ಎಸ್.ಎಂ. ಕೃಷ್ಣ ಬ್ರಾಂಡ್ ಬೆಂಗಳೂರು ಹೆಸರಿಗೆ ಪೆಟ್ಟು ಬೀಳಲಿದೆಯೆಂಬ ಆತಂಕ ವ್ಯಕ್ತಪಡಿಸಿದ್ದಾರೆ. ಸಿಎಂ ಬೊಮ್ಮಾಯಿಗೆ ಅವರು ಪತ್ರ ಬರೆದಿದ್ದಾರೆ. ಮಳೆಯಿಂದಾಗುವ ಹಾನಿಯಿಂದಾಗಿ ಭವಿಷ್ಯತ್ತಿನಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ರಾಜ್ಯಕ್ಕೆ ಬಂಡವಾಳ ಹೂಡುವ ಹೂಡಿಕೆದಾರರಿಗೆ ತಪ್ಪು ಸಂದೇಶ ರವಾನೆಯಾಗಲಿದೆ. ಅದರಿಂದ ಇಲ್ಲಿ ಪ್ರತಿಷ್ಠಾಪನೆಗೊಳ್ಳಬಹುದಾದ ಕೈಗಾರಿಕಾ ವಸಹಾತುಗಳು ಬೇರೆ ರಾಜ್ಯಗಳ ಪಾಲಾಗಿ ನಮ್ಮ ರಾಜ್ಯದ ಅಭಿವೃದ್ಧಿಗೆ ತೊಡಕಾಗಲಿದೆ ಎಂಬ ಕಳವಳ ಅವರದು. ಬೊಮ್ಮಾಯಿಗೆ ಬರೆದಿರುವ ಪತ್ರದಲ್ಲಿ ಅವರು ನೀಡಿರುವ ಸಲಹೆಗಳು ಹೀಗಿವೆ:

ಬೆಂಗಳೂರಿನ ಅಭಿವೃದ್ಧಿಗೆ ರಚಿಸಿದ್ದ ಬೆಂಗಳೂರು ಅಜೆಂಡಾ ಟಾಸ್ಕ್ ಫೋರ್ಸ್ ಸಮಿತಿಯನ್ನು ಪುನರ್ ರಚಿಸಿ ವಿವಿಧ ವಿಭಾಗಗಳ ತಜ್ಞರನ್ನು ಸೇರಿಸಿ ಅವರ ಸಲಹೆಗಳನ್ನು ಪಡೆದು ದೂರಗಾಮಿ ನೆಲೆಯಲ್ಲಿ ಬೆಂಗಳೂರಿನ ಅಭಿವೃದ್ಧಿಗೆ ನೀಲಿನಕ್ಷೆ ತಯಾರಿಸಬೇಕು

ಒಳಚರಂಡಿ ವ್ಯವಸ್ಥೆ ಸುಧಾರಿಸಿ ಹೊಸದಾಗಿ ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಂಡಿರುವ ಬಡಾವಣೆಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಮತ್ತು ರಾಜಕಾಲುವೆಗಳ ನಿರ್ವಹಣೆಗೆ ಆದ್ಯತೆ ನೀಡಬೇಕು. ಬೆಂಗಳೂರಿಗೆ ಪರ್ಯಾಯವಾಗಿ ಮೈಸೂರು, ತುಮಕೂರು ಮತ್ತು ಹುಬ್ಬಳ್ಳಿಯಂತಹ ನಗರಗಳನ್ನು ಗುರುತಿಸಿ ನೂತನ ಕೈಗಾರಿಕಾ ವಸಹಾತುಗಳ ಸ್ಥಾಪನೆಗೆ ಅವಕಾಶ ಕಲ್ಪಿಸಿ ಬೆಂಗಳೂರು ನಗರದ ಮೇಲಿನ ಒತ್ತಡ ಕಡಿಮೆ ಮಾಡಬೇಕು.

ಬೆಂಗಳೂರು ವ್ಯಾಪ್ತಿಯ ಶಾಸಕರು ಸಂಸದರು ಹಾಗೂ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ವಲಯವಾರು ಸಮಸ್ಯೆಗಳನ್ನು ಪತ್ತೆ ಹಚ್ಚಿ ಅವುಗಳ ಶಾಶ್ವತ ಪರಿಹಾರಕ್ಕೆ ಕಾಲ ಮಿತಿಯಲ್ಲಿ ಕಾರ್ಯ ಕ್ರಮ ರೂಪಿಸಿ, ತಕ್ಕ ಅನುದಾನ ಒದಗಿಸಬೇಕು.

ಎಸ್.ಎಂ. ಕೃಷ್ಣ ಅವರ ಈ ಸಲಹೆಗಳು ಬೆಂಗಳೂರಿನ ನಿರ್ವಹಣೆ ಕುರಿತ ಒಂದು ಸ್ಪಷ್ಟ ನೋಟವನ್ನು ಕೊಡುವಂಥವಾಗಿವೆ. ಜೊತೆಗೆ, ಸ್ಪಷ್ಟ ಇಚ್ಛಾಶಕ್ತಿಯ ಅಗತ್ಯವನ್ನೂ ಒತ್ತಿಹೇಳಿವೆ. ಮಳೆ ಬಂದಾಗೊಮ್ಮೆ ಮಾತನಾಡಿ, ಆಮೇಲೆ ಎಲ್ಲ ಮರೆತು ಹೋಗುವುದು ಮಾಮೂಲಾಗಿರುವ ಇಂಥ ಹೊತ್ತಲ್ಲಿ ಕೃಷ್ಣರಂಥವರು ಕೊಟ್ಟಿರುವ ಸಲಹೆಗಳನ್ನು ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕಾದ ಅಗತ್ಯವಿದೆ. ಯಾಕೆಂದರೆ, ಸಮಸ್ಯೆಯ ಮೂಲ ಇರುವುದೆಲ್ಲಿ ಎಂಬುದು ಸರಕಾರಕ್ಕೂ ಗೊತ್ತಿದೆ, ಬಿಬಿಎಂಪಿಗೂ ಗೊತ್ತಿದೆ. ಏನು ಪರಿಹಾರ ಎಂಬುದೂ ಕೂಡ ಗೊತ್ತಿಲ್ಲದೇ ಇಲ್ಲ. ಆದರೂ ಬೆಂಗಳೂರಿನ ಗೋಳನ್ನು ಬಗೆಹರಿಸಲಾಗದ ಬಿಕ್ಕಟ್ಟು ಎಂಥದು ಎಂಬುದಕ್ಕೂ ರಾಜಕಾರಣಿಗಳು ತಮಗೆ ತಾವೇ ಉತ್ತರ ಕೊಟ್ಟುಕೊಳ್ಳಬೇಕಾಗಿದೆ. ಇಲ್ಲದೇ ಹೋದಲ್ಲಿ ಬೆಂಗಳೂರು ಜನತೆಗೆ ಮಳೆ ಅವಾಂತರದಿಂದ ಬಿಡುಗಡೆ ದೊರಕಲಾರದು. ಹೀಗಾದರೆ ರಾಷ್ಟ್ರೀಯ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬ್ರಾಂಡ್ ಬೆಂಗಳೂರಿಗೆ ದೊಡ್ಡ ಹಾನಿ ಖಚಿತ.

share
ಆರ್. ಜೀವಿ
ಆರ್. ಜೀವಿ
Next Story
X