ಉ.ಕ. ಜಿಲ್ಲೆಯ ಮೀನುಗಾರ ಮೊಗೇರರ ಒತ್ತಡಕ್ಕೆ ಮಣಿದು ಅಧ್ಯಯನ ಸಮಿತಿ ರಚನೆ: ಆರೋಪ
ದ.ಕ. ಜಿಲ್ಲಾ ಮೊಗೇರ ಸಂಘದಿಂದ ಖಂಡನೆ

ಮಂಗಳೂರು, ಸೆ.12: ಉತ್ತರ ಕನ್ನಡ ಜಿಲ್ಲೆಯ ಪ್ರವರ್ಗ 1ರಲ್ಲಿರುವ ಮೀನುಗಾರ ಮೊಗೇರರ ಒತ್ತಡಕ್ಕೆ ಒಳಗಾಗಿ ರಾಜ್ಯ ಸರಕಾರ ಅಧ್ಯಯನ ಸಮಿತಿ ರಚಿಸುವ ಮೂಲಕ 2010ರ ತನ್ನದೇ ಆದೇಶವನ್ನು ನಿರ್ಲಕ್ಷಿಸಿದ್ದು, ಇದು ಖಂಡನೀಯ ಎಂದು ದ.ಕ. ಜಿಲ್ಲಾ ಮೊಗೇರ ಸಂಘ ಹೇಳಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ರಾಜ್ಯ ಮೊಗೇರ ಸಂಘದ ನಿಕಟಪೂರ್ವ ಅಧ್ಯಕ್ಷ ಸುಂದರ ಮೇರ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ವೃತ್ತಿಯವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಪರಿಶಿಷ್ಟ ಜಾತಿಯ ಮೊಗೇರರ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ಪಡೆದು ನೈಜ ಪರಿಶಿಷ್ಟರ ಸಾಂವಿಧಾನಕ ಹಕ್ಕನ್ನು 1977ರಿಂದ 2010ರವರೆಗೂ ದುರುಪಯೋಗಪಡಿಸಿಕೊಂಡಿದ್ದರು ಎಂದು ಆರೋಪಿಸಿದರು.
ಪ್ರಬಲ ಹೋರಾಟದ ಪರಿಣಾಮವಾಗಿ 2005ರಲ್ಲಿ ಅಂದಿನ ಸರಕಾರ ಸಮಿತಿ ರಚಿಸಿ ಮೈಸೂರು ವಿವಿಯ ಮಾನವಶಾಸ್ತ್ರ ವಿಭಾಗದ ಪ್ರೊಪೆಸರ್ ಎಚ್.ಕೆ.ಭಟ್ ನೇತೃತ್ವದ ತಜ್ಞರ ಸಮಿತಿಯಿಂದ ಅಧ್ಯಯನ ನಡೆಸಲಾಗಿತ್ತು. ನೈಜ ಮೊಗೇರರು ಅಸ್ಪೃಶ್ಯರಾಗಿದ್ದು, ಮೊಲ ಬೇಟೆ ಅವರ ಮೂಲ ವೃತ್ತಿ. ಉ.ಕ. ಜಿಲ್ಲೆಯ ಮೀನುಗಾರ ಮೊಗೇರರ ಕುಲಕಸುಬು, ಕುಲದೇವರು, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ನಡೆಸಿ 2008ರಲ್ಲಿ ಪ್ರೊ.ಎಚ್.ಕೆ.ಭಟ್ ಸಮಿತಿ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಿತ್ತು. ಈ ಅಧ್ಯಯನ ಪ್ರಕಾರ ಉ.ಕ. ಜಿಲ್ಲೆಯ ಮೊಗೇರ ಜಾತಿಯ ಜನರು ಮೀನುಗಾರ ಜಾತಿಗೆ ಸೇರಿದವರು. ಅವರು ಹಿಂದುಳಿದ ವರ್ಗಗಳ ಪ್ರವರ್ಗ 1ಕ್ಕೆ ಸೇರಲ್ಪಟ್ಟವರು. ಮೊಗೇರ ಜಾತಿಯ ಪರಿಶಿಷ್ಟ ಜಾತಿಯವರು ದ.ಕ. ಹಾಗೂ ಉಡುಪಿ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. 1977ನೇ ಸಾಲಿನಲ್ಲಿ ಭಾರತ ಸರಕಾರ ಮೊಗೇರ ಜಾತಿಗೆ ಸಂಬಂಧಿಸಿದ ಪ್ರಾದೇಶಿಕ ನಿರ್ಬಂಧದ ಪರಿಣಾಮ ಹಿಂದೆ ಪ್ರವರ್ಗ 1ರಡಿ ಜಾತಿ ಪ್ರಮಾಣ ಪಡೆಯುತ್ತಿದ್ದ ಉ.ಕ. ಜಿಲ್ಲೆಯ ಮೊಗೇರರು ಪರಿಶ್ಟಿ ಜಾತಿ ಪ್ರಮಾಣ ಪತ್ರ ಪಡೆಯುವುದು ಸರಿಯಲ್ಲ ಎಂದು ವರದಿಯಲ್ಲಿ ತಿಳಿಸಿದ್ದು, ಇದನ್ನು 2010ರ ಮೇ 25ರಂದು ರಾಜ್ಯ ಸರಕಾರ ಅಂಗೀಕರಿಸಿ ಆದೇಶಿಸಿತ್ತು. ಆ ಬಳಿಕ ಸುಳ್ಳು ಜಾತಿ ಪ್ರಮಾಣ ಪತ್ರ ರದ್ದುಪಡಿಸಿ ಸಂಬಂಧಪಟ್ಟವರ ಮೇಲೆ ಕಾನೂನು ಕ್ರಮ ಜರುಗಿಸಲಾಗಿತ್ತು. ಇದೀಗ ರಾಜ್ಯ ಸರಾಕರಕ್ಕೆ ಒತ್ತಡ ತಂದು ಸರಕಾರದಿಂದ ಸಮಿತಿ ರಚಿಸಲು ಯಶಸ್ವಿಯಾಗಿದ್ದಾರೆ ಎಂದು ಸುಂದರ ಮೇರ ಆಕ್ಷೇಪಿಸಿದರು.
ಏಳೆಂಟು ತಿಂಗಳ ಹಿಂದೆ ಈ ಬಗ್ಗೆ ದ.ಕ. ಜಿಲ್ಲಾ ಮೊಗೇರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ಸಚಿವ ಅಂಗಾರ ನೇತೃತ್ವದಲ್ಲಿ ಮುಖ್ಯಮಂತ್ರಿ ಹಾಗೂ ರಾಜ್ಯದ ಸಮಾಜ ಕಲ್ಯಾಣ ಸಚಿವರಿಗೆ ಮನವಿ ಸಲ್ಲಿಸಿದಾಗ ನ್ಯಾಯ ದೊರಕಿಸುವ ಭರವಸೆ ನೀಡಲಾಗಿತ್ತು. ಪ್ರಧಾನ ಮಂತ್ರಿಗೂ ಮನವಿ ಸಲ್ಲಿಸಲಾಗಿತ್ತು. ಹಾಗಿದ್ದರೂ, 2010ರಲ್ಲಿ ಸಮಿತಿಯು ನೀಡಿರುವ ವರದಿಯು ಉಕ. ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಖೆಯ ಪ್ರಧಾನ ಕಾರ್ಯದರ್ಶಿಗಳ ಕಡತದಲ್ಲಿ ಲಭ್ಯವಿದ್ದು, ಮತ್ತೆ ಅಧ್ಯಯನ ನಡೆಸಿ ಕಾಲಹರಣ, ದುಂದುವೆಚ್ಚ ಮಾಡುವ ಉದ್ದೇಶದ ಬಗ್ಗೆ ಅನುಮಾನವಿದೆ. ಹಾಗಾಗಿ ಸರಕಾರ ರಚಿಸಿರುವ ನೂತನ ಸಮಿತಿಯನ್ನು ರದ್ದುಪಡಿಸಬೇಕು. ಹಾಗೂ 2010ರಲ್ಲಿ ಅಂಗೀಕರಿಸಿದ ವರದಿಯನ್ನು ಯಥಾಸ್ಥಿತಿ ಮುಂದುವರಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಗಧ ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್ ಕನ್ಯಾಡಿ, ರಾಜ್ಯ ದಲಿತ ಸಂಘಟನೆಯ ಹಿರಿಯ ಮುಖಂಡರಾದ ಎಂ. ದೇವದಾಸ್, ದಲಿತ ಮುಖಂಡರಾದ ಅಶೋಕ್ ಕೊಂಚಾಡಿ, ಮಂಗಳೂರು ತಾಲೂಕು ಮೊಗೇರ ಸಂಘದ ಅಧ್ಯಕ್ಷ ಸೀತಾರಾಮ ಕೊಂಚಾಡಿ ಉಪಸ್ಥಿತರಿದ್ದರು.