ಅ.8ರಿಂದ ಕೀರ್ತಿಶೇಷ ಜಯಣ್ಣ ಸ್ಮರಣಾರ್ಥ ಕಬಡ್ಡಿ ಪಂದ್ಯಾಟ: ಗೋಪಿನಾಥ್ ಕಾಪಿಕಾಡ್

ಮಂಗಳೂರು : ಶ್ರೀ ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿ ಕಾಪಿಕಾಡ್ ಉಳ್ಳಾಲ ಇದರ ಆಶ್ರಯದಲ್ಲಿ ಕ್ರೀಡಾ ಪೋಷಕ ಕೀರ್ತಿಶೇಷ ಎ.ಜಯಣ್ಣ ಸ್ಮರಣಾರ್ಥ ಕಬಡ್ಡಿ ಪಂದ್ಯಾಟ ಅ.8 ಹಾಗೂ 9ರಂದು ಮಂಗಳೂರಿನ ನೆಹರೂ ಮೈದಾನಿನಲ್ಲಿ ಆಯೋಜಿಸಲಾಗಿದೆ ಎಂದು ಖ್ಯಾತ ಕಬಡ್ಡಿ ಆಟಗಾರ ಗೋಪಿನಾಥ್ ಕಾಪಿಕಾಡ್ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲಾ ಹೈಸ್ಕೂಲ್ ವಿಭಾಗದ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟ ಅ.೮ರ ಬೆಳಗ್ಗೆ ೯ರಿಂದ ಆರಂಭವಾಗಲಿದೆ. ಬಾಲಕ-ಬಾಲಕಿಯರ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಮಂಗಳೂರು ವಿಶ್ವವಿದ್ಯಾಲಯದ ಪುರುಷರ ಕಬಡ್ಡಿ ಪಂದ್ಯಾಟ ಅ.೯ರಂದು ಬೆಳಗ್ಗೆ ೯ರಿಂದ ಆರಂಭವಾಗಲಿದೆ ಎಂದರು.
ಶ್ರೀ ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿಯು ಕಳೆದ ೬ ವರ್ಷಗಳಿಂದ ನಿರಂತರವಾಗಿ ಜೂನಿಯರ್ ವಿಭಾಗ ದ.ಕ. ಜಿಲ್ಲೆಯ ಹೈಸ್ಕೂಲ್ ಹಾಗೂ ಕಾಲೇಜು ಮಟ್ಟದ ಪಂದ್ಯಾಕೂಟಗಳನ್ನು ಹಾಗೂ ತರಬೇತಿ ಶಿಬಿರವನ್ನು ಮಾಡುತ್ತಾ ಬಂದಿದೆ. ದ.ಕ. ಜಿಲ್ಲೆಯ ಯುವ ಪ್ರತಿಭೆಗಳ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಯಶಸ್ವಿಯಾಗಿದ್ದೇವೆ. ಈ ನಿಟ್ಟಿನಲ್ಲಿ ಎರಡು ದಿನಗಳ ಪಂದ್ಯಾಟವನ್ನು ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಉಮಾಮಹೇಶ್ವರಿ ಕಬಡ್ಡಿ ಅಕಾಡೆಮಿ ಪ್ರಮುಖರಾದ ಎ.ಜೆ.ಶೇಖರ್, ದಿನೇಶ್ ಅತ್ತಾವರ, ದಿನೇಶ್ ರೈ ಕಳ್ಳಿಗೆ, ಗಣೇಶ್ ಕಾಪಿಕಾಡ್ ಮುಂತಾದವರು ಉಪಸ್ಥಿತರಿದ್ದರು.