ಏಳು ಮಂದಿ ಅಪ್ರಾಪ್ತ ವಯಸ್ಕರಿಗೆ ಲೈಂಗಿಕ ಕಿರುಕುಳ ಆರೋಪ: ಹಾಸ್ಟೆಲ್ ವಾರ್ಡನ್ ಬಂಧನ

ಹೈದರಾಬಾದ್,ಸೆ.12: ನಗರದ ಹೊರವಲಯದ ಹಯಾತ್ನಗರದಲ್ಲಿಯ ಖಾಸಗಿ ಶಾಲೆಯೊಂದರ ಬಾಲಕರ ಹಾಸ್ಟೆಲ್ ನ ಏಳು ಅಪ್ರಾಪ್ತ ವಯಸ್ಕ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ ವಾರ್ಡನ್ ಮುರ್ರಂ ಕೃಷ್ಣ (35) ಎಂಬಾತನನ್ನು ರಾಚಕೊಂಡಾ ಪೊಲೀಸರು ಬಂಧಿಸಿದ್ದಾರೆ.
ಪೂರ್ವ ಗೋದಾವರಿ ಜಿಲ್ಲೆಯ ನಿವಾಸಿ ಮುರ್ರಂ ಕೃಷ್ಣ ಒಂದು ತಿಂಗಳ ಹಿಂದಷ್ಟೇ ವಾರ್ಡನ್ ಕೆಲಸಕ್ಕೆ ಸೇರಿದ್ದ. ತನ್ನ ಫೋನ್ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುವಂತೆ ಕೆಲವು ವಿದ್ಯಾರ್ಥಿಗಳನ್ನು ಬಲವಂತಗೊಳಿಸುತ್ತಿದ್ದ ಎನ್ನಲಾಗಿದೆ. ತಾವು ನಿದ್ರಿಸುತ್ತಿದ್ದಾಗ ಆರೋಪಿ ತಮ್ಮನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದ, ತಾವು ಸ್ನಾನ ಮಾಡುತ್ತಿದ್ದಾಗ ಬಾತ್ರೂಮ್ ಗೆ ನುಗ್ಗಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಎಂಟು ಮತ್ತು ಒಂಭತ್ತನೇ ತರಗತಿಗಳಲ್ಲಿ ಓದುತ್ತಿರುವ ಈ ವಿದ್ಯಾರ್ಥಿಗಳು ದೂರಿನಲ್ಲಿ ಆರೋಪಿಸಿದ್ದಾರೆ.
ಪೊಲೀಸರು ಮುರ್ರಂ ಕೃಷ್ಣ ವಿರುದ್ಧ ಐಪಿಸಿ ಮತ್ತು ಪೊಕ್ಸೊ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈ ನಡುವೆ ಸಂತ್ರಸ್ತ ವಿದ್ಯಾರ್ಥಿಗಳನ್ನು ಮನಃಶಾಸ್ತ್ರಜ್ಞರ ಬಳಿ ಕೌನ್ಸೆಲಿಂಗ್ಗೆ ಕಳುಹಿಸಲಾಗಿದೆ.





