ಬಿಹಾರ:ಕೋಮು ಘರ್ಷಣೆ ಆರೋಪದಲ್ಲಿ ಬಂಧಿತರಾದವರಲ್ಲಿ ಎಂಟರ ಹರೆಯದ ಬಾಲಕ!

ಪಾಟ್ನಾ,ಸೆ.12: ಬಿಹಾರದ ಸಿವಾನ್ ಜಿಲ್ಲೆಯ ಬಡಹರಿಯಾ ಪಟ್ಟಣದಲ್ಲಿ ಧಾರ್ಮಿಕ ಮೆರವಣಿಗೆಯೊಂದರ ಸಂದರ್ಭದಲ್ಲಿ ಕೋಮು ಘರ್ಷಣೆಗಳಿಗೆ ಸಂಬಂಧಿಸಿದಂತೆ ಬಂಧಿತರಲ್ಲಿ ಎಂಟರ ಹರೆಯದ ಓರ್ವ ಮುಸ್ಲಿಮ್ ಬಾಲಕನೂ ಸೇರಿದ್ದಾನೆ.
ಮಹಾವೀರ ಅಖಾಡಾದ ಮೆರವಣಿಗೆ ಮಸೀದಿಯೊಂದರ ಮುಂದಿನಿಂದ ಹಾದು ಹೋಗುತ್ತಿದ್ದಾಗ ಅದರಲ್ಲಿದ್ದ ಕೆಲವರು ಕೋಮು ಘೋಷಣೆಗಳನ್ನು ಕೂಗಿದ ಬಳಿಕ ಹಿಂಸಾಚಾರ ಸ್ಫೋಟಗೊಂಡಿತು ಎಂದು ಮಾಧ್ಯಮಗಳು ವರದಿ ಮಾಡಿವೆ.
ಮೆರವಣಿಗೆಯಲ್ಲಿದ್ದ ಕೆಲವರು ದೊಣ್ಣೆಗಳನ್ನು ಹಿಡಿದುಕೊಂಡಿದ್ದರು ಎನ್ನಲಾಗಿದೆ.
ಹಿಂಸೆಯನ್ನು ಪ್ರಚೋದಿಸಿದ್ದ ಆರೋಪದಲ್ಲಿ ಎಂಟರ ಹರೆಯದ ಬಾಲಕ ಮತ್ತು 70ರ ಹರೆಯದ ಆತನ ಅಜ್ಜ ಸೇರಿದ್ದಾರೆ. ಬಾಲಕನ ಕುಟುಂಬದವರು ಪೊಲೀಸರಿಗೆ ಆತನ ಜನನ ಪ್ರಮಾಣಪತ್ರವನ್ನು ತೋರಿಸಿದ್ದರಾದರೂ ಅಧಿಕಾರಿಗಳು ಬಿಡುಗಡೆಗಾಗಿ ಹಣಕ್ಕೆ ಬೇಡಿಕೆಯಿರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಗುವಿಗೆ ತನ್ನ ಕೃತ್ಯದ ಸ್ವರೂಪ ಮತ್ತು ಪರಿಣಾಮಗಳನ್ನು ತಿಳಿದುಕೊಳ್ಳುವಷ್ಟು ಬುದ್ಧಿ ಬೆಳೆದಿರದಿದ್ದರೆ 7ರಿಂದ 12 ವರ್ಷ ಪ್ರಾಯದ ಮಕ್ಕಳ ಕೃತ್ಯಗಳನ್ನು ಅಪರಾಧವನ್ನಾಗಿ ಪರಿಗಣಿಸಬಾರದು ಎಂದು ಐಪಿಸಿಯ ಕಲಂ 83 ಹೇಳುತ್ತದೆ.
ತನ್ನ ತಮ್ಮನನ್ನು ಖಾಸಗಿ ವಾರ್ಡ್ನಲ್ಲಿ ಇರಿಸಲಾಗಿತ್ತು ಮತ್ತು ಆರಂಭದಲ್ಲಿ ಕುಟುಂಬದವರ ಭೇಟಿಗೂ ಅವಕಾಶ ನೀಡಿರಲಿಲ್ಲ ಎಂದು ತಿಳಿಸಿದ ಬಾಲಕನ ಸೋದರ,ತನ್ನ ತಾಯಿ ಆತನನ್ನು ನೋಡಿದಾಗ ಆತನಿಗೆ ಕೈಕೋಳ ತೊಡಿಸಲಾಗಿತ್ತು. ಆತ ಎಷ್ಟೊಂದು ಹೆದರಿಕೊಂಡಿದ್ದನೆಂದರೆ ತನ್ನ ತಾಯಿಯನ್ನು ಗುರುತಿಸಲೂ ಆತನಿಗೆ ಸಾಧ್ಯವಾಗಿರಲಿಲ್ಲ. ಆತ ಮನೆಗೆ ಹೋಗಬೇಕೆಂದು ಅಳುತ್ತಿದ್ದ ಎಂದು ಹೇಳಿದ.
ಅಜ್ಜ ಮತ್ತು ಮೊಮ್ಮಗನನ್ನು ಸೊಂಟದ ಸುತ್ತ ಹಗ್ಗ ಕಟ್ಟಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಎಂಟು ವರ್ಷದ ಮಗುವನ್ನು ವಯಸ್ಕರ ನ್ಯಾಯಾಲಯದಲ್ಲಿ ಹಾಜರು ಪಡಿಸಲು ಬಾಲ ನ್ಯಾಯ ಕಾಯ್ದೆಯಲ್ಲಿ ಅವಕಾಶವಿಲ್ಲ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ 35 ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದು,ಈ ಪೈಕಿ 25 ಜನರು ಮುಸ್ಲಿಮರಾಗಿದ್ದರೆ ಉಳಿದವರು ಹಿಂದುಗಳಾಗಿದ್ದಾರೆ. 10 ಮುಸ್ಲಿಮರು ಮತ್ತು 10 ಹಿಂದುಗಳು ಸೇರಿದಂತೆ 20 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಅಧಿಕಾರಿಗಳನ್ನು ಶಿಕ್ಷಿಸಬೇಕು ಮತ್ತು ಬಾಲಕನ ಕುಟುಂಬಕ್ಕೆ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ಅವರು,‘‘ಹೊಸ ಅವತಾರವೆತ್ತಿರುವ ‘ಸೆಕ್ಯೂಲರ್ ಅಂಕಲ್’ ನಿತೀಶ್ ಕುಮಾರ್ ನೇತೃತ್ವದ ಸರಕಾರದಲ್ಲಿ ಮಕ್ಕಳೂ ಸಹ ಸುರಕ್ಷಿತರಾಗಿಲ್ಲ. ಅವರಿಗೆ ಹಗ್ಗ ಕಟ್ಟಿ ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗುತ್ತಿದೆ. ದಂಗೆಕೋರರನ್ನು ಬಂಧಿಸುವ ಬದಲು ಪೊಲೀಸರು ಮುಸ್ಲಿಮರನ್ನು ಗುರಿಯಾಗಿಸಿಕೊಳ್ಳುತ್ತಿದ್ದಾರೆ ’’ ಎಂದು ಟ್ವೀಟಿಸಿದ್ದಾರೆ.







