ಬೈಂದೂರು ತಾಲೂಕಿನಲ್ಲಿ ಬಿರುಗಾಳಿ-ಮಳೆ; ಹೆರಂಜಾಲು ಬಳಿ ಧರಾಶಾಹಿಯಾದ ಕೋಳಿ ಫಾರ್ಮ್

ಉಡುಪಿ, ಸೆ.12: ಬೈಂದೂರು ತಾಲೂಕಿನ ಉಪ್ಪುಂದ ಸೇರಿದಂತೆ ಹಲವು ಗ್ರಾಮಗಳಲ್ಲಿ ಇಂದು ಬೆಳಗಿನ ಜಾವ ಬೀಸಿದ ಬಿರುಗಾಳಿಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಹತ್ತಕ್ಕೂ ಅಧಿಕ ಮನೆ ಹಾಗೂ ಜಾನುವಾರ ಕೊಟ್ಟಿಗೆಗಳ ಛಾವಣಿ ಹಾರಿಹೋಗಿದೆ. ಲಕ್ಷಾಂತರ ರೂ.ಗಳ ನಷ್ಟ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಹೆರಂಜಾಲು ಗ್ರಾಮದ ಹೆಗ್ಗೇರಿ ಎಂಬಲ್ಲಿದ್ದ ಕೋಳಿಫಾರ್ಮ್ ಒಂದು ಬಿರುಗಾಳಿಗೆ ಸಂಪೂರ್ಣವಾಗಿ ಧರಾಶಾಹಿಯಾಗಿದೆ. ನಾರಾಯಣ ದೇವಾಡಿಗ ಎಂಬವರಿಗೆ ಸೇರಿದ ಈ ಕೋಳಿ ಫಾರ್ಮ್ ಕಳೆದ ಕೆಲವು ವರ್ಷ ಗಳಿಂದ ಇಲ್ಲಿ ಕಾರ್ಯಾಚರಿಸುತಿದ್ದು, ಇಂದು ಬೆಳಗಿನ ಜಾವ ಬೀಸಿದ ಗಾಳಿಗೆ ಸಂಪೂರ್ಣವಾಗಿ ನೆಲಕಚ್ಚಿದೆ. ಇದರಿಂದ ಫಾರ್ಮ್‌ನಲ್ಲಿದ್ದ 2000 ಕ್ಕೂ ಅಧಿಕ ಕೋಳಿ ಹಾಗೂ ಕೋಳಿಮರಿಗಳು ಸಾವನ್ನಪ್ಪಿವೆ ಎಂದು ಮಾಲಕರು ತಿಳಿಸಿರುವುದಾಗಿ ಗ್ರಾಮದ ವಿಎ ಹನುಮಂತ ರಾಯ ತಿಳಿಸಿದ್ದಾರೆ.
ಪಶು ಸಂಗೋಪನಾ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದು, ಬಳಿಕವಷ್ಟೇ ನಷ್ಟದ ನಿಜವಾದ ಅಂದಾಜು ಸಿಗಲಿದೆ ಎಂದು ಅವರು ‘ವಾರ್ತಾಭಾರತಿ’ಗೆ ತಿಳಿಸಿದರು.
ಇಂದು ನಸುಕಿನಲ್ಲಿ ಹಠಾತ್ತನೇ ಬೀಸಿದ ಗಾಳಿಗೆ ಉಪ್ಪುಂದ, ತೆಗ್ಗರ್ಸೆ, ನಂದನವನ, ನಾವುಂದದ ೧೦ಕ್ಕೂ ಅಧಿಕ ಮನೆಗಳಿಗೆ ಸಾಧಾರಣದಿಂದ ಭಾರೀ ಪ್ರಮಾಣದ ಹಾನಿ ಉಂಟಾಗಿದೆ. ಹೆಚ್ಚಿನ ಮನೆಗಳ ಛಾವಣಿ ಬೀಸಿದ ಗಾಳಿಗೆ ಹಾರಿಹೋಗಿವೆ. ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಆದ ನಷ್ಟದ ಬಗ್ಗೆ ವರದಿ ನೀಡಲಿದ್ದಾರೆ ಎಂದು ಬೈಂದೂರು ತಹಶೀಲ್ದಾರ್ ಶ್ರೀಕಾಂತ್ ಹೆಗಡೆ ತಿಳಿಸಿದ್ದಾರೆ.
ಉಪ್ಪುಂದ ಗ್ರಾಮದ ಈಶ್ವರ ಹರಿಕಾಂತ್ ಹಾಗೂ ಚೆನ್ನ ಪೂಜಾರಿ ಎಂಬವರ ಮನೆಯ ಛಾವಣಿಗಳು ಸಂಪೂರ್ಣ ವಾಗಿ ಹಾರಿಹೋಗಿದ್ದು ತಲಾ ಎರಡು ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ. ಇದೇ ಗ್ರಾಮದ ಸುಶೀಲ ಖಾರ್ವಿಯವರ ಮನೆಯ ಛಾವಣಿ ಹಾರಿಹೋಗಿದ್ದು, ಮನೆಗೆ ಭಾಗಶ: ಹಾನಿಯಾಗಿದೆ. ಇದರಿಂದ 30 ಸಾವಿರ ರೂ. ನಷ್ಟವಾದ ಬಗ್ಗೆ ವರದಿಗಳು ತಿಳಿಸಿವೆ.
ಇನ್ನು ಉಪ್ಪುಂದ ಗ್ರಾಮದ ಸುಬ್ಬಯ್ಯ ಪೂಜಾರಿ, ಬಚ್ಚ ಪೂಜಾರಿ ಮನೆಗೆ ತಲಾ 20,000ರೂ, ಶೇಷ ಖಾರ್ವಿ ಮನೆಗೆ 15000ರೂ., ನಾರಾಯಣ ಮೊಗವೀರ ಮನೆಗೆ 25,000ರೂ. ನಷ್ಟದ ಅಂದಾಜು ಮಾಡಲಾಗಿದೆ.
ಉಳಿದಂತೆ ನಂದನವನದ ಶೇಷಿ ಪೂಜಾರ್ತಿ ಇವರ ವಾಸದ ಮನೆ ಹಾಗೂ ಜಾನುವಾರು ಕೊಟ್ಟಿಗೆಗೆ ಭಾಗಶ: ಹಾನಿಯಾಗಿದ್ದರೆ, ತಗ್ಗರ್ಸೆಯ ಲಕ್ಷ್ಮಣ ಆಚಾರ್ಯರ ವಾಸದ ಮನೆಯ ಮೇಲ್ಚಾವಣಿ ಭಾಗಶ: ಹಾರಿಹೋಗಿದ್ದು, ತಲಾ 50000ದಷ್ಟು ನಷ್ಟವಾಗಿದೆ. ನಾವುಂದದ ಈಶ್ವರ ಖಾರ್ವಿಯವರ ಮನೆಯ ಜಾನುವಾರು ಕೊಟ್ಟಿಗೆ ಗಾಳಿ-ಮಳೆಗೆ ಸಂಪೂರ್ಣ ಹಾನಿಯಾಗಿದ್ದು 25,000 ರೂ.ನಷ್ಟವಾಗಿರುವ ಬಗ್ಗೆ ಅಂದಾಜು ಮಾಡಲಾಗಿದೆ.
19.8ಮಿ.ಮೀ. ಮೆ: ಇಂದು ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 19.8 ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ 8.1ಮಿ.ಮೀ, ಬ್ರಹ್ಮಾವರದಲ್ಲಿ 19.0, ಕಾಪು 24.0, ಕುಂದಾಪುರ 13.0, ಬೈಂದೂರು 30.2, ಕಾರ್ಕಳ 23.2, ಹೆಬ್ರಿ 21.2ಮಿ.ಮೀ ಮಳೆ ಸುರಿದಿದೆ.







