ನಿಟ್ಟೆ : ಸೆಲ್ಲೋಮಿಕ್ಸ್ ಇಂಡೋ- ಜಪಾನ್ ಲ್ಯಾಬೋರೇಟರಿ ಉದ್ಘಾಟನೆ

ಕೊಣಾಜೆ: ದೇರಳಕಟ್ಟೆಯ ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯ, ಸಿಆರ್‌ಎಲ್ ಕ್ಷೇಮ ಮತ್ತು ನಿಟ್ಟೆ ಎಸ್‍ಎಸ್‍ಪಿ ಇದರ ಜಂಟಿ ಆಶ್ರಯದಲ್ಲಿ ನಿಟ್ಟೆ ವಿವಿ - ಮಿಯಾಝಾಕಿ ವಿವಿ ಜಪಾನ್ ಇದರ ಶೈಕ್ಷಣಿಕ - ಸಂಶೋಧನಾ ಒಡಂಬಡಿಕೆಯ ಅನ್ವಯ ನಿಟ್ಟೆ ವಿವಿಯಲ್ಲಿ ನೂತನವಾಗಿ ನಿರ್ಮಿಸಲಾದ ಸೆಲ್ಲೋಮಿಕ್ಸ್ ಇಂಡೋ-ಜಪಾನ್ ಲ್ಯಾಬೋರೇಟರಿಯ ಉದ್ಘಾಟನೆ ಸೋಮವಾರ ನಡೆಯಿತು.
ಈ ಸಂದರ್ಭದಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ಅವರು ಮಾತನಾಡಿ, ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯ ವೈದ್ಯಕೀಯ ಶಿಕ್ಷಣ ಸೇರಿದಂತೆ ಎಲ್ಲಾ ಶೈಕ್ಷಣಿಕ ರಂಗದ ಸಂಶೋಧನೆಗೆ ಒತ್ತು ನೀಡುವ ನಿಟ್ಟಿನಲ್ಲಿ ವಿವಿ ಕ್ಯಾಂಪಸ್‍ನಲ್ಲಿ ಅತೀ ದೊಡ್ಡ ಸಂಶೋಧನಾ ಕೇಂದ್ರ ನಿರ್ಮಾಣ ಹಂತದಲ್ಲಿದ್ದು ಶೀಘ್ರದಲ್ಲೇ ಕೇಂದ್ರ ಕಾರ್ಯಚರಣೆ ನಡೆಸಲಿದೆ ಎಂದು ಅಭಿಪ್ರಾಯಪಟ್ಟರು.
ನಿಟ್ಟೆಯಲ್ಲಿ 42 ವರ್ಷಗಳ ಸೀಮಿತ ವಿದ್ಯಾರ್ಥಿಗಳಿಂದ ಪ್ರಾಥಮಿಕ ಶಿಕ್ಷಣದಿಂದ ಆರಂಭಗೊಂಡ ಈ ಸಂಸ್ಥೆಯು ಇಂದು ಆತೀ ದೊಡ್ಡ ಶಿಕ್ಷಣ ಸಂಸ್ಥೆಯಾಗಿದ್ದು, ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಎಲ್ಲಾ ವೃತ್ತಿಪರ ಶಿಕ್ಷಣ ನಿಟ್ಟೆ ವಿವಿಯಲ್ಲಿದೆ. ಮಿಯಾಝಾಕಿ ವಿವಿಯೊಂದಿಗೆ ನಿಟ್ಟೆ ವಿವಿಯು ನಡೆಸಿರುವ ಸಂಶೋಧನೆ ಮತ್ತು ಶೈಕ್ಷಣಿಕ ಒಡಂಬಡಿಕೆ ಸದುಪಯೋಗವನ್ನು ನಿಟ್ಟೆ ವಿವಿ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದರು.
ಮಿಯಾಝಾಕಿ ವಿಶ್ವವಿದ್ಯಾನಿಲಯದ ಪಬ್ಲಿಕ್ ಹೆಲ್ತ್ ವಿಭಾಗದ ಮುಖ್ಯಸ್ಥ ಯೋಶಿಕಿ ಕುರೋದಾ ಸೆಲ್ಲೋಮಿಕ್ಸ್ ಇಂಡೋ - ಜಪಾನ್ ಲ್ಯಾಬೋರೇಟರಿ ಉದ್ಘಾಟಿಸಿದರು.
ನಿಟ್ಟೆ ವಿವಿ ಸಹಕುಲಾಧಿಪತಿ ಡಾ. ಎಂ. ಶಾಂತಾರಾಮ ಶೆಟ್ಟಿ, ಕುಲಪತಿ ಸತೀಶ್ ಕುಮಾರ್ ಭಂಡಾರಿ, ಉಪಕುಲಪತಿ ಡಾ. ಎಂ. ಎಸ್. ಮೂಡಿತ್ತಾಯ, ಕುಲಸಚಿವ ಡಾ. ಹರ್ಷ ಹಾಲಹಳ್ಳಿ, ಜಪಾನ್‍ನ, ಮಿಯಾಝಾಕಿ ವಿಶ್ವವಿದ್ಯಾನಿಲಯದ ಮೆಡಿಸಿನ್ ವಿಭಾಗದ ಡಾ. ಹರ್ಷಕುಮಾರ್ ಮದ್ಯಸ್ಥ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಪಾನ್ ನ ಮಿಯಾಝಾಕಿ ವಿಶ್ವವಿದ್ಯಾನಿಲಯದ ನರ್ಸಿಂಗ್ ಮಕ್ಕಳ ಚಿಕಿತ್ಸಾ ವಿಭಾಗದ ಡಾ.ಹಿರೊಟಾಕೆ ಸವಾದ, ಪಬ್ಲಿಕ್ ಹೆಲ್ತ್ ವಿಭಾಗದ ಮುಖ್ಯಸ್ಥ ಯೋಶಿಕಿ ಕುರೋದಾ ಅವರನ್ನು ನಿಟ್ಟೆ ವಿವಿಯಿಂದ ಸನ್ಮಾನಿಸಲಾಯಿತು.
ನಿಟ್ಟೆ ಸಂಶೋಧನಾ ವಿಭಾಗದ ಮುಖ್ಯಸ್ಥೆ ಸುಚೇತಾ ಸ್ವಾಗತಿಸಿ, ವಂದಿಸಿದರು.







