ಸಂವಿಧಾನ ಬದಲಾಯಿಸಿ, ಪ್ರಜಾಪ್ರಭುತ್ವ ನಾಶ ಮಾಡಲು ಹುನ್ನಾರ: ವಿನಯ ಕುಮಾರ್ ಸೊರಕೆ ಆರೋಪ
ಅವಶ್ಯಕ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಪ್ರತಿಭಟನೆ

ಹಿರಿಯಡ್ಕ, ಸೆ.12: ಬಿಜೆಪಿಯವರು ಇಂದು ನಮ್ಮ ದೇಶದ ಸಂವಿಧಾನ ಬದಲಾಯಿಸಿ, ಪ್ರಜಾಪ್ರಭುತ್ವವನ್ನು ನಿರ್ಣಾಮ ಮಾಡಲು ಹೊರಟಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವ, ಜಾತ್ಯತೀತೆ ಉಳಿಯಬೇಕಾದರೆ ಬಿಜೆಪಿ ಯನ್ನು ತೊಲಗಿಸಲೇ ಬೇಕು. ಇವರು ಎಲ್ಲದಕ್ಕೂ ಜಿಎಸ್‌ಟಿ ವಿಧಿಸಿ ಬಡವರ ರಕ್ತ ಹೀರುತ್ತಿದ್ದಾರೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆರೋಪಿಸಿದ್ದಾರೆ.
ಕೊಡಿಬೆಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷರ ದಬ್ಬಾಳಿಕೆಯನ್ನು ಖಂಡಿಸಿ, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರಕಾರಗಳ ದುರಾಡಳಿತ, ಅವಶ್ಯಕ ವಸ್ತುಗಳ ಬೆಲೆ ಏರಿಕೆಯನ್ನು ವಿರೋಧಿಸಿ ಕಾಂಗ್ರೆಸ್ ಗ್ರಾಮೀಣ ಸಮಿತಿ ಕೋಡಿಬೆಟ್ಟು ನೇತೃತ್ವದಲ್ಲಿ ಸೋಮವಾರ ಓಂತಿಬೆಟ್ಟು ಬಸ್ ನಿಲ್ದಾಣದ ಬಳಿ ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.
ಗ್ರಾಮ ಪಂಚಾಯತ್‌ಗಳ ಅನ್ಯಾಯದ ವಿರುದ್ಧ ತೀವ್ರ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಇವರಿಗೆ ಜನರಿಗೆ ಜಾಗ ನೀಡಲು, ಹಕ್ಕುಪತ್ರ ವಿತರಿಸಲು ಇನ್ನೂ ಸಾಧ್ಯವಾಗಿಲ್ಲ. ಕೇವಲ ಕಮಿಷನ್ ಭ್ರಷ್ಟಾಚಾರ ದಲ್ಲಿಯೇ ಮುಳುಗಿದ್ದಾರೆ. ಅಧಿಕಾರಿಗಳ ಕಚೇರಿಗಳಲ್ಲಿ ದಲ್ಲಾಳಿಗಳೇ ತುಂಬಿ ಹೋಗಿದ್ದಾರೆ ಎಂದು ಅವರು ದೂರಿದರು.
ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಮಾತನಾಡಿ, ಬಿಜೆಪಿ ಸರಕಾರಕ್ಕೆ ಸಂವೇದನೆ ಎಂಬುದೇ ಇಲ್ಲ. ಜನರ ನೋವು ಅರ್ಥ ಆಗುತ್ತಿಲ್ಲ. ಕೇವಲ ಕಮಿಷನ್ ತೆಗೆದು ಅಧಿಕಾರ ನಡೆಸುವುದು ಮಾತ್ರ ಇವರಿಗೆ ಗೊತ್ತು. ನಮ್ಮ ದೇಶದ ಖಜಾನೆಗೆ ಕಳೆದ ಎಂಟು ವರ್ಷಗಳಲ್ಲಿ ಪೆಟ್ರೋಲ್ ತೆರಿಗೆಯಿಂದ 28 ಲಕ್ಷ ವಸೂಲಿ ಮಾಡಲಾಗಿದೆ. ಆ ಹಣವನ್ನು ಜನಪರ ಕಾರ್ಯಕ್ರಮಕ್ಕೆ ಬಳಸುವ ಬದಲು ಅದಾನಿಗೆ ನೀಡಿದ್ದಾರೆ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಅಲ್ಪ ಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸ್ಮಾಯಿಲ್ ಆತ್ರಾಡಿ, ಕಾಪು ಕ್ಷೇತ್ರ ಉತ್ತರ ಬ್ಲಾಕ್ ಅಧ್ಯಕ್ಷ ಸಂತೋಷ್ ಶೆಟ್ಟಿ, ಮುಖಂಡರಾದ ಶಾಂತರಾಮ್ ಸೂಡ, ಶಶಿಧರ್ ಜತನ್, ಸುಧೀರ್ ರವೀಂದ್ರ ಪೂಜಾರಿ, ದಿನೇಶ್ ಪೂಜಾರಿ ಪೆರ್ಡೂರು, ಕಿರಣ್ ಕುಮಾರ್ ಹೆಗ್ಡೆ, ನಿತಿನ್ ಶೆಟ್ಟಿ, ಆನಂದ ಕೊರಂಗರಪಾಡಿ, ಲಕ್ಷ್ಮೀ ನಾಯ್ಕ್, ಸಂಧ್ಯಾ ಶೆಟ್ಟಿ, ಗುರುದಾಸ್ ಭಂಡಾರಿ, ಹರಿಯಪ್ಪ ನಾಯ್ಕ್, ಜಯಂತ್ ರಾವ್ ಹಿರಿಯಡ್ಕ, ಸಂತೋಷ್ ಕುಲಾಲ್ ಪಕ್ಕಾಲು, ಚರಣ್ ವಿಠಲ, ನಿತೀನ್ ಶೆಟ್ಟಿ, ಕೃಷ್ಣಾನಂದ್ ನಾಯಕ್, ಸಹನ ಕಾಮತ್, ಸುಧಾಕರ್ ಶೆಟ್ಟಿ, ದಿಲೀಪ್ ಹೆಗ್ಡೆ, ಕಿರಣ್ ಕುಮಾರ್ ಹೆಗ್ಡೆ, ಲಕ್ಷ್ಮೀನಾರಾಯಣ ಪ್ರಭು, ಉಮೇಶ್ ಕಾಂಚನ್, ಶಶಿಧರ್ ಜತ್ತನ್ನ ಮೊದಲಾದವರು ಉಪಸ್ಥಿತರಿದ್ದರು.








