ಸೋಮೇಶ್ವರ; ಸಿಸಿ ಕ್ಯಾಮರಾಕ್ಕೆ ಹಾನಿ: ನಾಲ್ಕು ಮಂದಿ ಸೆರೆ

ಮಂಗಳೂರು, ಸೆ.12: ಅಕ್ರಮ ಮರಳುಗಾರಿಕೆ ತಡೆಯುವ ಸಲುವಾಗಿ ಸೋಮೇಶ್ವರ ಗ್ರಾಮದ ಸೋಮನಾಥ ದೇವಸ್ಥಾನದ ಬಳಿ ಹಾಕಲಾಗಿದ್ದ ಸಿಸಿ ಕ್ಯಾಮರಾಕ್ಕೆ ಹಾನಿಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಮಂದಿಯನ್ನು ಉಳ್ಳಾಲ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಮಡ್ಯಾರ್‌ನ ಸೂರಜ್, ತಲಪಾಡಿಯ ಅಖಿಲ್, ಸೋಮೇಶ್ವರದ ಪ್ರಜ್ವಲ್, ಮುಡಿಪುವಿನ ಇಕ್ಬಾಲ್ ಬಂಧಿತ ಆರೋಪಿಗಳು. ಇವರಿಂದ ಟಿಪ್ಪರ್ ಲಾರಿಯನ್ನೂ ಕೂಡ ವಶಪಡಿಸಲಾಗಿದೆ.
ಸೋಮೇಶ್ವರ ಗ್ರಾಮದ ಸರಕಾರಿ ಪರಂಬೋಕು ಜಮೀನಿನಲ್ಲಿ ನಡೆಯುವ ಅಕ್ರಮ ಮರಳುಗಾರಿಕೆಯನ್ನು ತಡೆಯಲು ಕಂದಾಯ ಇಲಾಖೆಯು ಸೋಮನಾಥ ದೇವಸ್ಥಾನದ ಬಳಿ ಎರಡು ಸಿಸಿ ಕ್ಯಾಮರಾ ಅಳವಡಿಸಿದ್ದರು. ದುಷ್ಕರ್ಮಿಗಳು ಶನಿವಾರ ತಡರಾತ್ರಿ ಈ ಸಿಸಿ ಕ್ಯಾಮರಾವನ್ನು ಟಿಪ್ಪರ್ ಢಿಕ್ಕಿ ಹೊಡೆಸಿ ಹಾನಿಗೈದಿದ್ದರು. ಇದರಿಂದ ಸುಮಾರು 75 ಸಾವಿರ ರೂ. ನಷ್ಟವಾಗಿತ್ತು ಎಂದು ಅಂದಾಜಿಸಲಾಗಿತ್ತು.
ಈ ಬಗ್ಗೆ ಮಂಗಳೂರು ಬಿ ಗ್ರಾಮದ ಕಂದಾಯ ನಿರೀಕ್ಷಕ ಮಂಜುನಾಥ ಉಳ್ಳಾಲ ಪೊಲೀಸರಿಗೆ ಸೋಮವಾರ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.