ಪಾದಚಾರಿ ಮಾರ್ಗಗಳಲ್ಲಿನ ಟ್ರಾನ್ಸ್ ಫಾರ್ಮರ್ ಸ್ಥಳಾಂತರಿಸಿರುವ ವರದಿ ಸಲ್ಲಿಸಿ: ಹೈಕೋರ್ಟ್ ಸೂಚನೆ

ಬೆಂಗಳೂರು, ಸೆ.12: ನಗರದ ಪಾದಚಾರಿ ಮಾರ್ಗಗಳಲ್ಲಿ ಅಳವಡಿಸಿರುವ ಎಲ್ಲ ಟ್ರಾನ್ಸ್ ಫಾರ್ಮರ್ ಗಳನ್ನು ಮುಂದಿನ 3 ತಿಂಗಳಲ್ಲಿ ಸ್ಥಳಾಂತರಿಸಿರುವ ವರದಿ ಸಲ್ಲಿಸಬೇಕೆಂದು ಬೆಸ್ಕಾಂಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಟ್ರಾನ್ಸ್‍ಫಾರ್ಮರ್ ತೆರವು ಮಾಡಲು ನಿರ್ದೇಶನ ಕೋರಿ ನಿವೃತ್ತ ವಿಂಗ್ ಕಮಾಂಡರ್ ಜಿ.ಬಿ.ಅತ್ರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಈ ನಿರ್ದೇಶನ ನೀಡಿದೆ.
ಪಾದಚಾರಿ ಮಾರ್ಗಗಳಲ್ಲಿ ಅಳವಡಿಸಲಾಗಿರುವ 2,587 ಟ್ರಾನ್ಸ್ ಫಾರ್ಮರ್ ಗಳ ಪೈಕಿ 1,155 ಟ್ರಾನ್ಸ್ ಫಾರ್ಮರ್ ಗಳನ್ನು ಈಗಾಗಲೇ ತೆರವುಗೊಳಿಸಲಾಗಿದೆ. ಉಳಿದ ಟ್ರಾನ್ಸ್ ಫಾರ್ಮರ್ ಗಳನ್ನು 2023ರಲ್ಲಿ ತೆರವುಗೊಳಿಸಲಾಗುವುದು ಎಂಬ ವಿವರ ಇರುವ ಪ್ರಮಾಣ ಪತ್ರವನ್ನು ಬೆಸ್ಕಾಂನವರು ಪೀಠಕ್ಕೆ ಸಲ್ಲಿಸಿದರು.
ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಪೂರಕವಾಗಿ ಟ್ರಾನ್ಸ್‍ಫಾರ್ಮರ್ ಗಳನ್ನು ಅಳವಡಿಸಲಾಗುತ್ತದೆ. ಈಗಾಗಲೇ ಅಸ್ತಿತ್ವದಲ್ಲಿರುವ ಟ್ರಾನ್ಸ್ ಫಾರ್ಮರ್ ಗಳನ್ನು ಸೂಕ್ತ ಜಾಗಕ್ಕೆ ಸ್ಥಳಾಂತರಿಸಲು ಹಾಗೂ ಹೊಸದಾಗಿ ಟ್ರಾನ್ಸ್ ಫಾರ್ಮರ್ ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಈ ಹಿಂದಿನ ವಿಚಾರಣೆ ವೇಳೆ ಬೆಸ್ಕಾಂ ಎಂಡಿ ಅವರು ಹೈಕೋರ್ಟ್ ನ್ಯಾಯಪೀಠಕ್ಕೆ ಪ್ರಮಾಣ ಪತ್ರ ಸಲ್ಲಿಸಿದ್ದರು.
ಇದನ್ನೂ ಓದಿ: 'ಸರಕಾರ ಹಠಕ್ಕೆ ಬೀಳದೆ ಪ್ರಮುಖ ವಿಷಯಗಳ ಚರ್ಚೆಗೆ ಅವಕಾಶ ನೀಡಬೇಕು': ಪ್ರತಿಪಕ್ಷಗಳ ಒಕ್ಕೊರಲ ಆಗ್ರಹ







