ಬೆಂಗಳೂರು: ಮಳೆ ಹಾನಿ ಪರಿಹಾರ ಒದಗಿಸುವಂತೆ ಆಗ್ರಹಿಸಿ ಸಿಎಂ ಬೊಮ್ಮಾಯಿಗೆ ಮನವಿ ಸಲ್ಲಿಸಿದ ಬಹುತ್ವ ಕರ್ನಾಟಕ

ಬೆಂಗಳೂರು, ಸೆ.12: ನಗರದಲ್ಲಿ ಕಳೆದ ವಾರ ಸುರಿದ ಮಳೆಯಿಂದಾಗಿ ಹಲವಾರು ಬಡಾವಣೆಗಳಲ್ಲಿ ಪ್ರವಾಹ ಸೃಷ್ಟಿಯಾಗಿತ್ತು. ಸಾವಿರಾರು ಬಡ ಕುಟುಂಬಗಳಿಗೆ ಬಹಳ ಹಾನಿಯಾದರೂ ಸರಕಾರ ಅವರ ನೆರವಿಗೆ ಬರುತ್ತಿಲ್ಲ. ಇದರಿಂದ ಸಂತ್ರಸ್ತರು ಅತಂತ್ರರಾಗಿದ್ದಾರೆ. ಹಾಗಾಗಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಬಹುತ್ವ ಕರ್ನಾಟಕ (Bahutva Karnataka) ಮನವಿ ಪತ್ರವನ್ನು ಸಲ್ಲಿಸಿದೆ.
ಬೆಂಗಳೂರಿನಲ್ಲಿ ಇತ್ತೀಚಿಗಷ್ಟೇ ಪ್ರವಾಹದಿಂದ ನಗರದ ಶ್ರೀಮಂತರು ಮತ್ತು ಬಡವರು ಸೇರಿದಂತೆ ಅನೇಕ ಜನರು ತೊಂದರೆಗೀಡಾಗಿದ್ದಾರೆ. ಪ್ರವಾಹದ ಹೊಡೆತಕ್ಕೆ ಸಿಲುಕಿರುವ ಪ್ರತಿಯೊಬ್ಬರಿಗೂ ನೆರವಾಗುವುದು ಸರಕಾರದ ಕರ್ತವ್ಯವಾಗಿದೆ. ಆದರೆ, ಸರಕಾರವು ಪ್ರವಾಹಕ್ಕೆ ಸ್ಪಂದಿಸುತ್ತಿರುವ ರೀತಿಯನ್ನು ಗಮನಿಸಿದರೆ, ಸರಕಾರವು ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ ಎಂದು ಮೇಲು ನೋಟಕ್ಕೆ ತಿಳಿದುಬರುತ್ತದೆ. ಈ ಅನ್ಯಾಯವನ್ನು ನಿಮ್ಮ ಗಮನಕ್ಕೆ ತರಲು ಈ ಪತ್ರವನ್ನು ಬರೆಯುತ್ತಿರುವುದಾಗಿ ತಿಳಿಸಿದೆ.
ಈ ಕೂಡಲೇ, ಖುದ್ದಾಗಿ ನೀವೇ ಎಲ್ಲಾ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಂತ್ರಸ್ತ ಕುಟುಂಬಗಳಿಗೆ ಸ್ವಚ್ಛ ವಸತಿ, ಆಹಾರ, ಉಚಿತ ಪಡಿತರ, ಶೌಚಾಲಯಗಳು, ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಉತ್ಪನ್ನಗಳು ಸೇರಿ ಹಾಸಿಗೆ ಮತ್ತು ಇತರ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದೆ.
ಗರ್ಭಿಣಿಯರು, ಮಕ್ಕಳು, ಹಿರಿಯರು ಮತ್ತು ಅಗತ್ಯವಿರುವ ಇತರರಿಗೆ ಕೂಡಲೇ ವೈದ್ಯಕೀಯ ಆರೈಕೆಯನ್ನು ಒದಗಿಸಬೇಕು. ಶಾಲೆ-ಕಾಲೇಜು ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಶೈಕ್ಷಣಿಕ ಸಾಮಗ್ರಿಗಳನ್ನು ಒದಗಿಸಬೇಕು. ಹಾಗೆಯೇ, ಪೌರಕಾರ್ಮಿಕರು, ಮನೆಗೆಲಸದವರು, ತ್ಯಾಜ್ಯ ಆಯುವವರು ಮತ್ತು ಇತರ ದಿನಗೂಲಿ ಕಾರ್ಮಿಕರು ಈ ನಗರದ ಬೆನ್ನೆಲುಬಾಗಿದ್ದು, ಅವರು ಗೌರವದಿಂದ ಬದುಕುವಂತಾಗಬೇಕು. ಹಾಗಾಗಿ ಶಾಶ್ವತ ವಸತಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ ಎಂದು ಆಗ್ರಹಿಸಿದೆ.
ವಿಪತ್ತು ನಿರ್ವಹಣಾ ಕಾಯಿದೆ, 2005ರ ಸೆಕ್ಷನ್ 19ರ ಅಡಿಯಲ್ಲಿ ‘ತಕ್ಷಣದ ಪರಿಹಾರಕ್ಕಾಗಿ ಮಾರ್ಗಸೂಚಿ’ಯನ್ನು ಜಾರಿಗೊಳಿಸಬೇಕು. ವಸತಿ, ಆಹಾರ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ ಹಾನಿಗೊಳಗಾದ ಮನೆಗಳ ಮತ್ತು ಜೀವನೋಪಾಯದ ಮರುಸ್ಥಾಪನೆಗಾಗಿ ಹಣದ ಪರಿಹಾರ ಸೇರಿದಂತೆ ತಕ್ಷಣವೇ ಎಲ್ಲಾ ರೀತಿಯ ಪರಿಹಾರಗಳನ್ನು ಒದಗಿಸಬೇಕು ಎಂದು ಮನವಿ ಮಾಡಿದೆ.







