ಮಡಿಕೇರಿ | ಒಂದೇ ರಾತ್ರಿ ಮೂರು ದೇವಾಲಯಗಳಲ್ಲಿ ಕಳ್ಳತನ: ಘಂಟೆಗಳನ್ನು ಕದ್ದೊಯ್ದ ದುಷ್ಕರ್ಮಿಗಳು
ಪ್ರಕರಣ ದಾಖಲು

ಮಡಿಕೇರಿ ಸೆ.12 : ಒಂದೇ ರಾತ್ರಿ ಮೂರು ಪುರಾತನ ದೇವಾಲಯಗಳಿಗೆ ನುಗ್ಗಿದ ಚೋರರು ಘಂಟೆಗಳನ್ನೇ ಕದ್ದೊಯ್ದಿರುವ ಘಟನೆ ಕೊಡಗಿನಲ್ಲಿ (Kodagu) ನಡೆದಿದೆ.
ಒಂದೇ ತಂಡ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಂಡಿದೆ.
ಇತಿಹಾಸ ಪ್ರಸಿದ್ಧ ನಾಪೋಕ್ಲು ಬೇತು ಗ್ರಾಮದಲ್ಲಿರುವ ಶ್ರೀಮಕ್ಕಿ ಶಾಸ್ತಾವು ದೇವಾಲಯದ ಆವರಣದಲ್ಲಿದ್ದ ಒಟ್ಟು 30 ಘಂಟೆಗಳನ್ನು ಕಳವು ಮಾಡಲಾಗಿದೆ. ರವಿವಾರ ರಾತ್ರಿ ದೇವಾಲಯದ ಆವರಣದಲ್ಲಿದ್ದ ಸಿ.ಸಿ. ಕ್ಯಾಮರಾಗಳನ್ನು ಧ್ವಂಸ ಮಾಡಿ ಘಂಟೆಗಳನ್ನು ಕದ್ದೊಯ್ಯಲಾಗಿದೆ ಎಂದು ಹೇಳಲಾಗಿದೆ.
ಈ ಕುರಿತು ದೇವಾಲಯ ಆಡಳಿತ ಮಂಡಳಿ ನಾಪೋಕ್ಲು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಸದಾಶಿವ ಹಾಗೂ ಸಿಬ್ಬಂದಿಗಳು ತೆರಳಿ ಪರಿಶೀಲನೆ ನಡೆಸಿದರು.
ವಿರಾಜಪೇಟೆ ಕೆದಮಳ್ಳೂರು ಗ್ರಾಮದ ದಾರಾ ಮಹದೇಶ್ವರ ದೇವಾಲಯ ಮತ್ತು ಕೊಟ್ಟೋಳಿ ಗ್ರಾಮದಲ್ಲಿರುವ ಈಶ್ವರ ದೇವಾಲಯದಲ್ಲಿಯೂ ಘಂಟೆ ಕಳವು ಮಾಡಲಾಗಿದೆ. ವಿರಾಜಪೇಟೆ ದಾರಾ ಮಹದೇಶ್ವರ ದೇವಾಲಯದ ಆವರಣದಲ್ಲಿದ್ದ 15 ಘಂಟೆಗಳ ಸಹಿತ ಒಂದು ದೀಪ ಹಾಗೂ ಕೊಟ್ಟೋಳಿ ಗ್ರಾಮದ ಈಶ್ವರ ದೇವಾಲಯದಲ್ಲಿದ್ದ 8 ತೂಗು ಗಂಟೆಗಳನ್ನು ಕಳವು ಮಾಡಲಾಗಿದೆ. ಘಟನಾ ಸ್ಥಳಕ್ಕೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. 2 ದೇವಾಲಯಗಳ ಗಂಟೆಗಳು ಹಾಗೂ 1 ದೀಪ ಕಳವು ಘಟನೆಗೆ ಸಂಬಂಧಿಸಿದಂತೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.







