ಉಪ್ಪಿನಂಗಡಿ: ಮೊಬೈಲ್ ಫೋನ್ ಬದಲು ಕೆಟ್ಟುಹೋದ ತಿಂಡಿಯ ಪೊಟ್ಟಣ!
ಅದೃಷ್ಟದ ಹೆಸರಲ್ಲಿ ಗ್ರಾಹಕರಿಗೆ ವಂಚನೆ

ಉಪ್ಪಿನಂಗಡಿ: ಅದೃಷ್ಟ (ಲಕ್ಕಿ) ಗ್ರಾಹಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ 8,800 ರೂ. ಮುಖ ಬೆಲೆಯ ಮೊಬೈಲ್ ಫೋನ್ 1,785 ಕ್ಕೆ ಕಳುಹಿಸಲಾಗಿದೆ ಎಂಬ ಸಂದೇಶವನ್ನು ನಂಬಿ ಅಂಚೆ ಮೂಲಕ ಬಂದ ಪಾರ್ಸೆಲ್ ಖರೀದಿಸಿದ ವ್ಯಕ್ತಿಯೋರ್ವರಿಗೆ ಮೊಬೈಲ್ ಫೋನ್ ಬದಲು ಕೆಟ್ಟು ಹೋದ ತಿಂಡಿಯ ಪೊಟ್ಟಣ ಕಳುಹಿಸಿ ವಂಚಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ದೇವಸ್ಥಾನವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿರುವ ಭವಾನಿ ಶಂಕರ್ ಎಂಬವರು ಇತ್ತೀಚೆಗಷ್ಟೇ ತನ್ನ ಮನೆ ಮಂದಿಗೆಂದು ಮೂರು ವಿವೋ ಕಂಪೆನಿಯ ಮೊಬೈಲ್ ಫೋನ್ ಖರೀದಿಸಿದ್ದರು. ಇದರ ಬಳಿಕ ಸಂಸ್ಥೆಯ ಅಧಿಕಾರಿಯೆಂದು ಅವರ ಮೊಬೈಲ್ ಫೋನ್‍ಗೆ ಕರೆಯೊಂದನ್ನು ಮಾಡಿದ ವ್ಯಕ್ತಿಯೋರ್ವರು "ಮೂರು ಮೊಬೈಲ್ ಖರೀದಿಸಿದ್ದಕ್ಕೆ ಸಂಸ್ಥೆಯ ಲಕ್ಕಿ ಗ್ರಾಹಕರಾಗಿ ನೀವು ಆಯ್ಕೆಯಾಗಿದ್ದೀರಿ. ಈ ಹಿನ್ನೆಲೆಯಲ್ಲಿ 8,800 ರೂ. ಬೆಲೆಯ ಮೊಬೈಲ್ ಫೋನ್ ಕೇವಲ 1,785 ರೂ.ಗೆ ಕಳುಹಿಸಲಾಗುವುದು. ಹಣ ತೆತ್ತು ಅಂಚೆ ಕಚೇರಿಯಿಂದ ಪಡೆದುಕೊಳ್ಳಿ' ಎಂದು ತಿಳಿಸಿದ್ದರು.
ತಾನು ಫೋನ್ ಖರೀದಿಸಿರುವುದು ನಿಜವಾಗಿರುವಾಗ ನನಗೆ ಅದೃಷ್ಟ ಒಲಿದಿರುವುದು ನಿಜವಾಗಿರಬಹುದೆಂದು ನಂಬಿದ ಭವಾನಿ ಶಂಕರ್ ಸೋಮವಾರ ಉಪ್ಪಿನಂಗಡಿ ಅಂಚೆ ಕಚೇರಿಗೆ ಬಂದ ಪಾರ್ಸೆಲ್ ಅನ್ನು ಹಣ ತೆತ್ತು ಪಡೆದುಕೊಂಡರಲ್ಲದೆ, ಸಂದೇಹ ಬಗೆಹರಿಸಲು ಅಲ್ಲಿಯೇ ಪಾರ್ಸೆಲ್ ಅನ್ನು ತೆರೆದು ನೋಡಿದಾಗ ಕೆಟ್ಟು ಹೋದ ತಿಂಡಿಯ ಪೊಟ್ಟಣವನ್ನು ಪ್ಯಾಕ್ ಮಾಡಿ ಕಳುಹಿಸಿರುವುದು ಕಂಡು ಬಂದಿದೆ.
ತಾನು ಫೋನ್ ಖರೀದಿಸಿರುವುದು ಈ ವಂಚಕರ ತಂಡಕ್ಕೆ ತಿಳಿದಿರುವ ಬಗೆ ಹೇಗೆ ಎನ್ನುವ ಪ್ರಶ್ನೆಯೊಂದಿಗೆ, ತಾನು ಮೋಸ ಹೋದಂತೆ ಇನ್ನ್ಯಾರೂ ಮೋಸ ಹೋಗಬಾರದೆಂದು ಪ್ರಕರಣವನ್ನು ಅವರು ಮಾಧ್ಯಮದ ಗಮನಕ್ಕೆ ತಂದಿದ್ದಾರೆ.