ಇಂಡಿಯಾನಾ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗೆ ಏಕ- ಕೀಹೋಲ್ ಶಸ್ತ್ರಚಿಕಿತ್ಸೆ

ಮಂಗಳೂರು, ಸೆ.12: ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್ಸ್ಟಿಟ್ಯೂಟ್ ಆಂಕಾಲಜಿ ತಜ್ಞರ ತಂಡದಿಂದ ಶ್ವಾಸಕೋಶದ ಕ್ಯಾನ್ಸರ್ ರೋಗಿಗೆ ಏಕ ಕೀಹೋಲ್ ಶಸ್ತ್ರಚಿಕಿತ್ಸೆಯನ್ನು ನಗರದಲ್ಲೇ ಪ್ರಥಮ ಬಾರಿಗೆ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಆಸ್ಪತ್ರೆಯ ಕನ್ಸಲ್ಟಿಂಗ್ ಆಂಕಾಲಾಜಿಸ್ಟ್ ಡಾ.ಅಜಯ್ ಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, 'ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿ ಮಂಗಳೂರು ನಿವಾಸಿಯಾಗಿದ್ದು, ಕಾರ್ಸಿನೋಮಾ ಲೆರಿಂಕ್ಸ್ (ಧ್ವನಿ ಪೆಟ್ಟಿಗೆಯನ್ನು ಬಾಧಿಸುವ ಕ್ಯಾನ್ಸರ್) ನಿಂದ ಬಳಲುತ್ತಿದ್ದರು. ಇದಕ್ಕಾಗಿ ಅವರು ರೋಗನಿವಾರಕ ಕಿಮೋ ರೇಡಿಯೋಥೆರಪಿ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣವಾಗಿದ್ದರು. ಆದರೆ ಎಂಟು ತಿಂಗಳ ನಂತರ ಸ್ಕ್ಯಾನಿಂಗ್ ವೇಳೆ ರೋಗಿಯ ಎಡ ಶ್ವಾಸಕೋಶದಲ್ಲಿ ಗಾಯ ಇರುವುದು ಕಂಡುಬಂದಿದೆ. ಬಯಾಪ್ತಿ ಮಾಡಿದಾಗ ಅದು ಶ್ವಾಸಕೋಶದ ಅಂಗಾಂಶದಲ್ಲಿ ಉಂಟಾಗುವ ಕ್ಯಾನ್ಸರ್ ಎಂದು ದೃಢಪಟ್ಟಿತು. ಇದಕ್ಕೆ ಶಸ್ತ್ರಚಿಕಿತ್ಸೆ ಅಗತ್ಯವಾಗಿದ್ದು, 63 ವರ್ಷದ ರೋಗಿಯ ಎದೆಗೂಡು ತೆರೆಯುವುದು ಅಪಾಯಕಾರಿಯಾಗಿರುವುದರಿಂದ ಏಕ-ಕೀಹೋಲ್ ಶಸ್ತ್ರಚಿಕಿತ್ಸೆ ನಡೆಸಲು ನಮ್ಮ ವೈದ್ಯರ ತಂಡ ನಿರ್ಧರಿಸಿತು. ಅದರಂತೆ ಯೂನಿಪೋರ್ಟಲ್ ವೀಡಿಯೋ ಸಹಾಯದಿಂದ ಎದೆಗೂಡಿನ ಶಸ್ತ್ರಚಿಕಿತ್ಸೆ (ವ್ಯಾಟ್ಸ್) ಮಾಡಲಾಗಿದ್ದು, ಈಗ ಅವರು ತೃಪ್ತಿಕರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ' ಎಂದು ವಿವರಿಸಿದರು.
ಏಕ-ಕೀಹೋಲ್ ಶಸ್ತ್ರಚಿಕಿತ್ಸೆ ಹೆಚ್ಚು ಅನುಕೂಲಕರ ಎಂದು ಕನ್ಸಲಿಂಗ್ ಇಂಟರ್ ವೆನನಲ್ ಗ್ಯಾಸ್ಫೋ ಎಂಟ್ರಾಲಜಿಸ್ಟ್ ಡಾ.ಅಪೂರ್ವ ಶ್ರೀಜಯದೇವ ತಿಳಿಸಿದರು. ಈ ಸಂದರ್ಭ ಮೆಡಿಕಲ್ ಆಂಕಾಲಜಿಸ್ಟ್ ಡಾ.ರಮಾನಾಥ ಶೆಣೈ ಉಪಸ್ಥಿತರಿದ್ದರು.





