ಇಡಿ ಪ್ರಕರಣದಲ್ಲಿ ಜಾಮೀನು ದೊರೆತ ನಂತರವಷ್ಟೇ ಸಿದ್ದೀಕ್ ಕಪ್ಪನ್ ಬಿಡುಗಡೆ: ಲಕ್ನೋ ಜೈಲಿನ ಅಧಿಕಾರಿಗಳು

ಹೊಸದಿಲ್ಲಿ: ಹತ್ರಾಸ್ ಸಾಮೂಹಿಕ ಅತ್ಯಾಚಾರ ಪ್ರಕರಣ(Hatras Rape) ಸಂಬಂಧ ವರದಿಗಾರಿಕೆಗೆಂದು ಹತ್ರಾಸ್‍ಗೆ ತೆರಳುತ್ತಿದ್ದ ವೇಳೆ ಅಕ್ಟೋಬರ್ 2020 ರಲ್ಲಿ ಬಂಧನಕ್ಕೀಡಾಗಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದೀಖ್ ಕಪ್ಪನ್(Siddeeq Kappan) ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ಮಂಜೂರುಗೊಳಿಸಿ ಬಿಡುಗಡೆಗೆ ಆದೇಶಿಸಿದೆಯಾದರೂ ಕಪ್ಪನ್ ಅವರು ಜಾರಿ ನಿರ್ದೇಶನಾಲಯದ ಪ್ರಕರಣದಲ್ಲಿ ಜಾಮೀನು ಪಡೆಯಬೇಕಿರುವುದರಿಂದ ಅವರನ್ನು ಇನ್ನೂ ಬಿಡುಗಡೆಗೊಳಿಸಲಾಗಿಲ್ಲ ಎಂದು ಲಕ್ನೋ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಕಪ್ಪನ್, ಅತೀಕುರ್ರಹಮಾನ್, ಆಲಂ ಮತ್ತು ಮಸೂದ್ ಅವರನ್ನು ಅಕ್ಟೋಬರ್ 5, 2020 ರಂದು ಬಂಧಿಸಿ ಐಪಿಸಿ ವಿವಿಧ ಸೆಕ್ಷನ್‍ಗಳನ್ವಯ, ಯುಎಪಿಎ ಅನ್ವಯ ಹಾಗೂ ಐಟಿ ಕಾಯಿದೆಯನ್ವಯ ಪ್ರಕರಣ ದಾಖಲಿಸಲಾಗಿತ್ತು.
ಆದರೆ ಸಿದ್ದೀಖ್ ಅವರ ವಿರುದ್ಧ ಬಾಕಿಯಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅವರು ಇನ್ನೂ ಜಾಮೀನು ಪಡೆದಿಲ್ಲ, ಈ ಪ್ರಕರಣದಲ್ಲಿಯೂ ಅವರಿಗೆ ಜಾಮೀನು ದೊರಕಿದ ಮೇಲೆ ಅವರನ್ನು ಬಿಡುಗಡೆಗೊಳಿಸಲಾಗುವುದು ಎಂದು ಲಕ್ನೋ ಕಾರಾಗೃಹದ ಹಿರಿಯ ಅಧೀಕ್ಷಕ ಆಶಿಷ್ ತಿವಾರಿ ಹೇಳಿದ್ದಾರೆ.
ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣದ ಪ್ರಕಾರ ಸಿದ್ದೀಖ್ ಅವರು ಅತೀಕುರ್ರಹಮಾನ್ ಅವರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದರು ಹಾಗೂ ಮೊಹಮ್ಮದ್ ಆಲಂ ಅವರು ಹತ್ರಸ್‍ಗೆ ಮಸೂದ್ ಹೆಸರಿನಲ್ಲಿ ಖರೀದಿಸಿದ್ದ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಜಾರಿ ನಿರ್ದೇಶನಾಲಯ ಹೇಳಿದೆಯಲ್ಲದೆ ಹತ್ರಸ್‍ಗೆ ತೆರಳುವ 15 ದಿನ ಮುಂಚಿತವಾಗಿ ಕಾರನ್ನು ರೂ 2.25 ಲಕ್ಷ ತೆತ್ತು ಖರೀದಿಸಲಾಗಿತ್ತು ಎಂದು ಇಡಿ ಹೇಳಿದೆ. ಸಿಎಫ್‍ಐಗೆ ಹಣ ಸಂಗ್ರಹಿಸುವವರಲ್ಲಿ ಪ್ರಮುಖ ಎಂದು ಇಡಿ ಗುರುತಿಸಿರುವ ರವೂಫ್ ಶರೀಫ್ ಎಂಬಾತ ಹೂಡಿರುವ ಸಂಚಿನಲ್ಲಿ ಕಪ್ಪನ್ ಸಕ್ರಿಯವಾಗಿದ್ದರು ಎಂದು ಇಡಿ ಹೇಳಿದೆ.
ಕಳೆದ ಶುಕ್ರವಾರ ಕಪ್ಪನ್‍ಗೆ ಜಾಮೀನು ನೀಡಿದ್ದ ಸುಪ್ರೀಂ ಕೋರ್ಟ್, ಅವರು ದಿಲ್ಲಿಯಲ್ಲಿ ಆರು ವಾರಗಳ ಕಾಲ ಇರಬೇಕು ಹಾಗೂ ನಂತರ ಕೇರಳಕ್ಕೆ ತೆರಳಬಹುದು ಎಂದು ಹೇಳಿತ್ತು. ಅವರ ಪಾಸ್‍ಪೋರ್ಟ್ ಹಾಜರುಪಡಿಸುವಂತೆ ಹಾಗೂ ಪ್ರತಿ ಸೋಮವಾರ ಠಾಣೆಗೆ ಹಾಜರಾಗುವಂತೆಯೂ ಸುಪ್ರೀಂ ಕೋರ್ಟ್ ಸೂಚಿಸಿದೆ.