ಪಾಠ ಕಲಿಸುವ ನಾವು ಭಿಕ್ಷೆ ಬೇಡುವ ಪರಿಸ್ಥಿತಿ: ದ.ಕ. ಜಿಲ್ಲೆಯ ಅತಿಥಿ ಶಿಕ್ಷಕರ ನೋವಿನ ನುಡಿ
► ನಾಲ್ಕು ತಿಂಗಳಿನಿಂದ ಸಿಗದ ಗೌರವ ಧನ

ಮಂಗಳೂರು, ಸೆ.13: ನ್ಯಾಯಯುತವಾಗಿ ಸಿಗಬೇಕಾದ ಗೌರವ ಧನ ಕಳೆದ ನಾಲ್ಕು ತಿಂಗಳಿನಿಂದ ಸಿಗದೆ ನಮ್ಮ ಅಗತ್ಯಕ್ಕಾಗಿ ಮನೆಯವರಲ್ಲಿ ಭಿಕ್ಷೆ ಬೇಡುವ ಮೂಲಕ ಮನಸ್ಸಿನಲ್ಲಿ ಕೊರಗು ಇಟ್ಟುಕೊಂಡು ಮುಖದಲ್ಲಿ ನಗು ತಂದುಕೊಂಡು ಪಾಠ ಹೇಳುವ ಪರಿಸ್ಥಿತಿ ನಮ್ಮದಾಗಿದೆ ಎಂದು ದ.ಕ. ಜಿಲ್ಲೆಯ ಅತಿಥಿ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದ.ಕ. ಜಿಲ್ಲಾ ಅತಿಥಿ ಶಿಕ್ಷಕರ ಸಂಘದ ವತಿಯಿಂದ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ತಮ್ಮ ನೋವು ತೋಡಿಕೊಂಡ ಸಂಘದ ಕಾರ್ಯದರ್ಶಿ ಚಿತ್ರಲೇಖಾ, ಗೌರವ ಧನ ಪಡೆಯಲು ಇದೀಗ ಸೆ. 26ರಂದು ದ.ಕ. ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿರುವುದಾಗಿ ಹೇಳಿದರು.
ದ.ಕ. ಜಿಲ್ಲೆಯಲ್ಲಿ ಸುಮಾರು 750 ಮಂದಿ ಅತಿಥಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು, 2022ರ ಮೇ 15ರಿಂದ ಈ ಶೈಕ್ಷಣಿಕ ಸಾಲಿನ ಕರ್ತವ್ಯ ಆರಂಭಿಸಲಾಗಿದೆ. ಆದರೆ ಈವರೆಗೆ ಬಿಡಿಗಾಸು ಕೂಡಾ ತಮಗೆ ದೊರಕಿಲ್ಲ ಎಂದು ಅವರು ಹೇಳಿದರು.
ಸರಕಾರಿ ಶಾಲೆಗಳಲ್ಲಿ 2012ರಿಂದ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗಿದ್ದು ರಾಜ್ಯಾದ್ಯಂತ ಸುಮಾರು 30,000 ಅತಿಥಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. ಅತಿಥಿ ಶಿಕ್ಷಕರಿಗೆ ಈ ಹಿಂದೆ 7,500 ರೂ. ಗೌರವಧನ ನೀಡುತ್ತಿದ್ದರು. ಹಲವು ಮನವಿಗಳ ಬಳಿಕ ಸರಕಾರ ಈ ಶೈಕ್ಷಣಿಕ ವರ್ಷದಿಂದ 10,000 ರೂ.ಗಳಿಗೆ ಏರಿಕೆ ಮಾಡಿದೆ. ಮಧ್ಯಮ ವರ್ಗದವರೇ ಇರುವ ಶಿಕ್ಷಕರು ತಮ್ಮ ಶಾಲೆಗಳಿಗೆ ತೆರಲು ಬಸ್ಸಿಗಾಗಿಯೂ ಮನೆಯವರ ಬಳಿ ಕೈಯೊಡ್ಡುವ ಪರಿಸ್ಥಿತಿ ಇದೆ. ನಮ್ಮ ಹೆತ್ತವರು ನಮಗೆ ಇಷ್ಟು ಶಿಕ್ಷಣ ಒದಗಿಸಿ, ನಾವು ಬಿಎಡ್ ಮಾಡಿಕೊಂಡು ಶಿಕ್ಷಕರಾಗಿದ್ದರೂ ನಮಗೆ ಸ್ವಾಭಿಮಾನದ ಬದುಕು ಅಸಾಧ್ಯವಾಗಿದೆ ಎಂದು ಮಂಗಳೂರು ತಾಲೂಕು ಸಂಘದ ಉಪಾಧ್ಯಕ್ಷೆ ಸೌಮ್ಯ ಬೇಸರ ವ್ಯಕ್ತಪಡಿಸಿದರು.
ಅತಿಥಿ ಶಿಕ್ಷಕಿಯಾಗಿರುವ ನನ್ನ ಸ್ನೇಹಿತೆಯೊಬ್ಬಳು ಇತ್ತೀಚೆಗೆ ತನ್ನ ನೋವು ತೋಡಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ದಾರಿ ಎಂದು ಹೇಳಿಕೊಂಡಿದ್ದಾರೆ. ಈಗಿನ ಬೆಲೆ ಏರಿಕೆ, ಜಿಎಸ್‌ಟಿ ಕಡಿತ ಎಲ್ಲದರ ನಡುವೆ ನಮಗೆ ನೀಡಬೇಕಾದ ಕನಿಷ್ಠ ವೇತನ ಮಾಸಿಕ 10,000 ರೂ.ಗಳನ್ನು ನೀಡಲು ಕೂಡಾ ಈ ರೀತಿ ವಿಳಂಬ ಮಾಡಿದರೆ ನಾವು ಬದುಕುವುದಾದರೂ ಹೇಗೆ ಎಂದು ಅತಿಥಿ ಶಿಕ್ಷಕಿ ಕವಿತಾ ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಗಳೂರು ಸಂಘದ ತಾಲೂಕು ಕಾರ್ಯದರ್ಶಿ ಭವ್ಯ ಹಾಗೂ ಇತರರು ಉಪಸ್ಥಿತರಿದ್ದರು.
ಸೆ.25ರ ಗಡುವು
ಸಂಘದ ಅಧ್ಯಕ್ಷೆ ಚಂದ್ರಿಕಾ ಅವರು ಮಾತನಾಡಿ, ಸೆ.25ರೊಳಗೆ ಗೌರವಧನ ಬಿಡುಗಡೆ ಮಾಡದಿದ್ದರೆ ಸೆ.26ರಂದು ಜಿಲ್ಲಾಮಟ್ಟದಲ್ಲಿ ಮಂಗಳೂರಿನ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಲಾಗುವುದು. ಗೌರವಧನ ನೀಡಬೇಕಾದರೆ ಪದೇ ಪದೇ ಬೀದಿಗಿಳಿಯುವ ಪರಿಸ್ಥಿತಿ ಅತಿಥಿ ಶಿಕ್ಷರದ್ದು. ಶಿಕ್ಷಕರ ನೇಮಕಾತಿ ಪ್ರಕ್ರಿಯೆಯೂ ನಡೆಯುತ್ತಿಲ್ಲ. ಪರೀಕ್ಷೆಗಳನ್ನು ಬರೆಯಲು ಶುಲ್ಕ ಪಾವತಿಸುವುದಕ್ಕೂ ಹಣವಿಲ್ಲದಂತಾಗಿದೆ. ಉದ್ಯೋಗದ ಭದ್ರತೆಯೂ ಇಲ್ಲ. ಕನಿಷ್ಠ ವೇತನವೂ ಸಿಗುತ್ತಿಲ್ಲ. ಸರಕಾರ ಗೌರವಧನವನ್ನು ಪ್ರತೀ ತಿಂಗಳು ನೀಡಬೇಕು, ಅನುಭವದ ಆಧಾರದ ಮೇಲೆ ಪ್ರತೀ ವರ್ಷ ಈಗ ಕರ್ತವ್ಯ ಸಲ್ಲಿಸುತ್ತಿರುವವವರನ್ನೇ ಮುಂದುವರಿಸಬೇಕು, ಗೌರವಧನವನ್ನು ಕನಿಷ್ಠ ವೇತನಕ್ಕೆ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದರು.