ಸುದ್ದಿ ಕೃಷಿ ಸೇವಾ ಕೇಂದ್ರದಿಂದ ' ಕೃಷಿಕರಿಗೆ ಸಂಪೂರ್ಣ ಸ್ವಾತಂತ್ರ್ಯಆಂದೋಲನ' -ಡಾ.ಯು.ಪಿ.ಶಿವಾನಂದ

ಸಾಂದರ್ಭಿಕ ಚಿತ್ರ
ಮಂಗಳೂರು: 'ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ - ಉತ್ತಮ ಸೇವೆಗೆ ಪುರಸ್ಕಾರ' ಎಂಬ ಜನಾಂದೋಲನ ವನ್ನು ಪ್ರಾರಂಭಿಸಿದ್ದು, ಇದರೊಂದಿಗೆ ಕೃಷಿಕರಿಗೆ ಸ್ವಾತಂತ್ರ್ಯವೆಂಬ ಆಂದೋಲನವನ್ನು ಸುದ್ದಿ ಕೃಷಿ ಸೇವಾ ಕೇಂದ್ರದಿಂದ ಪ್ರಾರಂಭಿಸಿದ್ದೇವೆ ಎಂದು ಸುದ್ದಿ ಮಾಹಿತಿ ಟ್ರಸ್ಟ್- ಸುದ್ದಿ ಕೃಷಿ ಸೇವಾ ಕೇಂದ್ರದ ನಿರ್ದೇಶಕ ಡಾ.ಯು.ಪಿ. ಶಿವಾನಂದ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕೃಷಿಕರು ಇಂದು ದೇಶದ ಬೆನ್ನೆಲುಬು ಆಗಿದ್ದರೂ ಅವರು ಲಂಚ ಭ್ರಷ್ಟಾಚಾರದಿಂದ ಅತಿ ಹೆಚ್ಚು ತೊಂದರೆಗೆ ಒಳಗಾಗುವವರಾಗಿದ್ದಾರೆ. ಅದನ್ನು ನಿವಾರಿಸಲಿಕ್ಕಾಗಿ ಕೃಷಿಕರ ಮನೆ ಮನೆ ಬಾಗಿಲಿಗೆ ಸೇವೆಯನ್ನು ಪ್ರಾರಂಭಿಸಲಿದ್ದೇವೆ. ಪ್ರತಿಯೊಂದು ಇಲಾಖೆಯಲ್ಲೂ ಅವರಿಗೆ ದೊರಕುವ ಮಾಹಿತಿಯನ್ನು ತಲುಪಿಸಲಿದ್ದೇವೆ. ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಪ್ರಯತ್ನಿಸಲಿದ್ದೇವೆ. ಕೃಷಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಮತ್ತು ಸೇವೆಗಳು ನಮ್ಮಲ್ಲಿ ದೊರೆಯಲಿದೆ. ಗಿಡ ನೆಡುವುದರಿಂದ ಹಿಡಿದು ಉತ್ಪನ್ನ ದೊರಕುವಲ್ಲಿಯವರೆಗೆ, ಮಾರುಕಟ್ಟೆಯವರೆಗೆ ಅವರಿಗೆ ಮಾಹಿತಿ ಮತ್ತು ಸೇವೆ ಒದಗಿಸಲು ಸುದ್ದಿ ಕೃಷಿ ಸೇವಾ ಕೇಂದ್ರಗಳನ್ನು ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಪ್ರಾರಂಭಿಸಿದ್ದೇವೆ, ಜಿಲ್ಲೆಗೂ ವಿಸ್ತರಿಸಲಿದ್ದೇವೆ. ಕೃಷಿಕರ ಬದುಕು ಲಂಚ ಭ್ರಷ್ಟಾಚಾರ ಮುಕ್ತವಾಗಿ, ಸ್ವತಂತ್ರವಾಗಿ ಸ್ವಾಭಿಮಾನದಿಂದ ಜೀವನ ಸಾಗುವಂತೆ ಮಾಡುವುದು ನಮ್ಮ ಸುದ್ದಿ ಕೃಷಿ ಮಾಹಿತಿ ಸೇವಾ ಕೇಂದ್ರದ ಉದ್ದೇಶವಾಗಿದೆ. ಈ ಯೋಜನೆಗೂ ತಮ್ಮೆಲ್ಲರ ಸಹಕಾರ ಮತ್ತು ಬೆಂಬಲವನ್ನು ಕೋರುತ್ತಿದ್ದೇನೆ ಎಂದು ಶಿವಾನಂದ ತಿಳಿಸಿದರು.
ಸುದ್ದಿ ಗೋಷ್ಠಿಯಲ್ಲಿ ಸುದ್ದಿ ಮಾಹಿತಿ ಟ್ರಸ್ಟ್, ಸುದ್ದಿ ಕೃಷಿ ಸೇವಾ ಕೇಂದ್ರದ ಸಂಘಟಕರಾದ ಶಿವ ಪ್ರಸಾದ್ ಸುಳ್ಯ, ರಾಜೇಶ್ ಪುತ್ತೂರು, ದಾಮೋದರ ದಂಡೋಳಿ, ಭಾಸ್ಕರ ರೈ ಮೊದಲಾದವರು ಉಪಸ್ಥಿತರಿದ್ದರು.





