ನಿವೃತ್ತಿಗೆ ಒಂದು ತಿಂಗಳು ಬಾಕಿ ಇದ್ದಂತೆ ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣದ ತನಿಖಾಧಿಕಾರಿ ವಜಾ

Photo : hindupost
ಅಹಮದಾಬಾದ್: ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣದ ಸಿಬಿಐ ತನಿಖೆಯ ನೇತೃತ್ವ ವಹಿಸಿದ್ದ ಗುಜರಾತ್ ಕೇಡರ್ ಐಪಿಎಸ್ ಅಧಿಕಾರಿ ಸತೀಶ್ ಚಂದ್ರ ವರ್ಮಾ ಅವರನ್ನು ನಿವೃತ್ತಿಗೆ ಕೇವಲ ಒಂದು ತಿಂಗಳು ಬಾಕಿ ಇರುವಾಗಲೇ ಸೇವೆಯಿಂದ ವಜಾಗೊಳಿಸಲಾಗಿದೆ. ಅವರ ಸೇವೆಯು ಸೆಪ್ಟೆಂಬರ್ 30 ರಂದು ಮುಕ್ತಾಯಗೊಳ್ಳಬೇಕಿತ್ತು.
ಇಲಾಖಾ ಪ್ರಕರಣಗಳಿಗೆ ಸಂಬಂಧಿಸಿದ ವಿವಿಧ ಕಾರಣಗಳಿಗಾಗಿ ಅವರನ್ನು ಸೇವೆಯಿಂದ ವಜಾಗೊಳಿಸಿ ಸರ್ಕಾರ ಆಗಸ್ಟ್ 30 ರಂದು ಆದೇಶ ಹೊರಡಿಸಿದೆ. ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣದಲ್ಲಿ ಸರ್ಕಾರವನ್ನು ಮುಜುಗರಕ್ಕುಂಟು ಮಾಡುವಂತೆ ಹಾಗೂ ದೇಶದ ಅಂತರಾಷ್ಟ್ರೀಯ ಸಂಬಂಧಗಳನ್ನು ಕೆಡಿಸುವ ರೀತಿ ಮಾಧ್ಯಮಗಳೊಂದಿಗೆ ಮಾತನಾಡಿರುವುದು ವಜಾಗೊಳಿಸಲು ಕಾರಣ ಎಂದು ವರದಿಯಾಗಿದೆ.
ವಜಾಗೊಳಿಸುವ ಆದೇಶದ ವಿರುದ್ಧ ದಿಲ್ಲಿ ಹೈಕೋರ್ಟ್ ಮೊರೆ ಹೋಗಿರುವ ವರ್ಮಾ ಅವರು ತಮ್ಮ ವಿರುದ್ಧ ಹಲವಾರು ಶಿಸ್ತು ಕ್ರಮಗಳನ್ನು ಪ್ರಶ್ನಿಸಿದ್ದರು. ವಜಾಗೊಳಿಸುವ ಆದೇಶವನ್ನು ಸೆಪ್ಟೆಂಬರ್ 1 ರಿಂದ ಜಾರಿಗೆ ತರಲು ಕೇಂದ್ರ ಸರ್ಕಾರವು ಅರ್ಜಿಯನ್ನು ಸಲ್ಲಿಸಿತು. ವರ್ಮಾ ಅವರ ವಜಾ ಪ್ರಕರಣ ದಿಲ್ಲಿ ಹೈಕೋರ್ಟ್ನಲ್ಲಿ ಸುಮಾರು ಒಂದು ವರ್ಷದಿಂದ ಬಾಕಿ ಉಳಿದಿತ್ತು. ವರ್ಮಾ ವಿರುದ್ಧ ತ್ವರಿತವಾಗಿ ಶಿಸ್ತು ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಸರ್ಕಾರಕ್ಕೆ ಸೂಚಿಸಿತ್ತು.
ಇಶ್ರತ್ ಜಹಾನ್ ಎನ್ಕೌಂಟರ್ ಬಗ್ಗೆ ತನಿಖೆ ನಡೆಸಲು ಗುಜರಾತ್ ಹೈಕೋರ್ಟ್ ರಚಿಸಿದ್ದ ವಿಶೇಷ ತನಿಖಾ ತಂಡದ ಸದಸ್ಯರಾಗಿದ್ದ ಐಪಿಎಸ್ ಅಧಿಕಾರಿ ಸತೀಶ್ ಚಂದ್ರ ವರ್ಮಾ ವಿರುದ್ಧ ಸರ್ಕಾರವು ಕಚೇರಿ ದುರ್ಬಳಕೆ ಸೇರಿದಂತೆ ವಿವಿಧ ಆರೋಪಗಳನ್ನು ಹೊರಿಸಿ ಅವರ ವಿರುದ್ಧ ಮೂರು ಇಲಾಖಾ ತನಿಖೆಗಳನ್ನು ಆರಂಭಿಸಿತ್ತು. ಇಶ್ರತ್ ಜಹಾನ್ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡುವ ಮೂಲಕ ಸರ್ಕಾರದ ಇಮೇಜ್ಗೆ ಧಕ್ಕೆ ತಂದ ಆರೋಪಗಳು ಇದರಲ್ಲಿ ಸೇರಿವೆ. 2010-2011ರಲ್ಲಿ ರಾಜ್ಯ ಸರ್ಕಾರ ಇಲಾಖಾ ಪ್ರಕರಣಗಳ ಆಧಾರದ ಮೇಲೆ ವರ್ಮಾಗೆ ಬಡ್ತಿ ನೀಡಲು ಸರ್ಕಾರ ನಿರಾಕರಿಸಿದೆ ಎಂದು ವರ್ಮಾ ಈ ಹಿಂದೆ ಹೇಳಿದ್ದರು. 1986-ಬ್ಯಾಚ್ ಅಧಿಕಾರಿಯಾಗಿರುವ ಅವರು ಇನ್ನೂ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (IGP) ಆಗಿ ಸೇವೆ ಸಲ್ಲಿಸುತ್ತಿದ್ದರೆ, 1987 ರ ಅವರ ಕಿರಿಯರು ಮತ್ತು ಇತರ ಬ್ಯಾಚ್ಗಳ ಅಧಿಕಾರಿಗಳು ಪೊಲೀಸ್ ಮಹಾನಿರ್ದೇಶಕ ಶ್ರೇಣಿಯ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದರು.







