ಅಮೆರಿಕ: ರ್ಯಾಪ್ ಗಾಯಕನ ಗುಂಡಿಕ್ಕಿ ಹತ್ಯೆ
ವಾಷಿಂಗ್ಟನ್, ಸೆ.13: ಅಮೆರಿಕದ ಲಾಸ್ ಏಂಜಲೀಸ್ ನಲ್ಲಿನ ರೆಸ್ಟಾರೆಂಟ್ ನಲ್ಲಿ ದರೋಡೆಕೋರರು ಖ್ಯಾತ ರ್ಯಾಪ್ ಸಂಗೀತಗಾರ ಮತ್ತು ಗಾಯಕ ಪಿಎನ್ಬಿ ರಾಕ್ ನನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ವರದಿಯಾಗಿದೆ.
ಪಿಎನ್ಬಿ ರಾಕ್ ಎಂದೇ ಜನಪ್ರಿಯವಾಗಿರುವ ರ್ಯಾಕಿಮ್ ಆಲೆನ್ ತನ್ನ ಸ್ನೇಹಿತೆಯ ಜತೆ ದಕ್ಷಿಣ ಲಾಸ್ಏಂಜಲೀಸ್ನ ರೆಸ್ಟಾರೆಂಟ್ಗೆ ಆಗಮಿಸಿದ್ದರು. ಆಗ ಅಲ್ಲಿಗೆ ಬಂದ ದರೋಡೆಕೋರನೊಬ್ಬ ರಾಕ್ ಹಣೆಗೆ ಬಂದೂಕವಿಟ್ಟು ಒಡವೆ ಮತ್ತು ಹಣ ನೀಡುವಂತೆ ಆಗ್ರಹಿಸಿದ. ಈ ಸಂದರ್ಭ ನಡೆದ ಘರ್ಷಣೆಯಲ್ಲಿ ರಾಕ್ ಗುಂಡೇಟಿನಿಂದ ಗಾಯಗೊಂಡು ಕುಸಿದುಬಿದ್ದರು. ರಾಕ್ ಅವರಲ್ಲಿದ್ದ ಒಡವೆ ಮತ್ತು ಹಣಕ್ಕಾಗಿ ಈ ದಾಳಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ತೀವ್ರ ಗಾಯಗೊಂಡಿದ್ದ ರಾಕ್ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಗುಂಡು ಹಾರಿಸಿದ ವ್ಯಕ್ತಿ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. `ಕ್ಯಾಚ್ ದೀಸ್ ವೈಬ್ಸ್', ಟ್ರ್ಯಾಪ್ ಸ್ಟಾರ್ ಟರ್ನ್ಸ್ ಪಾಪ್ಸ್ಟಾರ್' ಮುಂತಾದ ಆಲ್ಬಮ್ಗಳಿಂದ ಜನಪ್ರಿಯರಾಗಿದ್ದ ಪಿಎನ್ಬಿ ರಾಕ್ ಅವರ ಹತ್ಯೆಗೆ ವ್ಯಾಪಕ ಖಂಡನೆ ಮತ್ತು ಸಂತಾಪ ವ್ಯಕ್ತವಾಗಿದೆ.





