ಉಳ್ಳಾಲ ನಗರ ಸಭೆ; ರಚನೆ ಆಗದ ಸ್ಥಾಯಿ ಸಮಿತಿ: ಆಕ್ರೋಶಿತ ಸದಸ್ಯರಿಂದ ಪ್ರತಿಭಟನೆ

ಉಳ್ಳಾಲ: ನಗರ ಸಭೆಯಲ್ಲಿ ಆರು ತಿಂಗಳು ಕಳೆದರೂ ರಚನೆ ಆಗದ ಸ್ಥಾಯಿ ಸಮಿತಿ, ಅಕ್ರಮ ಡೋರ್ ನಂಬರ್ ನೀಡಿ ಅವ್ಯವಹಾರ, ನಗರ ಸಭೆ ಖಾತೆಗೆ ಜಮಾ ಆಗದ ಹಣ, ದಾರಿದೀಪ, ಕಸದ ವಾಹನ ಸಮಸ್ಯೆ ಬಗ್ಗೆ ಪರ ವಿರೋಧ ಚರ್ಚೆ ಉಳ್ಳಾಲ ನಗರ ಸಭೆಯ ಸಾಮಾನ್ಯ ಸಭೆಯಲ್ಲಿ ನಡೆಯಿತು.
ನಗರ ಸಭೆ ಅಧ್ಯಕ್ಷರಾದ ಚಿತ್ರ ಕಲಾ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಕೌನ್ಸಿಲರ್ ದಿನಕರ್ ಉಳ್ಳಾಲ, ಸ್ಥಾಯಿ ಸಮಿತಿ ಅಧ್ಯಕ್ಷರ ಅವಧಿ ಮುಗಿದು ಆರು ತಿಂಗಳು ಕಳೆದಿದೆ. ಮೂರು ತಿಂಗಳೊಳಗೆ ಅಧ್ಯಕ್ಷ ಆಯ್ಕೆ ಆಗಬೇಕಿತ್ತು. ಆರು ತಿಂಗಳು ಕಳೆದರೂ ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕ ಯಾಕೆ ಮಾಡಲಿಲ್ಲ ಎಂದು ಪ್ರಶ್ನಿಸಿ ಸಭೆಯನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಪೌರಾಯುಕ್ತೆ ವಿದ್ಯಾ ಮನೋಹರ್ ಕಾಳೆ ಅವರು ಮುಂದಿನ ತಿಂಗಳಲ್ಲಿ ಸ್ಥಾಯಿ ಸಮಿತಿ ರಚಿಸಲಾಗುವುದು ಎಂದು ಹೇಳಿದಾಗ ಸಭೆಯಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಯಿತು. ಈ ವೇಳೆ ಧ್ವನಿ ಗೂಡಿಸಿದ ಜೆಡಿಎಸ್ ಮತ್ತು ಎಸ್ ಡಿಪಿಐ ಸದಸ್ಯರು ಈವರೆಗೆ ಸ್ಥಾಯಿ ಸಮಿತಿ ಯಾಕೆ ಮಾಡಲಿಲ್ಲ ಎನ್ನುವುದಕ್ಕೆ ಅಧ್ಯಕ್ಷರು ಉತ್ತರಿಸಬೇಕು ಎಂದು ಪಟ್ಟು ಹಿಡಿದು ಅಧ್ಯಕ್ಷರ ಟೇಬಲ್ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಯಿತು. ಈ ವೇಳೆ ದಿನಕರ್ ಉಳ್ಳಾಲರವರು ಆಡಳಿತ ಪಕ್ಷಕ್ಕೆ ಬಹುಮತ ಇಲ್ಲ ಎಂದು ಗೊತ್ತಿದೆ. ಬಹುಮತ ಇದ್ದರೆ ಸಾಬೀತು ಮಾಡಿ ಎಂದು ಪಟ್ಟು ಹಿಡಿದಾಗ ಎಸ್ ಡಿಪಿಐ ಸದಸ್ಯರು ಜೊತೆಗೂಡಿ ಘೋಷಣೆ ಕೂಗಿದರು.
ಉಳ್ಳಾಲ ನಗರ ಸಭೆಗೆ ಬರುವ ತೆರಿಗೆ ಹಾಗೂ ಇನ್ನಿತರ ಹಣ ಖಾತೆಗೆ ಜಮಾ ಆಗುವುದಿಲ್ಲ.ಕಾರಣ ಕೇಳಿದರೆ ಬೇರೆ ಹೇಳುತ್ತಾರೆ. ಕಂಪ್ಯೂಟರ್ ನಲ್ಲಿ ಹಣದ ಲೆಕ್ಕ ಹ್ಯಾಕ್ ಆಗಿದೆ ಎಂದು ಉತ್ತರಿಸಿದ್ದೂ ಇದೆ. ಅಕ್ರಮ ಡೋರ್ ನಂಬರ್ , ಉದ್ದಿಮೆ ಪರವಾನಿಗೆ ನೀಡಲಾಗುತ್ತಿದೆ. 1000 ಡೋರ್ ನಂಬರ್ ಅಕ್ರಮ ಆಗಿ ನೀಡಿದ್ದು ರಿಜಿಸ್ಟರ್ ಬುಕ್ ನಲ್ಲಿ ಎಂಟ್ರಿ ಇದೆ. ಈಬಗ್ಗೆ ಹಿಂದಿನ ಸಭೆಯಲ್ಲಿ ಚರ್ಚೆ ಆದಾಗ ಆಗಿನ ಪೌರಾಯುಕ್ತರಾಗಿದ್ದ ರಾಯಪ್ಪ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದರು. ಆದರೆ ಈವರೆಗೆ ಉತ್ತರ ಹಾಗೂ ಈ ಸಮಸ್ಯೆಗೆ ಪರಿಹಾರ ಸಿಗಲಿಲ್ಲ ಎಂದು ಸದಸ್ಯ ಅಝೀಝ್ ಸಭೆಯಲ್ಲಿ ಆರೋಪಿಸಿದಾಗ ಸಭೆ ಮತ್ತೆ ಕೋಲಾಹಲದತ್ತ ಸಾಗಿತು.ಇದಕ್ಕೆ ಪೌರಾಯುಕ್ತೆ ಉತ್ತರಿಸಿದಾಗ ಒಪ್ಪದ ಸದಸ್ಯ ರು ಅಧ್ಯಕ್ಷ ರೇ ಉತ್ತರ ನೀಡಬೇಕು ಎಂದು ಪಟ್ಟು ಹಿಡಿದರು.
ಈ ವೇಳೆ ಅಧ್ಯಕ್ಷೆ ಚಿತ್ರ ಕಲಾ ಅವರು, ಈ ಆರೋಪ ಈ ಹಿಂದೆಯೂ ಬಂದಿತು. ನಡೆದಿದೆಯೋ ಇಲ್ಲವೋ ಎಂದು ಗೊತ್ತಿಲ್ಲ.ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಸೂಕ್ತ ತನಿಖೆ ನಡೆಸಲಾಗುವುದು ಎಂದು ಹೇಳಿದರು.
ಇದೇ ವಿಚಾರಕ್ಕೆ ಸಂಬಂಧಿಸಿ ಉಪಾಧ್ಯಕ್ಷ ಅಯ್ಯೂಬ್ ಮಂಚಿಲ ರವರು, ಈ ಆರೋಪ ವನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ನಡೆದಿದೆ ಎಂಬ ಆರೋಪ ಒಪ್ಪಲಾಗುವುದಿಲ್ಲ. ಸೂಕ್ತ ತನಿಖೆ ನಡೆಸಿದರೆ ಗೊತ್ತಾಗಬಹುದು ಆ ಕೆಲಸ ಮಾಡುತ್ತೇವೆ ಎಂದರು.
ಈ ಸಂದರ್ಭ ಕೌನ್ಸಿಲರ್ ಮುಹಮ್ಮದ್ ಮುಖಚೇರಿ, ಅವ್ಯವಹಾರ, ಅಕ್ರಮ ಆಗಿದೆ ಎಂದು ಆರೋಪ ಕೇಳಿ ಬರುತ್ತಾ ಇದೆ. ಇದನ್ನು ಕೇಳಿ ಮೌನ ಆಗುವುದು ಬೇಡ. ಇದು ಎಲ್ಲಿ ಆಗಿದೆ, ಯಾವಾಗ ಆಗಿದೆ, ಹೇಗೆ ಆಗಿದೆ ಎಂದು ತನಿಖೆ ನಡೆಸಿ ಸಭೆಗೆ ಉತ್ತರ ನೀಡಬೇಕು ಎಂದು ಸಲಹೆ ನೀಡಿದರು.
ಕಸದ ವಾಹನ ಸಮರ್ಪಕವಾಗಿ ಕಾರ್ಯ ನಿರ್ವಹಣೆ ಆಗದ ಬಗ್ಗೆ ಸಭೆಯಲ್ಲಿ ಕೌನ್ಸಿಲರ್ ಖಲೀಲ್ ಪ್ರಶ್ನಿಸಿ ಆರೋಗ್ಯ ಅಧಿಕಾರಿ ಯನ್ನು ತರಾಟೆಗೆ ತೆಗೆದುಕೊಂಡರು.ಇದಕ್ಕೆ ದ್ವನಿ ಗೂಡಿಸಿದ ಕೆಲವು ಸದಸ್ಯರು ಸಕಾರಣ ನೀಡಬೇಕು ಎಂದು ಆಗ್ರಹಿಸಿದರು. ಈ ವೇಳೆ ಆರೋಗ್ಯ ಅಧಿಕಾರಿ ರವಿಕೃಷ್ಣಾ ಮಾತನಾಡಿ ಎರಡು ವಾಹನ ಗೇರೇಜಿನಲ್ಲಿ ಇದೆ. ಇದರಿಂದ ಸಮಸ್ಯೆ ಆಗಿದೆ. ವಾಹನ ದುರಸ್ತಿ ಆಗಿ ಎರಡು ದಿನಗಳಲ್ಲಿ ಬರಬಹುದು ಎಂದರು.
ಈ ವೇಳೆ ಮುಹಮ್ಮದ್ ಮುಖಚೇರಿ ಅವರು, ಕೆಲವು ಬಾರಿ ಚಾಲಕರೆ ವಾಹನ ದುರಸ್ತಿ ಮಾಡಿ ತಂದದ್ದು ಇದೆ. ಆ ಲೆಕ್ಕ ಇಲ್ಲಿಗೆ ಬರುವುದಿಲ್ಲ. ಕೊಟ್ಟ ಲೆಕ್ಕ ಅಲ್ಲಿಯೇ ಇರುತ್ತದೆ. ಆ ಲೆಕ್ಕ ಕೂಡಾ ಮುಗಿಸಬೇಕು ಎಂದರು.
