ಸಿಪಿಆರ್, ಆಕ್ಸ್‌ಫಾಮ್ ಮೇಲೆ ಐಟಿ ದಾಳಿ ಆತಂಕಕಾರಿ ಮತ್ತು ಆಧಾರರಹಿತ: 600ಕ್ಕೂ ಅಧಿಕ ನಾಗರಿಕರ ಕಳವಳ

ಹೊಸದಿಲ್ಲಿ,ಸೆ.13: ಕಳೆದ ವಾರ ಇಂಡಿಪೆಂಡೆಂಟ್ ಆ್ಯಂಡ್ ಪಬ್ಲಿಕ್ ಸ್ಪಿರಿಟೆಡ್ ಮೀಡಿಯಾ ಫೌಂಡೇಷನ್(ಐಪಿಎಸ್ಎಂಎಫ್), ಎನ್ಜಿಒ ಆಕ್ಸ್ಫಾಮ್ ಇಂಡಿಯಾ ಮತ್ತು ಚಿಂತನ ಚಿಲುಮೆ ಸೆಂಟರ್ ಫಾರ್ ಪಾಲಿಸಿ ರೀಸರ್ಚ್ (ಸಿಪಿಆರ್)ನ ಕಚೇರಿಗಳ ಮೇಲೆ ನಡೆದಿದ್ದ ಆದಾಯ ತೆರಿಗೆ ದಾಳಿಗಳು ಆತಂಕಕಾರಿ ಮತ್ತು ಆಧಾರರಹಿತವಾಗಿದ್ದವು ಎಂದು ಮಾನವ ಹಕ್ಕುಗಳ ಕಾರ್ಯಕರ್ತರು ಸೇರಿದಂತೆ 600ಕ್ಕೂ ಅಧಿಕ ನಾಗರಿಕರು ಮಂಗಳವಾರ ಬಣ್ಣಿಸಿದ್ದಾರೆ.
‘ಸರಕಾರವು ಸದ್ಯೋಭವಿಷ್ಯದಲ್ಲಿ ನಾವು,ನಮ್ಮಲ್ಲಿ ಪ್ರತಿಯೊಬ್ಬರೂ ಸರಕಾರದ ಗುರಿಯಾಗಲಿದ್ದಾರೆ. ಇದು ಕೇವಲ ನಾಗರಿಕ ಸಮಾಜ ಅಥವಾ ನಾಗರಿಕ ಸೇವಕರು ಅಥವಾ ಇತರ ಯಾವುದೇ ಗುಂಪಿಗೆ ಸೀಮಿತವಲ್ಲ ’ ಎಂದು ಈ ನಾಗರಿಕರು ಜಂಟಿ ಹೇಳಿಕೆಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಐಪಿಎಸ್ಎಂಎಫ್ ಮತ್ತು ಆಕ್ಸ್ಫಾಮ್ ಇಂಡಿಯಾ ಹಾಗೂ ದಿಲ್ಲಿಯ ಸಿಪಿಆರ್ ಕಚೇರಿಗಳ ಮೇಲೆ ಸೆ.7ರಂದು ಆದಾಯ ತೆರಿಗೆ ಇಲಾಖೆಯು ದಾಳಿಗಳನ್ನು ನಡೆಸಿತ್ತು.
ಮಾನವ ಹಕ್ಕುಗಳ ಕಾರ್ಯಕರ್ತರಾದ ಅಂಜಲಿ ಭಾರದ್ವಾಜ್, ಸೆಡ್ರಿಕ್ ಪ್ರಕಾಶ್, ದೀಪ್ತಿ ಸಿರ್ಲಾ ಮತ್ತು ಜಾನ್ ದಯಾಳ್ ಹಾಗೂ ನ್ಯಾಷನಲ್ ಅಲೈನ್ಸ್ ಆಫ್ ಪೀಪಲ್ಸ್ ಮೂವ್ಮೆಂಟ್ಸ್, ಮಜ್ದೂರ್ ಕಿಸಾನ್ ಶಕ್ತಿ ಸಂಘಟನ್ ಮತ್ತು ವೇರ್ ಆರ್ ದಿ ವಿಮೆನ್ನಂತಹ ಸಂಘಟನೆಗಳ ಪ್ರತಿನಿಧಿಗಳು ಹೇಳಿಕೆಗೆ ಸಹಿ ಹಾಕಿದವರಲ್ಲಿ ಸೇರಿದ್ದಾರೆ.
ದಾಳಿಗೊಳಗಾದ ಸಂಘಟನೆಗಳು ಯಾವುದೇ ಸರಕಾರದ ವಿರುದ್ಧವಾಗಿಲ್ಲ ಎಂದೂ ಈ ನಾಗರಿಕರು ಬೆಟ್ಟು ಮಾಡಿದ್ದಾರೆ.
‘ಅವು ದೇಶಕ್ಕಾಗಿವೆ. ನಮ್ಮಂತೆ,ನಮ್ಮೆಲ್ಲರಂತೆ. ಇದನ್ನು ನಮಗೆ ಮತ್ತು ನಮ್ಮ ಸರಕಾರಕ್ಕೆ ನೆನಪಿಸಿದಷ್ಟೂ ಅವರು ಇಲ್ಲಿ ತಮಗಾಗಿ ಅಲ್ಲ,ನಮಗಾಗಿ,ನಮ್ಮೆಲ್ಲರಿಗಾಗಿ ಇದ್ದೇವೆ ಎನ್ನುವುದನ್ನು ಹೆಚ್ಚು ನೆನಪಿಸಿಕೊಳ್ಳುತ್ತಾರೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.







