ಇಲಾಖೆಯ ವೆಬ್‍ಸೈಟ್‍ಗೆ ಭೇಟಿ ನೀಡಿದರೆ ಮಾಹಿತಿ ಲಭ್ಯವಿದೆ: ಸಿದ್ದರಾಮಯ್ಯಗೆ ಸಚಿವ ಬಿ.ಸಿ. ನಾಗೇಶ್ ತಿರುಗೇಟು

ಬೆಂಗಳೂರು, ಸೆ.13: ಕೋವಿಡ್ ಕಾಲದಲ್ಲಿ ಖಾಸಗಿ ಶಾಲೆಗಳಲ್ಲಿ ಕಾರ್ಯ ನಿರ್ವಹಿಸಿದ್ದ ಎಲ್ಲ ಅರ್ಹ ಶಿಕ್ಷಕ, ಸಿಬ್ಬಂದಿಗೆ ನೇರ ನಗದು ವರ್ಗಾವಣೆ ಮೂಲಕ 75 ಕೋಟಿ ರೂ.ಗಳನ್ನು ಕೋವಿಡ್ ಪರಿಹಾರ ರೂಪದಲ್ಲಿ ಪಾವತಿಸಲಾಗಿದೆ. ಪಾರದರ್ಶಕ ಪಾವತಿ ವ್ಯವಸ್ಥೆ ಎಂದರೆ ನಿಮಗೆ ಅಲರ್ಜಿಯೇ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ಮಂಗಳವಾರ ಸರಣಿ ಟ್ವಿಟ್ ಮಾಡಿರುವ ಅವರು, ಪಿಯು ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ 2013ರಿಂದ 2017ರವರೆಗೆ ಮಾಸಿಕ 7,000ರೂ. ಹಾಗೂ 2017ರಿಂದ 2021ರವರೆಗೆ 9,000ರೂ. ಗೌರವ ಸಂಭಾವನೆ ನೀಡಲಾಗುತ್ತಿತ್ತು. ನಮ್ಮ ಸರಕಾರ ಗೌರವ ಸಂಭಾವನೆಯನ್ನು ಪರಿಷ್ಕರಿಸಿ, ಈ ಸಾಲಿನಲ್ಲಿ 12,000ರೂ.ಗೆ ಹೆಚ್ಚಿಸಿದೆ. ಮಾಜಿ ಸಿಎಂ, ಹಣಕಾಸು ಸಚಿವರಾಗಿದ್ದ ತಮಗೆ ಲೆಕ್ಕ ಬರುತ್ತದೆ ಎಂದು ಭಾವಿಸಿದ್ದೇನೆ ಎಂದು ತಿಳಿಸಿದ್ದಾರೆ.
ಆರ್‍ಟಿಇ ಶುಲ್ಕ ಮರುಪಾವತಿ ವ್ಯವಸ್ಥೆ ಆನ್‍ಲೈನ್ ಮೂಲಕ ಪಾರದರ್ಶಕವಾಗಿ ನಡೆಯುತ್ತಿದೆ. 2021-22 ಸಾಲಿನ ಎರಡು ತ್ರೈಮಾಸಿಕ ಅವಧಿಗೆ ಮೀಸಲಾದ ಮೊತ್ತದಲ್ಲಿ ಶಾಲೆಗಳು ಸಲ್ಲಿಸಿದ ದಾಖಲೆಗಳ ಆಧಾರದ ಮೇಲೆ 291 ಕೋಟಿ ರೂ. ಪಾವತಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಶಿಕ್ಷಣ ಇಲಾಖೆಯ ವೆಬ್‍ಸೈಟ್‍ಗೆ ಭೇಟಿ ನೀಡಿ. ಮಾಹಿತಿ ಲಭ್ಯವಿದೆ ಎಂದು ತಿಳಿಸಿದ್ದಾರೆ.





