ಪೊಲೀಸರಿಗೆ ಒತ್ತಡ ನಿರ್ವಹಣೆ ತರಬೇತಿ ಕಾರ್ಯಾಗಾರಕ್ಕೆ ಚಾಲನೆ

ಮಂಗಳೂರು, ಸೆ.14: ನಗರ ಪೊಲೀಸ್ ಕಮಿಷನರೇಟ್ ವತಿಯಿಂದ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಭಾಗಿತ್ವದಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಒತ್ತಡ ನಿರ್ವಹಣೆ ತರಬೇತಿ ಕಾರ್ಯಾಗಾರಕ್ಕೆ ಇಂದು ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಕಳೆದ ಕೆಲವು ವರ್ಷಗಳಿಂದೀಚೆಗೆ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಸಾಕಷ್ಟು ಒತ್ತಡಗಳ ನಡುವೆ ಕಾರ್ಯ ನಿರ್ವಹಿಸುವ ಪೊಲೀಸರು ಅದರಲ್ಲೂ ಮುಖ್ಯವಾಗಿ ಮಹಿಳಾ ಸಿಬ್ಬಂದಿಗೆ ತಮ್ಮ ಕರ್ತವ್ಯದಲ್ಲಿ ಮತ್ತಷ್ಟು ದಕ್ಷತೆ, ಮಾನವೀಯ ಮೌಲ್ಯಗಳ ಬಗ್ಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಈ ಕಾರ್ಯಾಗಾರ ಆಯೋಜಿಸಿರುವುದಾಗಿ ಹೇಳಿದರು.
ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ತರಬೇತಿ ಕಾರ್ಯಾಗಾರದ ಮೂಲಕ ಪೊಲೀಸರಿಗೆ ಅತೀ ಅಗತ್ಯವಾಗಿರುವ ದೈಹಿಕ ಕ್ಷಮತೆ ಜತೆಗೆ ಮಾನಸಿಕ ಒತ್ತಡವನ್ನು ನಿವಾರಿಸಿ ಸಮಾಜದಲ್ಲಿ ಸಾರ್ವಜನಿಕ ಸೇವೆಯಲ್ಲಿ ಇನ್ನಷ್ಟು ಉತ್ಕೃಷ್ಟತೆಯನ್ನು ಸಾಧಿಸಲು ಈ ಕಾರ್ಯಾಗಾರ ಸಹಕಾರಿಯಾಗಲಿ ಎಂದರು.
ಆರ್ಟ್ ಆಫ್ ಲಿವಿಂಗ್‌ನ ತರಬೇತುದಾರ ವಿಜಯ ಕುಮಾರ್ ಮಾತನಾಡಿ, ಸಮಾಜದಲ್ಲಿ ಪರಿವರ್ತನೆಗೆ ಪ್ರತಿ ವ್ಯಕ್ತಿಯ ಸಹಕಾರ ಅಗತ್ಯ. ಈ ನಿಟ್ಟಿನಲ್ಲಿ ಸಮಾಜದ ರಕ್ಷಣೆಯ ಜವಾಬ್ದಾರಿ ಹೊತ್ತಿರುವ ಪೊಲೀಸರು ಮಾನಸಿಕವಾಗಿ ಒತ್ತಡರಹಿತರಾಗಿದ್ದರೆ ಉತ್ತಮ ಫಲಿತಾಂಶ ನಿರೀಕ್ಷಿಸಲು ಸಾಧ್ಯ ಎಂದರು.
ಆರ್ಟ್ ಆಫ್ ಲಿವಿಂಗ್‌ನ ಇನ್ನೋರ್ವ ತರಬೇತುದಾರ ರಶ್ಮಿ ಅನಿಲ್ ಕುಮಾರ್, ಡಿಸಿಪಿಗಳಾದ ಅಂಶುಕುಮಾರ್, ದಿನೇಶ್ ಕುಮಾರ್ ಉಪಸ್ಥಿತರಿದ್ದರು.
ಇನ್ ಸ್ಪೆಕ್ಟರ್ ಭಾರತಿ ಸ್ವಾಗತಿಸಿದರು. ಎಸಿಪಿ ಪಿ.ಎ. ಹೆಗಡೆ ವಂದಿಸಿದರು.