ಉತ್ಪನ್ನಗಳಿಗೆ ಬ್ರಾಂಡಿಂಗ್ ಆದಾಗ ಬೇಡಿಕೆ ಹೆಚ್ಚಳ: ಡಾ.ಕುಮಾರ
ಮಂಗಳೂರು, ಸೆ.14: ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರು ತಯಾರಿಸುವ ಉತ್ಪನ್ನಗಳು ಗುಣಮಟ್ಟ ಚೆನ್ನಾಗಿವೆ. ಇಂತಹ ಉತ್ಪನ್ನಗಳಿಗೆ ಬ್ರ್ಯಾಂಡಿಂಗ್ ಆದಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಳವಾಗುತ್ತದೆ ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ ಹೇಳಿದ್ದಾರೆ.
ಬುಧವಾರ ಜಿಪಂ ಸಭಾಂಗಣದಲ್ಲಿ ಕೌಶಲಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಸಂಜೀವಿನಿ- ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಸಹಯೋಗದಲ್ಲಿ ಸಂಜೀವಿನಿ ಸ್ವಸಹಾಯ ಗುಂಪಿನ ಸದಸ್ಯರಿಗೆ ಎಫ್ ಎಸ್‌ಎಸ್‌ಎಐ - ಜಿಎಸ್ ಟಿ ಐಎನ್, ಮುದ್ರಾ ಮತ್ತು ಪಿಎಂಎಫ್‌ಎಂಇ ಕುರಿತ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಯಾವುದೇ ಆಹಾರ ಉತ್ಪನ್ನಗಳನ್ನು ತಯಾರಿಸುವರು ಗುಣಮಟ್ಟಕ್ಕಾಗಿ ಎಫ್‌ಎಸ್‌ಎಸ್‌ಎಐ ಪ್ರಮಾಣ ಪತ್ರ ಪಡೆಯುವುದು ಅಗತ್ಯ. ಗುಣಮಟ್ಟ ಪ್ರಮಾಣ ಪತ್ರವನ್ನು ಪಡೆಯುವಲ್ಲಿಯೂ ಇಲಾಖೆ ಮೂಲಕ ನೆರವು ನೀಡಲಾಗುತ್ತಿದೆ. ಆಹಾರ ಉತ್ಪನ್ನಗಳ ಕುರಿತು ಸಂತೆ ಮಾರುಕಟ್ಟೆ ಪೋರ್ಟಲ್ ನಲ್ಲಿ ಡಿಸ್‌ಪ್ಲೇ ಮಾಡುವ ಮೂಲಕ ಪ್ರಚಾರದ ವ್ಯವಸ್ಥೆಯನ್ನೂ ಒದಗಿಸಲಾಗಿದೆ. ದೊಡ್ಡ ಮಟ್ಟದಲ್ಲಿ ಘಟಕ ಆರಂಭಿಸುವರಿಗೆ ಶೇ.50ರ ಸಬ್ಸಿಡಿಯೂ ದೊರೆಯಲಿದೆ ಎಂದವರು ಹೇಳಿದರು.
ಜಿಲ್ಲೆಯಲ್ಲಿ 5,800ಕ್ಕೂ ಅಧಿಕ ಸ್ವ ಸಹಾಯ ಗುಂಪುಗಳಿದ್ದು, 68 ಸಾವಿರಕ್ಕೂ ಅಧಿಕ ಕ್ರಿಯಾಶೀಲ ಮಹಿಳಾ ಸದಸ್ಯರಿದ್ದಾರೆ. ಇವರೆಲ್ಲ ಸಂಜೀವಿನಿ ಒಕ್ಕೂಟದ ವ್ಯಾಪ್ತಿಗೊಳಪಡುತ್ತಾರೆ. ಅವರವರ ಚಿಂತನೆಗಳ ಮೂಲಕ ಸ್ವ ಉದ್ಯೋಗಕ್ಕೆ ದಾರಿ ಕಂಡುಕೊಂಡರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯ ಎಂದು ಡಾ.ಕುಮಾರ ಹೇಳಿದರು.
ಗುಣಮಟ್ಟಕ್ಕಾಗಿ ನೋಂದಣಿ ಮಾಡಿಸಿಕೊಂಡವರಿಗೆ ಸಿಇಒ ಎಫ್‌ಎಸ್‌ಎಸ್‌ಎಐ ಪ್ರಮಾಣ ಪತ್ರವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಪಂ ಯೋಜನಾ ನಿರ್ದೇಶಕ ಎಚ್.ಆರ್.ನಾಯಕ್, ಕೃಷಿಯೇತರ ಜೀವನೋಪಾಯ ಚಟುವಟಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈಗಾಗಲೇ ಕಿರು ಆಹಾರ ಉದ್ದಿಮೆಗಳನ್ನು ಗುರುತಿಸಿ 40 ಮಹಿಳೆಯರಿಗೆ ಎಫ್‌ಎಸ್‌ಎಸ್‌ಎಐ ಪ್ರಮಾಣ ಪತ್ರ ಒದಗಿಸಲಾಗಿದೆ ಎಂದರು.
ಸಂಪನ್ಮೂಲ ವ್ಯಕಿತಿಯಾಗಿ ಯುಎನ್ ಡಿಪಿ ಕಾರ್ಯಕ್ರಮ ಪ್ರಬಂಧಕ ಉಮೇಶ್ ಉಪಸ್ಥಿತರಿದ್ದರು.
ಸಂಪನ್ಮೂಲ ವಯಕ್ತಿಗಳಾಗಿ ಡಾ.ಫೈಝಲ್ ಮತ್ತು ಲತೇಶ್ ವಿವಿಧ ವಿಚಾರಗಳ ಕುರಿತಂತೆ ಮಾಹಿತಿ ನೀಡಿದರು.
ಸಂಜೀವಿನಿ ಒಕ್ಕೂಟ ಜಿಲ್ಲಾ ವ್ಯವಸ್ಥಾಪಕ ಹರಿಪ್ರಸಾದ್ ವಂದಿಸಿದರು.