ಬಿಜೆಪಿಯಿಂದ ಬ್ರಹ್ಮಶ್ರೀ ನಾರಾಯಣಗುರುವಿಗೆ ಅವಮಾನವಾಗಿಲ್ಲ, ಟಿಕೆಟ್‌ಗಾಗಿ ರಮಾನಾಥ ರೈ ಆರೋಪ: ಹರಿಕೃಷ್ಣ ಬಂಟ್ವಾಳ

ಮಂಗಳೂರು, ಸೆ.14: 2023ರ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದಲ್ಲಿ ಟಿಕೆಟ್ ಪಡೆದು ಗೆಲ್ಲಬೇಕು ಎಂಬ ಉದ್ದೇಶದಿಂದ ಮಾಜಿ ಸಚಿವ ರಮಾನಾಥ ರೈ ಬಿಜೆಪಿ ಪದೇಪದೇ ನಾರಾಯಣಗುರು ಅವರಿಗೆ ಅವಮಾನ ಮಾಡುತ್ತಿದೆ ಎಂಬ ಹೇಳಿಕೆ ನೀಡಿದ್ದಾರೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹರಿಕೃಷ್ಣ ಬಂಟ್ವಾಳ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾಯಣಗುರು ಅವರಿಗೆ ಬಿಜೆಪಿ ಯಾವತ್ತೂ ಅವಮಾನ ಮಾಡಿಲ್ಲ, ಮುಂದೆ ಮಾಡುವುದೂ ಇಲ್ಲ ಎಂದರು.
ಈ ಬಾರಿಯ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಏಕೆ ನಡೆಸಲಾಯಿತು ಎಂಬ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್‌ಕುಮಾರ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಮುಂದಕ್ಕೆ ಈ ಕಾರ್ಯಕ್ರಮ ಉಡುಪಿ, ಶಿವಮೊಗ್ಗ ಸಹಿತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ನಡೆಯಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಗುರು ಜಯಂತಿಯ ಮುನ್ನಾದಿನ ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲು, ಬಿಜೆಪಿ ಪ್ರಮುಖರು ಕುದ್ರೋಳಿ ಶ್ರೀ ಗೋಕರ್ಣನಾಥ ಹಾಗೂ ನಾರಾಯಣ ಗುರುಗಳಿಗೆ ವಿಶೇಷ ಪೂಜೆ ಸಲ್ಲಿಸಿದ್ದರು.
ಗುರು ಜಯಂತಿಯಂದು ಸಚಿವ ಸುನೀಲ್‌ಕುಮಾರ್, ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ ಸಹಿತ ಬಿಜೆಪಿ ಪ್ರಮುಖರು ಕುದ್ರೋಳಿ ದೇವಸ್ಥಾನದಲ್ಲಿ ಗುರುಗಳಿಗೆ ವಿಶೇಷ ಪೂಜೆ ಸಲ್ಲಿಸಿ, ನಾರಾಯಣಗುರುಗಳ ಸ್ತಬ್ದಚಿತ್ರಕ್ಕೆ ನಮಿಸಿ, ಮೆರವಣಿಗೆ ಆರಂಭಿಸಲಾಗಿತ್ತು. ಇದೇ ಪ್ರಥಮ ಬಾರಿಗೆ ಗುರು ಜಯಂತಿ ಕಾರ್ಯಕ್ರಮ ಮಂಗಳೂರಿನಲ್ಲಿ ವೈಭವದಿಂದ ನಡೆದಿದೆ. ಈ ಹಿಂದೆ ಅಧಿಕಾರಿಗಳು ಕಾಟಾಚಾರಕ್ಕೆ ಈ ಕಾರ್ಯಕ್ರಮ ನಡೆಸುತ್ತಿದ್ದರು ಎಂದು ಹೇಳಿದರು.
ಗುರು ಜಯಂತಿಯಂದು ದೊಡ್ಡಬಳ್ಳಾಪುರದಲ್ಲಿ ನಡೆದ ಜನೋತ್ಸವದಲ್ಲಿ ಭಾಷಣ ಆರಂಭಿಸುವ ಮುನ್ನ ನಳಿನ್‌ಕುಮಾರ್ ಕಟೀಲು ನಾರಾಯಣಗುರುಗಳ ಸ್ಮರಣೆ ಮಾಡಿದ್ದಾರೆ. ನಾರಾಯಣಗುರುಗಳು ಯಾವುದೇ ಜಾತಿಗೆ ಸೇರಿದವರಲ್ಲ. ಅವರು ಮಾನವ ಜಾತಿಗೆ ಸೇರಿದವರು. ಅವರನ್ನು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ ಎಂದರು.
ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣಗುರುಗಳ ಸ್ತಬ್ಧಚಿತ್ರ ವಿಚಾರದಲ್ಲಿ ಕಾಂಗ್ರೆಸ್ ವಿನಾಕಾರಣ ವಿವಾದ ಸೃಷ್ಟಿಸಿತ್ತು. ನಾರಾಯಣಗುರು ಅವರ ಬದಲಿಗೆ ಶಂಕರಾಚಾರ್ಯರ ಸ್ತಬ್ಧಚಿತ್ರ ಹಾಕುವಂತೆ ಕೇಂದ್ರ ಸರಕಾರ ಸೂಚಿಸಿತ್ತು ಎಂಬುದಕ್ಕೆ ಯಾವುದೇ ದಾಖಲೆ ಇಲ್ಲ. ಈ ಬಗ್ಗೆ ಬಿ.ಜನಾರ್ದನ ಪೂಜಾರಿಯವರಿಗೂ ನಾನು ಮಾಹಿತಿ ನೀಡಿದ್ದೆ. ಈ ಹಿನ್ನೆಲೆಯಲ್ಲಿ ಪೂಜಾರಿ ಈ ವಿಚಾರದಲ್ಲಿ ನಡೆದ ಪ್ರತಿಭಟನೆಯಲ್ಲಿ ಯಾವುದೇ ಮಾತು ಆಡಿಲ್ಲ. ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣಗುರು ಹೆಸರು ಇರಿಸಲು ಮನಪಾ ಮುಂದಾದಾಗ ರಮಾನಾಥ ರೈ, ಜೆ.ಆರ್.ಲೋಬೊ ವಿರೋಧಿಸಿದ್ದರು ಎಂದು ಹರಿಕೃಷ್ಣ ಬಂಟ್ವಾಳ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮನಪಾ ನಾಮನಿರ್ದೇಶಿತ ಸದಸ್ಯ ಭಾಸ್ಕರಚಂದ್ರ ಶೆಟ್ಟಿ, ಬಿಜೆಪಿ ಜಿಲ್ಲಾ ಮಾಧ್ಯಮ ಸಂಯೋಜಕ ಸಂದೇಶ್ ಶೆಟ್ಟಿ ಉಪಸ್ಥಿತರಿದ್ದರು.
ರಮಾನಾಥ ರೈ ದೀರ್ಘಕಾಲದಿಂದ ರಾಜಕೀಯದಲ್ಲಿದ್ದು ಅಧಿಕಾರ ಅನುಭವಿಸಿದ್ದಾರೆ. ಅವರು ನೈಜ ಕಾಂಗ್ರೆಸಿಗ ಆಗಿದ್ದರೆ ಈ ಬಾರಿ ಬಂಟ್ವಾಳದಲ್ಲಿ ಕಾಂಗ್ರೆಸ್‌ನಿಂದ ಬೇರೆಯವರಿಗೆ ಸ್ಪರ್ಧಿಸಲು ಅವಕಾಶ ನೀಡಲಿ. ಒಂದುವೇಳೆ ಸ್ಪರ್ಧಿಸಿದರೂ ರಮಾನಾಥ ರೈಯವರ ಸೋಲು ನಿಶ್ಚಿತ. ಕಳೆದ ಬಾರಿಗಿಂತ ಅಧಿಕ ಮತಗಳಿಂದ ಬಿಜೆಪಿಯಿಂದ ರಾಜೇಶ್ ನಾಯ್ಕ್ ಗೆಲ್ಲುತ್ತಾರೆ ಎಂದು ಹರಿಕೃಷ್ಣ ಬಂಟ್ವಾಳ ಹೇಳಿದ್ದಾರೆ.