ಧೋನಿ ನನಗೆ ಭಾರತಕ್ಕಾಗಿ ಆಡುವ ಅವಕಾಶ ನೀಡಿದ್ದರೆ ವೃತ್ತಿಜೀವನ ಭಿನ್ನವಾಗಿರುತ್ತಿತ್ತು: ಈಶ್ವರ್ ಪಾಂಡೆ

Photo:twitter
ಹೊಸದಿಲ್ಲಿ: "ಎಂ.ಎಸ್. ಧೋನಿ ನನಗೆ ಭಾರತಕ್ಕಾಗಿ ಆಡುವ ಅವಕಾಶ ನೀಡಿದ್ದರೆ ನನ್ನ ವೃತ್ತಿಜೀವನ ವಿಭಿನ್ನವಾಗಿರುತ್ತಿತ್ತು. ಆ ಸಮಯದಲ್ಲಿ ನಾನು 23-24 ವರ್ಷ ವಯಸ್ಸಿನವನಾಗಿದ್ದೆ. ನನ್ನ ಫಿಟ್ನೆಸ್ ಕೂಡ ಉತ್ತಮವಾಗಿತ್ತು. ನಾನು ಟೀಮ್ ಇಂಡಿಯಾದಲ್ಲಿ ಪ್ರದರ್ಶನ ನೀಡಿದ್ದರೆ ನನ್ನ ವೃತ್ತಿಬದುಕು ವಿಭಿನ್ನವಾಗಿರುತ್ತಿತ್ತು'' ಎಂದು ವೇಗದ ಬೌಲರ್ ಈಶ್ವರ್ ಪಾಂಡೆ(fast bowler Ishwar Pandey) ‘ದೈನಿಕ್ ಭಾಸ್ಕರ್’ಗೆ ತಿಳಿಸಿದ್ದಾರೆ.
ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದ ಪಾಂಡೆ ಮಂಗಳವಾರ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ತನ್ನ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿದರು.
ಭಾರತ ಕ್ರಿಕೆಟ್ ತಂಡದಲ್ಲಿ ಆಡಬೇಕೆಂಬ ಪಾಂಡ್ಯ ಅವರ ಕನಸು ನನಸಾಗಲಿಲ್ಲ. ಅವರು 75 ಪ್ರಥಮ ದರ್ಜೆ ಪಂದ್ಯಗಳಲ್ಲಿ 263 ವಿಕೆಟ್ಗಳನ್ನು ಕಬಳಿಸಿದ್ದರು. ಮಧ್ಯಪ್ರದೇಶ ರಣಜಿ ತಂಡದ ಸ್ಟಾರ್ ಬೌಲರ್ ಆಗಿದ್ದ ಪಾಂಡೆ ದೇಶೀಯ ಕ್ರಿಕೆಟ್ನಲ್ಲಿ ಕೇಂದ್ರ ವಲಯದಲ್ಲಿದ್ದರು.
ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ರೈಸಿಂಗ್ ಪುಣೆ ಸೂಪರ್ಜೈಂಟ್ಸ್ ಹಾಗೂ ಪುಣೆ ವಾರಿಯರ್ಸ್ ಪರ ಆಡಿದ್ದ ಈಶ್ವರ್ ಪಾಂಡೆ 25 ಪಂದ್ಯಗಳಲ್ಲಿ ಒಟ್ಟು 18 ವಿಕೆಟ್ಗಳನ್ನು ಉರುಳಿಸಿದ್ದರು.
‘‘ನಾನು ಇಂದು ಭಾರವಾದ ಹೃದಯದಿಂದ ಅಂತರ್ರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್ನಿಂದ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ. ನಾನು 2007ರಲ್ಲಿ ನನ್ನ ಅಮೋಘ ಪಯಣವನ್ನು ಆರಂಭಿಸಿದ್ದೆ. ಇಂದಿನ ತನಕವೂ ಮೈದಾನದ ಹೊರಗೆ ಹಾಗೂ ಒಳಗೆ ಕಳೆದಿರುವ ಪ್ರತಿ ಕ್ಷಣವನ್ನು ಆನಂದಿಸಿರುವೆ. ಆರಂಭಿಕ ದಿನಗಳಿಂದ ಇಲ್ಲಿಯ ತನಕ ನನ್ನ ನಿರ್ವಹಣೆ ತೃಪ್ತಿ ತಂದಿದೆ. ನನ್ನ ಜೀವನದಲ್ಲಿ ಸಾಧನೆಯ ಬಗ್ಗೆ ಹೆಮ್ಮೆ ಇದೆ. ಮಧ್ಯಪ್ರದೇಶದ ಸಣ್ಣ ಪಟ್ಟಣ ರೇವಾದಿಂದ ಭಾರತೀಯ ಕ್ರಿಕೆಟ್ ತಂಡದ ತನಕದ ನನ್ನ ಪಯಣ ಯಾವಾಗಲೂ ಸ್ಮರಣೀಯ'' ಎಂದು ಇನ್ಸ್ಟಾಗ್ರಾಮ್ನಲ್ಲಿ ಪಾಂಡೆ ಬರೆದಿದ್ದಾರೆ.