ವಿಧಾನಸಭೆಯಲ್ಲಿ 2022ನೇ ಸಾಲಿನ ಭೂ ಕಬಳಿಕೆ ನಿಷೇಧ(ತಿದ್ದುಪಡಿ) ವಿಧೇಯಕ ಮಂಡನೆ

ಬೆಂಗಳೂರು, ಸೆ. 14: ‘ಸರಕಾರಿ ಭೂ ಒಡೆತನಕ್ಕೆ ಸಂಬಂಧಿಸಿದ ವಿವಾದಗಳನ್ನು ಇತ್ಯರ್ಥಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ‘2022ನೇ ಸಾಲಿನ ಭೂ ಕಬಳಿಕೆ ನಿಷೇಧ(ತಿದ್ದುಪಡಿ) ವಿಧೇಯಕ’ವನ್ನು ಮಂಡಿಸಿದೆ.
ಬುಧವಾರ ವಿಧಾನಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಜೆ.ಸಿ.ಮಾಧುಸ್ವಾಮಿ ವಿಧೇಯಕವನ್ನು ಮಂಡಿಸಿದರು. ‘ನಗರ ಪಾಲಿಕೆ ಪರಿಮಿತಿ ಒಳಗಿನ ಸರಕಾರ, ವಕ್ಫ್ ಅಥವಾ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳು, ಸ್ಥಳೀಯ ಪ್ರಾಧಿಕಾರಗಳು, ಸರಕಾರದ ಒಡೆತನ, ನಿಯಂತ್ರಣ, ವ್ಯವಸ್ಥಾಪನೆಗೆ ಒಳಪಟ್ಟ ಭೂಮಿಯ ವಿವಾದಗಳು ತಕ್ಷಣದಿಂದ ಕೊನೆಗೊಳಿಸುವುದಕ್ಕಾಗಿ ಈ ವಿಧೇಯಕ ಜಾರಿಗೆ ತರಲಾಗುತ್ತಿದೆ' ಎಂದು ಉಲ್ಲೇಖಿಸಲಾಗಿದೆ.
ಆದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಹಾಗೂ ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿನ ಸರಕಾರಿ ಸ್ವತ್ತುಗಳನ್ನು ಮೇಲ್ಕಂಡ ವಿಧೇಯಕದ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ಉದ್ದೇಶಿತ ವಿಧೇಯಕದ ಮೇಲೆ ನಾಳೆ ವಿಧಾನಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆಗಳಿದ್ದು, ಆ ಬಳಿಕ ಅಂಗೀಕಾರ ಆಗಬೇಕಾಗಿದೆ.





