ಆರೋಗ್ಯ ಸಂಜೀವಿನಿ ಜಾರಿಗೆ ಪಾಲಿಕೆ ನೌಕರರ ಪಟ್ಟು
ಬೆಂಗಳೂರು, ಸೆ.14: ರಾಜ್ಯ ಸರಕಾರ ಜಾರಿಗೆ ತಂದಿರುವ ‘ಕರ್ನಾಟಕ ಆರೋಗ್ಯ ಸಂಜೀವಿನಿ ಯೋಜನೆ’ಯಲ್ಲಿ ಕೈಬಿಟ್ಟಿರುವ ಮಹಾನಗರ ಪಾಲಿಕೆ ನೌಕರರನ್ನು ಸೇರಿಸುವಂತೆ ಆಗ್ರಹಿಸಿ ರಾಜ್ಯದ ವಿವಿಧೆಡೆ ಧರಣಿ ನಡೆಸಲಾಯಿತು.
ಬುಧವಾರ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ನೇತೃತ್ವದಲ್ಲಿ ಬೆಂಗಳೂರು ಮಹಾನಗರ ಪಾಲಿಕೆ, ಮೈಸೂರು, ಬೆಳಗಾವಿ ಮತ್ತು ಮಂಗಳೂರು ಸೇರಿ ರಾಜ್ಯದ 10 ನಗರ ಪಾಲಿಕೆಯಲ್ಲಿ ಅಧಿಕಾರಿಗಳು, ನೌಕರರು ಮತ್ತು ಪೌರಕಾರ್ಮಿಕರು ಧರಣಿ ನಡೆಸಿ ಸರಕಾರ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎ.ಅಮೃತ್‍ರಾಜ್, ವಿವಿಧ ಪಾಲಿಕೆಗಳಲ್ಲಿ ಅಂದಾಜು 2 ಲಕ್ಷ ನೌಕರರು ದುಡಿಯುತ್ತಿದ್ದು, ಪ್ರತಿನಿತ್ಯ ತೆರಿಗೆ ವಸೂಲಾತಿ, ಸ್ವಚ್ಛತೆ, ನಗರ ಅಭಿವೃದ್ಧಿ ಕಾಮಗಾರಿಗಳು, ಕೋವಿಡ್ ನಿಯಂತ್ರಿಸುವ ಕೆಲಸ ಹಾಗೂ ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸುವುದು ಸೇರಿ ಆಡಳಿತಾತ್ಮಕ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.
ಕೆಲಸದ ಒತ್ತಡದಿಂದ ಮಾನಸಿಕ ಮತ್ತು ದೈಹಿಕವಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆದ್ದರಿಂದ, ನೌಕರರಿಗೆ ಮತ್ತು ಅವರ ಕುಟುಂಬದ ಸದಸ್ಯರಿಗೆ ಅನ್ವಯವಾಗುವಂತೆ ಈ ಯೋಜನೆಯ ಸೌಲಭ್ಯ ಕಲ್ಪಿಸಬೇಕೆಂದು ಅವರು ಆಗ್ರಹಿಸಿದರು.
ಆರೋಗ್ಯ ಇಲಾಖೆಯಿಂದ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ಒಳರೋಗಿ, ಹೊರರೋಗಿ ವೈದ್ಯಕೀಯ ಚಿಕಿತ್ಸೆ, ವಾರ್ಷಿಕ ವೈದ್ಯಕೀಯ ತಪಾಸಣೆ ಮತ್ತು 19 ಗಂಭೀರ ಕಾಯಿಲೆಗಳಿಗೆ ಸರಕಾರ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಸರಕಾರಿ ನೌಕರರಿಗೆ ಉಚಿತವಾಗಿ ಚಿಕಿತ್ಸೆ ಸಿಗಲಿದೆ.
ಈ ಯೋಜನೆಗೆ ಪಾಲಿಕೆ ನೌಕರರು ಒಳಪಡುವುದಿಲ್ಲ ಎಂದು ಸರಕಾರ ಹೇಳುತ್ತಿರುವುದು ಸರಿಯಲ್ಲ. ಹಾಗಾಗಿ, ಇದನ್ನು ಮರು ಪರಿಶೀಲಿಸಿ ಈ ಯೋಜನೆಯಡಿ ನಮ್ಮನ್ನು ಸೇರಿಸುವಂತೆ ಒತ್ತಾಯಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲಾಯಿತು ಎಂದರು.







