ಅಗ್ನಿಪಥ್ ವಿವಾದ: ಪಂಜಾಬ್ ಮುಖ್ಯಮಂತ್ರಿಯಿಂದ ಯೋಜನೆಗೆ ಬೆಂಬಲದ ಭರವಸೆ

ಚಂಡಿಗಡ,ಸೆ.14: ಸ್ಥಳೀಯ ಆಡಳಿತದಿಂದ ಬೆಂಬಲದ ಕೊರತೆಯಿದೆ ಎಂದು ಸೇನೆಯು ಹೇಳಿರುವ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು ‘ಅಗ್ನಿಪಥ್’ ನೇಮಕಾತಿ ರ್ಯಾಲಿಗಳಿಗೆ ಸಂಪೂರ್ಣ ಬೆಂಬಲವನ್ನು ನೀಡುವಂತೆ ಜಿಲ್ಲಾಡಳಿತಗಳಿಗೆ ನಿರ್ದೇಶನ ನೀಡಿದ್ದಾರೆ.
ಯೋಧರನ್ನು ನೇಮಕಾತಿ ಮಾಡಿಕೊಳ್ಳಲು ರ್ಯಾಲಿಗಳನ್ನು ಆಯೋಜಿಸಲು ಸೇನೆಗೆ ಸಂಪೂರ್ಣ ಬೆಂಬಲವನ್ನು ಒದಗಿಸುವಂತೆ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿರುವ ಮಾನ್,ಯಾವುದೇ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ರಾಜ್ಯದಿಂದ ಸೇನೆಗೆ ಗರಿಷ್ಠ ಅಭ್ಯರ್ಥಿಗಳ ಭರ್ತಿಗಾಗಿ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಹೇಳಿದ್ದಾರೆ.
ಜಲಂಧರ್‌ನಲ್ಲಿಯ ಸೇನೆಯ ವಲಯ ನೇಮಕಾತಿ ಅಧಿಕಾರಿ ಮೇ.ಜ.ಶರದ್ ಬಿಕ್ರಮಸಿಂಗ್ ಅವರು ಸೆ.8ರಂದು ಪಂಜಾಬಿನ ಮುಖ್ಯ ಕಾರ್ಯದರ್ಶಿ ವಿ.ಕೆ.ಜನುಜಾ ಹಾಗೂ ಪ್ರಧಾನ ಕಾರ್ಯದರ್ಶಿ (ಉದ್ಯೋಗ ಸೃಷ್ಟಿ,ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ) ಕುಮಾರ್ ರಾಹುಲ್ ಅವರಿಗೆ ಪತ್ರವೊಂದನ್ನು ಬರೆದಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಈ ಭರವಸೆಯನ್ನು ನೀಡಿದ್ದಾರೆ.
ರ್ಯಾಲಿಗಳನ್ನು ಸಂಘಟಿಸುವುದಕ್ಕೆ ತಮಗೆ ಸ್ಥಳೀಯ ಆಡಳಿತದಿಂದ ಸಾಕಷ್ಟು ಬೆಂಬಲ ದೊರೆಯುತ್ತಿಲ್ಲ. ರಾಜ್ಯ ಸರಕಾರದಿಂದ ನಿರ್ದೇಶನಗಳ ಕೊರತೆ ಅಥವಾ ಹಣದ ಅಭಾವದಿಂದಾಗಿ ಅವರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಸಿಂಗ್ ಪತ್ರದಲ್ಲಿ ಬರೆದಿದ್ದರು.
ಇಂತಹ ರ್ಯಾಲಿಗಳನ್ನು ನಡೆಸಲು ಅಗತ್ಯಗಳನ್ನು ಪಟ್ಟಿ ಮಾಡಿದ್ದ ಅವರು,ಪೊಲೀಸ್ ನೆರವು,ವೈದ್ಯಕೀಯ,ಆಹಾರ ಮತ್ತು ನೀರಿನ ವ್ಯವಸ್ಥೆಗಳು ಹಾಗೂ ಟಾಯ್ಲೆಟ್‌ಗಳು ರ್ಯಾಲಿ ಸ್ಥಳದಲ್ಲಿರುವುದು ಅಗತ್ಯವಾಗಿದೆ ಎಂದು ತಿಳಿಸಿದ್ದರು.
ಇತರ ರಾಜ್ಯಗಳು ರ್ಯಾಲಿಗಳಿಗೆ ನೀಡುತ್ತಿರುವ ಆಡಳಿತಾತ್ಮಕ ಮತ್ತು ಹಣಕಾಸು ಬೆಂಬಲ ಪ್ರಶಂಸಾರ್ಹವಾಗಿದೆ ಎಂದೂ ಬೆಟ್ಟು ಮಾಡಿದ್ದ ಸಿಂಗ್,ಇತರ ರಾಜ್ಯಗಳಲ್ಲಿಯ ವ್ಯವಸ್ಥೆಗಳ ಕೆಲವು ಚಿತ್ರಗಳನ್ನು ತಾನು ಕಳುಹಿಸುವುದಾಗಿ ತಿಳಿಸಿದ್ದರು.
ಸರಕಾರವು ತನ್ನ ಸ್ಪಷ್ಟ ಬದ್ಧತೆಯನ್ನು ವ್ಯಕ್ತಪಡಿಸದಿದ್ದರೆ ಪಂಜಾಬಿನಲ್ಲಿ ಭವಿಷ್ಯದ ಎಲ್ಲ ರ್ಯಾಲಿಗಳನ್ನು ಮತ್ತು ಕಾರ್ಯವಿಧಾನಗಳನ್ನು ಸ್ಥಗಿತಗೊಳಿಸುವಂತೆ ಸೇನಾ ಮುಖ್ಯಕಚೇರಿಗೆ ತಿಳಿಸುತ್ತೇವೆ ಮತ್ತು ಪರ್ಯಾಯವಾಗಿ ನೆರೆಯ ರಾಜ್ಯಗಳಲ್ಲಿ ರ್ಯಾಲಿಗಳನ್ನು ನಡೆಸುತ್ತೇವೆ ಎಂದು ಸಿಂಗ್ ಪತ್ರದಲ್ಲಿ ಖಡಕ್ಕಾಗಿ ತಿಳಿಸಿದ್ದರು. ಲೂಧಿಯಾನಾ ಮತ್ತು ಗುರುದಾಸಪುರಗಳಲ್ಲಿ ರ್ಯಾಲಿಗಳನ್ನು ಜಿಲ್ಲಾಡಳಿತದ ಸಂಪೂರ್ಣ ಬೆಂಬಲದೊಂದಿಗೆ ನಡೆಸಲಾಗಿದೆ ಎಂದು ಸೇನಾ ಮೂಲಗಳು ನಂತರ ಸ್ಪಷ್ಟನೆಯನ್ನು ನೀಡಿವೆ. ನೇಮಕಾತಿ ರ್ಯಾಲಿಗಳನ್ನು ಪಂಜಾಬಿನಿಂದ ಇತರ ಯಾವುದೇ ರಾಜ್ಯಕ್ಕೆ ಸ್ಥಳಾಂತರಿಸುವ ಯೋಜನೆಯಿಲ್ಲ ಎಂದು ಅವು ಒತ್ತಿ ಹೇಳಿವೆ.







