ಉಪ್ಪುನೀರು ತಡೆ ಅಣೆಕಟ್ಟು ನಿರ್ಮಾಣಕ್ಕೆ 311.25 ಕೋಟಿ ರೂ. ಅನುಮೋದನೆ: ಶಾಸಕ ರಘುಪತಿ ಭಟ್

ಉಡುಪಿ, ಸೆ.14: ಬ್ರಹ್ಮಾವರ ತಾಲೂಕಿನ ಎರಡು ಭಾಗದಲ್ಲಿ ಸೀತಾನದಿಗೆ ಸೇತುವೆ ಸಹಿತ ಉಪ್ಪು ನೀರು ತಡೆ ಅಣೆಕಟ್ಟು ನಿರ್ಮಿಸುವ 311.25 ಕೋಟಿ ಮೊತ್ತದ ಯೋಜನೆಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನು ಮೋದನೆ ನೀಡಲಾಗಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿ ಹಾಗೂ ಕುಂದಾಪುರ ವಿಧಾನಸಭಾ ಕ್ಷೇತ್ರವನ್ನು ಹಾದು ಹೋಗುವ ಸೀತಾನದಿಗೆ ಬ್ರಹ್ಮಾವರ ತಾಲೂಕಿನ ಹಂದಾಡಿ-ಕುಮ್ರಗೋಡುವಿನಿಂದ ಬಾರ್ಕೂರು- ಬೆಣ್ಣೆಕುದ್ರು ಮಧ್ಯದಲ್ಲಿ ಸೀತಾನದಿಗೆ ಅಡ್ಡಲಾಗಿ ಸೇತುವೆ ಸಹಿತ ಉಪ್ಪುನೀರು ತಡೆ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಗೆ 160.25 ಕೋಟಿ ಹಾಗೂ ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ-ಮೂಡಹಡು ಮತ್ತು ಬಾರ್ಕೂರು - ಬೆಣ್ಣೆಕುದ್ರು ಮಧ್ಯದಲ್ಲಿ ಸೀತಾನದಿಗೆ ಅಡ್ಡಲಾಗಿ ಸೇತುವೆ ಸಹಿತ ಉಪ್ಪುನೀರು ತಡೆ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿ 151.00 ಕೋಟಿ ಮೊತ್ತಕ್ಕೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.
ಈ ಯೋಜನೆಯಿಂದಾಗಿ ಈ ಭಾಗದ ಸಾವಿರಾರು ಕುಟುಂಬಗಳಿಗೆ ಶುದ್ಧ ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಜೊತೆಯಲ್ಲಿ ಸಾವಿರಾರು ಹೆಕ್ಟೇರು ಕೃಷಿ ಭೂಮಿಗಳಿಗೆ ಉಪ್ಪುನೀರಿನಿಂದ ಹಾನಿ ಉಂಟಾಗುವುದನ್ನು ತಡೆಯ ಬಹುದು. ಈ ಭಾಗದ ಪ್ರಮುಖ ಬೇಡಿಕೆಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಸಣ್ಣ ನೀರಾವರಿ ಸಚಿವ ಕೆ.ಮಾಧುಸ್ವಾಮಿ ಅವರಿಗೆ ಶಾಸಕ ರಘುಪತಿ ಭಟ್ ಅಭಿನಂದನೆ ಸಲ್ಲಿಸಿದ್ದಾರೆ.





