ಬಲವಂತದ ಮತಾಂತರ: ಕ್ರಮ ಕೈಗೊಳ್ಳಲು ವಿಧಾನಮಂಡಲದ ಹಿಂ.ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ ಶಿಫಾರಸ್ಸು

ಬೆಂಗಳೂರು, ಸೆ.14: ರಾಜ್ಯದಲ್ಲಿ ಬಲವಂತವಾಗಿ, ಒತ್ತಾಯಪೂರ್ವಕವಾಗಿ ಮತ್ತು ಆಸೆ ಆಮಿಷಗಳನ್ನು ಒಡ್ಡಿ ಸಾರ್ವಜನಿಕರಿಗೆ ಬೇರೆ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಪ್ರಕರಣಗಳ ಬಗ್ಗೆ ಸಂಬಂಧಪಟ್ಟವರಿಂದ ಅಥವಾ ಸಾರ್ವಜನಿಕರಿಂದ ದೂರುಗಳು ಬಂದಲ್ಲಿ ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯು ರಾಜ್ಯ ಸರಕಾರಕ್ಕೆ ಶಿಫಾರಸ್ಸು ಮಾಡಿದೆ.
ಶಾಸಕ ಎಸ್.ಕುಮಾರ್ ಬಂಗಾರಪ್ಪ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ರಾಜ್ಯ ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯು ಬುಧವಾರ ವಿಧಾನಸಭೆಯಲ್ಲಿ ಮಂಡಿಸಿದ ತನ್ನ ಮೂರನೆ ವರದಿಯಲ್ಲಿ ಈ ಶಿಫಾರಸ್ಸು ಮಾಡಲಾಗಿದೆ.
ಅಧಿಕೃತವಾಗಿ ಮತ್ತು ಕಾನೂನಾತ್ಮಕವಾಗಿ ನಡೆಸುತ್ತಿರುವಂತಹ ಚರ್ಚ್‍ಗಳಿಗೆ ಯಾವುದೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಹಾಗೂ ಮಾಹಿತಿಯನ್ನು ಸಮಾಜ ಕಲ್ಯಾಣ, ಕಂದಾಯ, ಒಳಾಡಳಿತ ಮತ್ತು ಕಾನೂನು ಇಲಾಖೆಗಳಿಂದ ಪಡೆದು ಕ್ರೋಡೀಕರಿಸಿ ವರದಿಯನ್ನು ನೀಡಬೇಕೆಂದು ಸಮಿತಿಯು ಸೂಚಿಸಿದೆ.
ರಾಜ್ಯದಲ್ಲಿರುವ ಅಧಿಕೃತ ಮತ್ತು ಅನಧಿಕೃತ ಕ್ರಿಶ್ಚಿಯನ್ ಮಿಷನರಿಗಳ ಹಾಗೂ ರಾಜ್ಯದಲ್ಲಿ ಬಲವಂತವಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗುತ್ತಿರುವುದರ ಕುರಿತು ಬಂದಿರುವ ದೂರುಗಳ ಬಗ್ಗೆ ಸಮಿತಿಯು ಇಲಾಖಾಧಿಕಾರಿಗಳಿಂದ ಮಾಹಿತಿ ಬಯಸಿತು.
ರಾಜ್ಯದಲ್ಲಿ ಒಟ್ಟು ಅಂದಾಜು 1,790 ಚರ್ಚ್‍ಗಳಿದ್ದು, ಕೆಲವೊಂದು ಕಡೆ ಚರ್ಚ್‍ಗಳ ಮಾಹಿತಿಯನ್ನು ಪಡೆಯುವಂತಹ ಸಂದರ್ಭದಲ್ಲಿ ಮಾಹಿತಿಯನ್ನು ನೀಡಲು ಒಪ್ಪದೆ ಇಲಾಖೆಯ ಅಧಿಕಾರಿಗಳ ಮೇಲೆ ಗಲಾಟೆ ಮಾಡಿದಂತಹ ಉದಾಹರಣೆಗಳು ಇದೆಯೆಂದು ಸಮಿತಿಯ ಗಮನಕ್ಕೆ ತರಲಾಯಿತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಸಮಿತಿಯು ಸಭೆಯಲ್ಲಿ ಹಾಜರಿದ್ದ ಕಂದಾಯ ಇಲಾಖೆಯ ಅಧಿಕಾರಿಗಳು (ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳು) ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖಾಧಿಕಾರಿಗಳಿಗೆ ಒಂದು ತಿಂಗಳೊಳಗಾಗಿ ರಾಜ್ಯದ ಅಧಿಕೃತ ಮತ್ತು ಅನಧಿಕೃತ ಚರ್ಚ್‍ಗಳ ಮಾಹಿತಿಯನ್ನು ನೀಡಬೇಕೆಂದು ಸಮಿತಿಯು ಸೂಚಿಸಿದೆ.







