ಚರ್ಮಗಂಟು ರೋಗದಿಂದ ರೈತರಲ್ಲಿ ಭೀತಿ,ರಾಜಸ್ಥಾನ ಅತ್ಯಂತ ಪೀಡಿತ

IMAGE: (HT_PRINT)
ಹೊಸದಿಲ್ಲಿ,ಸೆ.14: ಮಾರಣಾಂತಿಕ ಚರ್ಮಗಂಟು ರೋಗದ ಸೋಂಕಿಗೆ ತುತ್ತಾದ ತಮ್ಮ ಜಾನುವಾರುಗಳು ಗದ್ದೆಗಳಲ್ಲಿ ಕುಸಿದು ಬೀಳುತ್ತಿರುವ ಭೀಕರ ದೃಶ್ಯಗಳಿಗೆ ದೇಶಾದ್ಯಂತ ರೈತರು ಸಾಕ್ಷಿಯಾಗುತ್ತಿದ್ದಾರೆ. ರಾಜಸ್ಥಾನವು ಅತ್ಯಂತ ಪೀಡಿತ ರಾಜ್ಯವಾಗಿದ್ದು,ಜುಲೈನಿಂದೀಚಿಗೆ ಅಲ್ಲಿ 50,000ಕ್ಕೂ ಅಧಿಕ ಜಾನುವಾರುಗಳು ಈ ರೋಗಕ್ಕೆ ಬಲಿಯಾಗಿವೆ. ಅಲ್ಲಿ ಪ್ರತಿದಿನ 600-700 ಜಾನುವಾರುಗಳು ಸಾಯುತ್ತಿವೆ.
ವೈರಸ್ನಿಂದ ಉಂಟಾಗುವ ಈ ರೋಗವು ಜನರ ಮೇಲೆ ಪರಿಣಾಮವನ್ನುಂಟು ಮಾಡುವುದಿಲ್ಲ. ನೊಣಗಳು ಅಥವಾ ಸೊಳ್ಳೆಗಳಿಂದ ಈ ರೋಗವು ಹರಡುತ್ತದೆ.
ಸೋಂಕಿನ ಮೊದಲ ಪ್ರಕರಣ ಎಪ್ರಿಲ್ನಲ್ಲಿ ಗುಜರಾತಿನ ಕಛ್ ಪ್ರದೇಶದಲ್ಲಿ ವರದಿಯಾಗಿತ್ತು. ಜುಲೈನಿಂದ 75,000ಕ್ಕೂ ಅಧಿಕ ಜಾನುವಾರುಗಳು ಈ ರೋಗದಿಂದಾಗಿ ಮೃತಪಟ್ಟಿವೆ.
2025ರ ವೇಳೆಗೆ ಎಲ್ಲ ಜಾನುವಾರುಗಳಿಗೆ ಲಸಿಕೆ ನೀಡಲು ಸರಕಾರವು ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಳೆದ ವಾರ ಹೇಳಿದ್ದರು.
ಡ್ರೋನ್ ದೃಶ್ಯಾವಳಿಗಳು ರಾಜಸ್ಥಾನ ಮತ್ತು ಗುಜರಾತಿನಲ್ಲಿ ಸೋಂಕುಪೀಡಿತ ಜಾನುವಾರುಗಳ ಭೀಕರ ಚಿತ್ರಗಳನ್ನು ತೋರಿಸಿವೆ. ಜುಲೈನಿಂದೀಚಿಗೆ ಎಂಟು ರಾಜ್ಯಗಳಲ್ಲಿ ರೋಗವು ಕ್ಷಿಪ್ರವಾಗಿ ಹರಡಿದೆ.
ಬಾಧಿತ ರಾಜ್ಯಗಳಲ್ಲಿ ಎಲ್ಲ ಜಾನುವಾರುಗಳಿಗೆ ‘ಗೋಟ್ ಪಾಕ್ಸ್ ವ್ಯಾಕ್ಸಿನ್’ ನೀಡಲಾಗುತ್ತಿದ್ದು,ಇದು ಚರ್ಮಗಂಟು ರೋಗದ ವಿರುದ್ಧ ಶೇ.100ರಷ್ಟು ಪರಿಣಾಮಕಾರಿ ಲಸಿಕೆಯಾಗಿದೆ ಎಂದು ಸರಕಾರವು ಹೇಳಿದೆ.
ಮಹಾರಾಷ್ಟ್ರದಲ್ಲಿ ವಿಶೇಷ ಕಾರ್ಯಪಡೆಯನ್ನು ರಚಿಸಲಾಗಿದ್ದು, ಜಳಗಾಂವ ಮತ್ತು ಅಮರಾವತಿಯಂತಹ ಪ್ರದೇಶಗಳ ಮೇಲೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಲಾಗುತ್ತಿದೆ.
ಸೋಂಕಿತ ಜಾನುವಾರುಗಳು ರೋಗವನ್ನು ಹರಡುವುದನ್ನು ತಡೆಯುವುದು ಹೇಗೆ ಎನ್ನುವುದು ಮತ್ತು ಮೃತ ಜಾನುವಾರುಗಳ ಕಳೇಬರಗಳನ್ನು ಸುರಕ್ಷಿತವಾಗಿ ವಿಲೇವಾರಿ ಮಾಡುವುದು ಈಗ ಹೆಚ್ಚಿನ ಪ್ರಾಮುಖ್ಯತೆ ಪಡೆದುಕೊಂಡಿದೆ.
ಸೋಂಕಿತ ಜಾನುವಾರುಗಳಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ,ಸಂತಾನಶಕ್ತಿಯು ಕ್ಷೀಣಿಸುತ್ತದೆ ಮತ್ತು ಹಾಲು ನೀಡುವುದೂ ಕಡಿಮೆಯಾಗುತ್ತದೆ. ಇವೆಲ್ಲವೂ ರೈತರಿಗೆ ತೀವ್ರ ಆರ್ಥಿಕ ತೊಂದರೆಗಳಿಗೆ ಕಾರಣವಾಗುತ್ತಿವೆ. ಈ ಕಾಯಿಲೆಯ ವಿರುದ್ಧ ಮೇಡ್-ಇನ್-ಇಂಡಿಯಾ ಲಸಿಕೆಯನ್ನು ಅಭಿವೃದ್ಧಿಗೊಳಿಸಲಾಗಿದ್ದು,3-4 ತಿಂಗಳುಗಳಲ್ಲಿ ಬಳಕೆಗೆ ಲಭ್ಯವಾಗುವ ಸಾಧ್ಯತೆಯಿದೆ.
Watch: Video of thousands of dead cows in the deserts of Rajasthan due to #lumpyskindisease #LumpyVirus pic.twitter.com/PFqA30cYmG
— NewsDrum (@thenewsdrum) September 11, 2022







